ಶಿವಮೊಗ್ಗ: ಸಚಿವರಿಂದ ಬೋಧಕ ಸಿಬ್ಬಂದಿ, ಸ್ಟಾಫ್‌ನರ್ಸ್ ನೇಮಕದ ಭರವಸೆ
ಶಿವಮೊಗ್ಗ, ಮೇ 29: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಶಿವಮೊಗ್ಗ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಅವರು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಗೆ ಸಿಬ್ಬಂದಿ ನೇಮಕದ ಭರವಸೆಯನ್ನು ನೀಡಿದ್ದಾರೆ. ಬೋಧಕ ಸಿಬ್ಬಂದಿ ಮತ್ತು ಸ್ಟಾಫ್‌ನರ್ಸ್‌ಗಳ ನೇಮಕಾತಿ ಶೀಘ್ರವೇ ನಡೆಯುವ ನಿರೀಕ್ಷೆ ಇದೆ.
ಸಚಿವರು ಶಿವಮೊಗ್ಗದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಗೆ ಭೇಟಿ ನೀಡಿದರು. ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದರು. ಬೇಡಿಕೆಗಳನ್ನು ಆಲಿಸಿದರು.

ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, "ಶಿವಮೊಗ್ಗದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಗೆ ಬೋಧಕ ಸಿಬ್ಬಂದಿ, ಆಸ್ಪತ್ರೆಗೆ ಸ್ಟಾಫ್‌ನರ್ಸ್ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ತಿಳಿಸಿದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ. ಪ್ರಶಾಂತ ಕೆಕೊಡ ಮಾತನಾಡಿ, "ಕಾಲೇಜಿನಲ್ಲಿ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಸೇರಿದಂತೆ ಬೋಧಕ ಸಿಬ್ಬಂದಿಗಳ ಕೊರತೆ ಇದೆ. ಆದ ಕಾರಣ ಬಿಎಎಂಎಸ್ ವಿದ್ಯಾರ್ಥಿಗಳ ಮಂಜೂರು ಸೀಟು 60 ಇದ್ದು, ದಾಖಲು ಸಂಖ್ಯೆ 33ಕ್ಕೆ ಇಳಿಕೆಯಾಗಿದೆ" ಎಂದರು.
ಆಯುರ್ವೇದ ಬೋಧನಾ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಕೊರತೆ ಸಹ ಇದ್ದು, ಇವರನ್ನು ನೇಮಕ ಮಾಡುವಂತೆ ಹಾಗೂ ಹೊಸದಾಗಿ ಪಿಜಿ ಕೋರ್ಸ್ ಆರಂಭಿಸಲು ಜಾಗದ ಅವಶ್ಯಕತೆ ಇದ್ದು, ಸ್ಥಳಾವಕಾಶ ಮಾಡಿಕೊಡುವಂತೆ ಸಚಿವರಿಗೆ ಮನವಿ ಸಲ್ಲಿಕೆ ಮಾಡಲಾಯಿತು.
ಸಚಿವರ ಜೊತೆ ವಿದ್ಯಾರ್ಥಿಗಳು ಮಾತನಾಡಿ, ಬಾಲಕರ ಹಾಸ್ಟೆಲ್ ಇಲ್ಲ. ಆದ್ದರಿಂದ ಸಮಸ್ಯೆಯಾಗುತ್ತಿದೆ. ಶೀಘ್ರದಲ್ಲಿ ಹಾಸ್ಟೆಲ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು ಹಾಗೂ ಕ್ಯಾಂಟಿನ್, ವಸ್ತು ಸಂಗ್ರಹಾಲಯ, ಆಡಿಟೋರಿಯಂ, ಇಂಟರ್ನ್‌ಗಳಿಗೆ ಸ್ಟೈಫಂಡ್ ಹೆಚ್ಚಳ ಮಾಡುಂತೆಯೂ ಕೋರಿಕೆ ಸಲ್ಲಿಸಿದರು. ವಿದ್ಯಾರ್ಥಿ ವೇತನ ಪಡೆಯುವಲ್ಲಿ ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ಸಮಸ್ಯೆ ಇದ್ದು, ಸರಿಪಡಿಸುವಂತೆ ಮನವಿ ಮಾಡಿದರು.
ಸಚಿವರು ಮಾತನಾಡಿ, "ಬೋಧಕ ಸಿಬ್ಬಂದಿ, ಸ್ಟಾಫ್ ನರ್ಸ್ ನೇಮಕಾತಿ, ಪಿಜಿ ಕೋರ್ಸ್ ಆರಂಭಿಸಲು ಜಾಗ ನೀಡುವ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಜಿಲ್ಲೆಯಲ್ಲಿ 35 ಆಯುಷ್ ಕೇಂದ್ರಗಳಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. ಈ ಕೇಂದ್ರಗಳಿಗೆ ಸಂಬಂಧಿಸಿದಂತೆ ಜಾರಿ ಮಾಡಲಾದ ಹೊಸ ಮಾರ್ಗಸೂಚಿಯನ್ನು ಆಯುಷ್ ಇಲಾಖೆ ಪಾಲನೆ ಮಾಡಬೇಕು" ಎಂದರು.
"ಆಯುರ್ವೇದ ಆಸ್ಪತ್ರೆಗೆ ಹೆಚ್ಚುವರಿ ನೀರಿನ ಸಂಪರ್ಕ ಅಗತ್ಯವಿದ್ದು, ಶೀಘ್ರವೇ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು ಹಾಗೂ ವಿದ್ಯಾರ್ಥಿಗಳ ಬೇಡಿಕೆಗಳನ್ನು ಸಹ ಶೀಘ್ರದಲ್ಲೇ ಪೂರೈಸಲಾಗುವುದು" ಎಂದು ಭರವಸೆ ಕೊಟ್ಟರು.












Click it and Unblock the Notifications