ಗಣೇಶ ಮೂರ್ತಿ ವಿಸರ್ಜನೆಗೆ ತೆಪ್ಪ ಬಳಕೆಗೆ ಮಾರ್ಗಸೂಚಿಗಳು
ಶಿವಮೊಗ್ಗ, ಸೆಪ್ಟೆಂಬರ್ 18; ಶಿವಮೊಗ್ಗ ಜಿಲ್ಲಾಡಳಿತ ಗಣೇಶ ಮೂರ್ತಿ ವಿಸರ್ಜಿಸಲು ತೆಪ್ಪ ಬಳಕೆ ಮಾಡುವ ಕುರಿತು ಮಾರ್ಗಸೂಚಿ ಹೊರಡಿಸಿದೆ. 2016ರಲ್ಲಿ ತುಂಗಭದ್ರಾ ನದಿಯಲ್ಲಿ ತೆಪ್ಪ ಮುಳುಗಿ 12 ಜನರು ಬಲಿಯಾದ ಘಟನೆ ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ.
ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್. ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ದಿನಾಂಕ18/9/2023ರಂದು ಗಣೇಶ ಹಬ್ಬ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ನಂತರ ವಿವಿಧ ದಿನಾಂಕಗಳಂದು ಹೊಳೆ ನದಿ/ ಕೆರೆಗಳು/ ಹಿನ್ನೀರು ಪ್ರದೇಶದಲ್ಲಿ ಗಣೇಶ ಮೂರ್ತಿ ವಿಸರ್ಜಿಸಲು ತೆಪ್ಪ ಬಳಕೆ ಮಾಡಿದಲ್ಲಿ 3-4 ಜನರಿಗೆ ಮಾತ್ರ ತೆಪ್ಪ ಬಳಸಲು ಅವಕಾಶ ನೀಡಲಾಗಿದೆ.

ತೆಪ್ಪದ ಮೂಲಕ ಗಣೇಶ ವಿಸರ್ಜನೆ ಮಾಡುವ ವೇಳೆ ಸಂಭವಿಸಬಹುದಾದ ದುರ್ಘಟನೆಗಳನ್ನು ತಪ್ಪಿಸಲು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರ ಶಿಫಾರಸ್ಸಿನ ಮೇರೆಗೆ ಮುಂಜಾಗ್ರತ ಕ್ರಮವಾಗಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಗರ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ತೆಪ್ಪ ಬಳಕೆ ಮಾಡಿದ್ದಲ್ಲಿ 3-4 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.
ಗಣೇಶ ಮೂರ್ತಿ ವಿಸರ್ಜನೆ ಮಾಡುವ ಸಂದರ್ಭದಲ್ಲಿ ತೆಪ್ಪದಲ್ಲಿ ಇರುವವರು ಕಡ್ಡಾಯವಾಗಿ ಲೈಫ್-ಜಾಕೆಟ್ ಧರಿಸಬೇಕು, ನುರಿತ ಈಜುಗಾರರು ಇದ್ದು ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಬಹುದಾಗಿದೆ ಎಂದು ಸೂಚನೆ ನೀಡಿದ್ದಾರೆ.
ಹಾಡೋನಹಳ್ಳಿ ತೆಪ್ಪ ದುರಂತ; ಪ್ರತಿವರ್ಷ ಗಣೇಶ ಚತುರ್ಥಿಯ ಸಮಯದಲ್ಲಿ ದೇಶಾದ್ಯಂತ ಸಂಭ್ರಮ ಮನೆ ಮಾಡಿರುತ್ತದೆ. ಆದರೆ ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿಯಲ್ಲಿ ಸಂಭ್ರಮದ ಬದಲು ಸೂತಕದ ಛಾಯೆ ಆವರಿಸುತ್ತದೆ. ಗ್ರಾಮದ ಎಷ್ಟೋ ಮನೆಗಳಲ್ಲಿ ಗಣೇಶ ಚತುರ್ಥಿ ಆಚರಣೆಯನ್ನೇ ನಿಲ್ಲಿಸಲಾಗಿದೆ. ಇದಕ್ಕೆ ಕಾರಣವಾಗಿರುವುದು ತೆಪ್ಪ ದುರಂತ.
2016ನೇ ಸೆಪ್ಟೆಂಬರ್ 7ರಂದು ಹಾಡೋನಹಳ್ಳಿಯಲ್ಲಿ ಸಂಭ್ರಮದಿಂದ ಗಣೇಶೋತ್ಸವ ಆಚರಣೆ ಮಾಡಲಾಗಿತ್ತು. ಬಳಿಕ ಊರ ಹೊರವಲಯದ ತುಂಗಭದ್ರಾ ನದಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಯುವಕರು ತೆರಳಿದ್ದರು. ಆಗ ಸಣ್ಣ ತೆಪ್ಪದೊಳಗೆ ಯುವಕರು ಕಿಕ್ಕಿರಿದು ಸೇರಿದ್ದರು.
ಮುಂಗಾರು ಅವಧಿಯಲ್ಲಿ ತುಂಬಿ ಹರಿಯುತ್ತಿದ್ದ ತುಂಗಭದ್ರಾ ನದಿಯ ಮಧ್ಯಭಾಗಕ್ಕೆ ಗಣೇಶ ಮೂರ್ತಿ ವಿಸರ್ಜನೆ ಮಾಡಲು ಹೋದರು. ಈ ಸಂದರ್ಭದಲ್ಲಿ ತೆಪ್ಪ ಮುಗುಚಿತು. ಈಜು ಬಲ್ಲವರು ದಡ ಸೇರಿದರು. ಆದರೆ 12 ಜನರು ಈ ದುರಂತದಲ್ಲಿಮೃತಪಟ್ಟರು. ಗ್ರಾಮಸ್ಥರು ನೋಡ ನೋಡುತ್ತಿದ್ದಂತೆ ಈ ದುರಂತ ಸಂಭವಿಸಿತ್ತು.
ತೆಪ್ಪ ದುರಂತದಲ್ಲಿ ಮೃತಪಟ್ಟವರಲ್ಲಿ ಯುವಕರೇ ಹೆಚ್ಚು. ಕುಟುಂಬ ಮುನ್ನಡೆಸಬೇಕಾದವರನ್ನು ಕಳೆದುಕೊಂಡು ಹಲವು ಮನೆಯಲ್ಲಿ ದುಃಖ ತುಂಬಿತು. ಆಪ್ತ ಗೆಳೆಯರನ್ನು ಅನೇಕ ಯುವಕರು ಕಳೆದುಕೊಂಡರು, ಈ ದುರಂತದ ನೆನಪಿನಿಂದ ಹಾಡೋನಹಳ್ಳಿಯಲ್ಲಿ ಇನ್ನೂ ಹೊರ ಬಂದಿಲ್ಲ.
1992ರಲ್ಲಿ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ದೋಣಿ ಮುಳುಗಿ 9 ಜನರು ಮೃತಪಟ್ಟಿದ್ದರು. ಗಣೇಶ ವಿಸರ್ಜನೆ ಸಂದರ್ಭದಲ್ಲಿ ಒಬ್ಬರು, ಇಬ್ಬರು ಮೃತಪಟ್ಟ ಹಲವು ಘಟನೆಗಳು ನಡೆದಿವೆ. ಆದರೆ ಹಾಡೋನಹಳ್ಳಿಯಲ್ಲಿ 12 ಜನರು ಜಲಸಮಾಧಿಯಾದ ಘಟನೆಯನ್ನು ಶಿವಮೊಗ್ಗದ ಜನರು ಮರೆತಿಲ್ಲ.
ಡಿಜೆ ಸಿಸ್ಟಂ ಬಳಕೆ ನಿಷೇಧ; ಸೆಪ್ಟೆಂಬರ್ 18ರಂದು ಗಣೇಶ ಚತುರ್ಥಿ ಹಬ್ಬದ ಆಚರಣೆ ಪ್ರಯುಕ್ತ ವಿವಿಧ ದಿನಾಂಕಗಳಂದು ಗಣೇಶ ವಿಸರ್ಜನೆ ವೇಳೆ ಮುಂಜಾಗ್ರತ ಕ್ರಮವಾಗಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸೆ.18ರಿಂದ ಗಣೇಶೋತ್ಸವ ಆಚರಣೆಗಳು ಪೂರ್ಣಗೊಳ್ಳುವವರೆಗೆ ಹಾಗೂ ಸೆ. 28 ರಿಂದ 30 ರವರೆಗೆ ಈದ್ ಮಿಲಾದ್ ಹಬ್ಬದ ಆಚರಣೆಗಳು ಪೂರ್ಣಗೊಳ್ಳುವವರೆಗೆ ಶಿವಮೊಗ್ಗ ಜಿಲ್ಲೆಯಾದ್ಯಂತ ಡಿಜೆ ಸಿಸ್ಟಂ ಬಳಕೆ ನಿರ್ಬಂಧಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.












Click it and Unblock the Notifications