ಶಿವಮೊಗ್ಗ: ವಚನಕಾರ ಅಲ್ಲಮಪ್ರಭು ಜನ್ಮಸ್ಥಳದ ಅಭಿವೃದ್ಧಿಗೆ ₹5 ಕೋಟಿ, ಕ್ಷೇತ್ರದಲ್ಲಿನ ಬಿಎಸ್‌ವೈ ಸಾಧನೆ ಬಣ್ಣಿಸಿದ ಬೊಮ್ಮಾಯಿ
ವಚನಕಾರರಾದ ಅಲ್ಲಮಪ್ರಭು ಜನ್ಮ ಸ್ಥಳವಾದ ಜಿಲ್ಲೆಯ ಶಿಕಾರಿಪುರ ತಾಲೂಕಿನ 'ಬಳ್ಳಿಗಾವೆ' ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗುವುದು, ಕ್ಷೇತ್ರದಲ್ಲಿ ಯಡಿಯೂರಪ್ಪನವರ ಕಾರ್ಯ ಬಣ್ಣಿಸಿದ ಸಿಎಂ ಬಸವರಾಜ ಬೊಮ್ಮಾಯಿ.
ಶಿವಮೊಗ್ಗ, ಮಾರ್ಚ್ 17: 12ನೇ ಶತಮಾನದ ಪ್ರಸಿದ್ಧ ವಚನಕಾರ ಅಲ್ಲಮಪ್ರಭು ಜನ್ಮ ಸ್ಥಳವಾದ ಜಿಲ್ಲೆಯ ಶಿಕಾರಿಪುರ ತಾಲೂಕಿನ 'ಬಳ್ಳಿಗಾವೆ' ಗ್ರಾಮದ ಸಮಗ್ರ ಅಭಿವೃದ್ಧಿಗೆ ಐದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ಜಿಲ್ಲೆಯ ಉಡುತಡಿಯಲ್ಲಿ 'ಶಿವಶರಣೆ ಅಕ್ಕಮಹಾದೇವಿ' ಅವರ 51 ಅಡಿ ಎತ್ತರದ ಪುತ್ಥಳಿ ಅನಾವರಣಗೊಳಿಸಿದರು. ಅಕ್ಷರಧಾಮ ಮಾದರಿಯ ಯಾತ್ರಾ ಸ್ಥಳದ ಉದ್ಘಾಟನೆ ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮಾಡಿದರು. ಇದೇ ವೇಳೆ ಹಲವು ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನಾ ಕಾರ್ಯ ನೇರವೇರಿಸಿ ಬಳಿಕ ಅವರು ಮಾತನಾಡಿದರು.

ಇಲ್ಲಿನ ಮಹಿಳಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕಟ್ಟಡಕ್ಕೆ 10 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಜೊತೆಗೆ ಶಿವನಪಾದವನ್ನು 10 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು ಎಂದರು.
ದೇವರ ನಾಡಾಗಿರುವ ಶಿಕಾರಿಪುರ ತಾಲೂಕು ಮಾದರಿ ಪಟ್ಟಣವಾಗಬೇಕು. ಈ ಶಿಕಾರಿಪುರವನ್ನು ಕೃಷಿ, ಶಿಕ್ಷಣ ಮತ್ತು ಆಧ್ಯಾತ್ಮಿಕ ವಲಯದಲ್ಲಿ ಮಾದರಿ ತಾಲ್ಲೂಕು ಆಗಿಸಬೇಕು ಎಂಬ ಚಿಂತನೆಯಿಂದ ಈ ಎಲ್ಲಾ ಕೆಲಸಗಳನ್ನು ಮಾಡಲಾಗುವುದು.
ಸವಾಲುಗಳನ್ನು ಎದುರಿಸಲು ಶಕ್ತಿ ತುಂಬಿಸುವವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು. ನಮ್ಮದು ತಂದೆ ಮಕ್ಕಳ ಸಂಬಂಧ ನಿರಂತರವಾಗಿರುತ್ತದೆ. ಪ್ರೀತಿ, ವಿಶ್ವಾಸ, ರಾಜಕೀಯ ಮೀರಿದ ಸಂಬಂಧಗಳು ಇದು. ಬಿ.ಎಸ್.ಯಡಿಯೂರಪ್ಪ ಅವರು ಈ ಕ್ಷೇತ್ರಕ್ಕೆ ಮಾಡಿರುವ ಕಾರ್ಯ ಚಿರಸ್ಮರಣೀಯ ಎಂದು ಯಡಿಯೂರಪ್ಪರನ್ನು ಬೊಮ್ಮಾಯಿ ಬಣ್ಣಿಸಿದರು.

ಶರಣ ಕುಲಕ್ಕೆ ಜೀವ ಕೊಟ್ಟ ಅದ್ಭುತ ಶಕ್ತಿ ಈ ಶಿಕಾರಪುರದ ಮಣ್ಣಿಗಿದೆ. ಇಲ್ಲಿಂದ ಹೊರಟ ಶರಣರು, ಕರ್ನಾಟಕದಲ್ಲಿ ಶರಣ ಸಂಸ್ಕೃತಿ, ವಿಚಾರಗಳನ್ನು ಕಾಯಕ ಸಮುದಾಯಗಳ ಜಾಗೃತಿ ಮೂಡಿಸಿ ವಿಚಾರಗಳಿಗೆ ತತ್ವಾದರ್ಶ ನೀಡಿರುವ ಕೇಂದ್ರ ಬಸವ ಕಲ್ಯಾಣದ ಅನುಭವ ಮಂಟಪ. ಶಿಕಾರಿಪುರದಿಂದ ಬಸವ ಕಲ್ಯಾಣದವರೆಗೆ ನಡೆದು ಬಂದ ದಾರಿ ಇದು.12 ನೇ ಶತಮಾನದಲ್ಲಿ ಬದುಕಿನ ದಾರಿ ತೋರಿದವರು ಶಿವಶರಣರು.
ಅಲ್ಲದೇ 21 ನೇ ಶತಮಾನದಲ್ಲಿ 9 ಶತಮಾನಗಳ ನಂತರ ಶಿಕಾರಿಪುರ ವನ್ನು ಬಸವಕಲ್ಯಾಣಕ್ಕೆ ಜೋಡಿಸಿರುವ ಕೆಲಸವನ್ನು ಬಿ.ಎಸ್.ಯಡಿಯೂರಪ್ಪ ಅವರು ಮಾಡಿದ್ದಾರೆ ಎಂದರು. ಅನ್ಯಾಯದ ವಿರುದ್ಧ ಹೋರಾಟ ಮಾಡಿದ ಅವರು ಎಂದೂ ಮುಖ್ಯ ಮಂತ್ರಿಯಾಗಬೇಕೆಂದು ಕನಸನ್ನು ಕಂಡವರಲ್ಲ.
ಯಡಿಯೂರಪ್ಪನವರು ಶಿಕಾರಿಪುರದಲ್ಲಿ ನಿರಂತರವಾಗಿ ದಣಿವರಿಯದೆ ಕೆಲಸ ಮಾಡಿ ಜನರ ಪ್ರೀತಿ- ವಿಶ್ವಾಸ ಸಂಪಾದಿಸಿದರು.
ಅದಮ್ಯ ಆತ್ಮವಿಶ್ವಾಸ ಮತ್ತು ಧೈರ್ಯ ಅವರ ಮೂಲಮಂತ್ರ, ಜಗತ್ತನ್ನೇ ಎದುರು ಹಾಕಿಕೊಳ್ಳಬಲ್ಲ ಶಕ್ತಿ ಅವರಲ್ಲಿದೆ. ಕರ್ನಾಟಕ ಕಟ್ಟುವ ಕೆಲಸ ಮಾಡಿದ್ದಾರೆ. ಉಡುತಡಿಯಿಂದ ಅಕ್ಕಮಹಾದೇವಿ ಶ್ರೀ ಶೈಲದ ಮಲ್ಲಿಕಾರ್ಜುನ ನವರೆಗೆ ಸಾರಿದ್ದ ಸಂದೇಶವನ್ನು ಮುಂದಿನ ಜನಾಂಗಕ್ಕೆ ತಿಳಿಹೇಳುವ ಕೆಲಸವಾಗುತ್ತಿದೆ.
ಬಸವ ಕಲ್ಯಾಣ ಕ್ಕೆ 600 ಕೋಟಿ ರೂ.ಗಳನ್ನು ಒದಗಿಸಿದ್ದು, ಇಲ್ಲಿ ಆಗಿರುವ ಅಭಿವೃದ್ಧಿ ಕಾರ್ಯವನ್ನು ಮುಂದಿನ 10 ಪೀಳಿಗೆ ಸ್ಮರಿಸುತ್ತದೆ. 12 ನೇ ಶತಮಾನದ ಕ್ರಾಂತಿಯನ್ನು ಮುಂದುವರೆಸಿಕೊಂಡು ಹೋಗುವ ಪುಣ್ಯದ ಕೆಲಸವನ್ನು ಕ್ರಾಂತಿ ರೂಪದಲ್ಲಿ ಮಾಡಿದ್ದು ಯಡಿಯೂರಪ್ಪ ಅವರು ಎಂದು ಹೇಳಿದರು.
ನಾಡಿನ ಎಲ್ಲ ವರ್ಗದವರಿಗೂ ನ್ಯಾಯ
ಕನಕದಾಸರ ಕಾಗಿನೆಲೆಗೆ 45 ಕೋಟಿ ರೂ. ಹಣ ಒದಗಿಸಿದರು. ಬಾಡಾ ಕ್ಷೇತ್ರದ ಅಭಿವೃದ್ಧಿಗೆ 14 ಕೋಟಿ ರೂ.ಗಳನ್ನು ನೀಡಿ ಕೋಟೆ, ಅರಮನೆಯ ಅಭಿವೃದ್ಧಿ ಮಾಡಿದ್ದಾರೆ. ವಾಲ್ಮೀಕಿ ಜಯಂತಿ ಆಚರಣೆಗೆ ತೀರ್ಮಾನ ಸೇರಿದಂತೆ ಎಲ್ಲಾ ವರ್ಗದ ಜನಕ್ಕೆ ನ್ಯಾಯ ನೀಡುವ ಸಾಮಾಜಿಕ ಪರಿವರ್ತಕ ಯಡಿಯೂರಪ್ಪನವರು ಮಾಡಿದ್ದಾರೆ. 35 ವರ್ಷಗಳ ಕಾಲ ಅಧಿಕಾರ ಇಲ್ಲದೆ ಹೋರಾಡಿದರು. ಕರ್ನಾಟಕ ರಾಜಕಾರಣದಲ್ಲಿ ನಾಯಕ ಸಮೂಹವನ್ನು ಸೃಷ್ಟಿ ಮಾಡಿದ್ದು ರಾಮಕೃಷ್ಣ ಹೆಗಡೆ ಹಾಗೂ ಯಡಿಯೂರಪ್ಪ ಅವರು ಮಾತ್ರ ಎಂದು ತಿಳಿಸಿದರು.
ಅವರು ನಿವೃತ್ತ ರಾಗುವ ಪ್ರಶ್ನೆಯೇ ಇಲ್ಲ. ಜನರು ಅವರನ್ನು ನಿವೃತ್ತರಾಗಲು ಬಿಡುವುದಿಲ್ಲ. ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಅವರಿಗಿದೆ. ಅವರ ಸೇವೆ ಈ ರಾಜ್ಯಕ್ಕೆ ವಿವಿಧ ರೂಪದಲ್ಲಿ ಸಿಗಲಿದೆ . ನಾಯಕ ತೀರ್ಮಾನಿಸಬಹುದು, ಆದರೆ ಜನರ ಪ್ರೀತಿಯ ಮುಂದೆ ತಲೆಬಾಗಲೇಬೇಕು. ಅನುಭವಿ ಜನನಾಯಕರ ಅವಶ್ಯಕತೆ ರಾಜಕಾರಣಕ್ಕೆ ಇದೆ. ಅವರ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ವಿದೆ. ಸ್ವಾರ್ಥ ರಾಜಕಾರಣದಿಂದ ಪ್ರಯೋಜನವಿಲ್ಲ. ಆದರೆ ನಾಡು ಕಟ್ಟುವ ನಾಯಕರ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಆನಂದಪುರದ ಮುರುಘರಾಜೇಂದ್ರ ಸ್ವಾಮೀಜಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಬಿ.ಎ. ಬಸವರಾಜ, ಶಾಸಕ ಕುಮಾರ್ ಬಂಗಾರಪ್ಪ, ಸಂಸದ ಬಿ.ವೈ ರಾಘವೇಂದ್ರ ಮೊದಲಾದವರು ಉಪಸ್ಥಿತರಿದ್ದರು.












Click it and Unblock the Notifications