ಅಡಿಕೆ ಸುಲಿಯುವ ಯಂತ್ರಕ್ಕೆ ವಿದ್ಯುತ್ ಮೀಟರ್; ಸಚಿವರಿಗೆ ಪತ್ರ
ಶಿವಮೊಗ್ಗ, ನವೆಂಬರ್ 24; ಮಲೆನಾಡು, ಕರಾವಳಿ ಭಾಗದಲ್ಲಿ ಈಗ ಅಡಿಕೆ ಕೊಯ್ಲು ಸಮಯ. ರೈತರು ಅಡಿಕೆ ಸುಲಿಯುವ ಯಂತ್ರವನ್ನು ಬಳಕೆ ಮಾಡುತ್ತಾರೆ. ಇದಕ್ಕೆ ವಿದ್ಯುತ್ ಸಂಪರ್ಕ ಪಡೆಯಲು ಪ್ರತ್ಯೇಕ ಮೀಟರ್ ಹಾಕಿಸಬೇಕು ಎಂಬ ಆದೇಶ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಕುರಿತು ಇಂಧನ ಸಚಿವ ಕೆ. ಜೆ. ಜಾರ್ಜ್‌ಗೆ ಪತ್ರವನ್ನು ಬರೆದಿದ್ದಾರೆ. ರೈತರು 4 ತಿಂಗಳ ಕಾಲ ಉಪಯೋಗಿಸುವ ಅಡಿಕೆ ಸುಲಿಯುವ ಯಂತ್ರಕ್ಕೆ ಪ್ರತ್ಯೇಕ ಮೀಟರ್ ಹಾಕುವ ಅವಶ್ಯಕತೆ ಏನಿದೆ? ಎಂಬ ರೈತರ ಅಹವಾಲನ್ನು ಸಚಿವರಿಗೆ ತಲುಪಿಸಿದ್ದಾರೆ.

ಸಚಿವರ ಪತ್ರದ ವಿವರ; ಶಿವಮೊಗ್ಗ ಜಿಲ್ಲೆಯಲ್ಲಿ ಮುಖ್ಯ ಬೆಳೆ ಅಡಿಕೆಯಾಗಿದ್ದು, ಪ್ರಸ್ತುತ ಅಡಿಕೆ ಬೆಳೆಯು ಕಟಾವು ಪ್ರಕ್ರಿಯೆ ನಡೆಯುತ್ತಿದೆ. ಮಧ್ಯಮ, ಸಣ್ಣ ಮತ್ತು ಅತೀ ಸಣ್ಣ ರೈತರು ಇತ್ತೀಚಿನ ವರ್ಷಗಳಲ್ಲಿ 2 ಬೆಲ್ಟ್ ಅಡಿಕೆ ಸುಲಿಯುವ ಯಂತ್ರವನ್ನು ಗೃಹ ಬಳಕೆಯ ವಿದ್ಯುತ್‌ನಲ್ಲಿ ಬಳಸುತ್ತಿದ್ದು, ಇತ್ತೀಚೆಗೆ ಇಂಧನ ಇಲಾಖೆಯಿಂದ ರೈತರು ಬಳಸುವ ಅಡಿಕೆ ಸುಲಿಯುವ ಯಂತ್ರಕ್ಕೆ ಪ್ರತ್ಯೇಕ ವಿದ್ಯುತ್ ಮೀಟರ್‌ನ್ನು ಅಳವಡಿಸಲು ಸರ್ಕಾರದಿಂದ ಹೊಸ ಆದೇಶ ಹೊರಡಿಸಿರುವುದಾಗಿ ತಿಳಿದು ಬಂದಿರುತ್ತದೆ.
ರೈತರು ಈ ವಿಚಾರವಾಗಿ ತುಂಬಾ ಕಳವಳಗೊಂಡಿರುತ್ತಾರೆ. ಸದರಿ ಅಡಿಕೆ ಸುಲಿಯುವ ಯಂತ್ರವು ವರ್ಷದಲ್ಲಿ 2-3 ತಿಂಗಳು ಮಾತ್ರ ಬಳಕೆಯಾಗುತ್ತದೆ. ಉಳಿದ ಸಮದಲ್ಲಿ ಯಂತ್ರದ ಬಳಕೆಯು ಅವಶ್ಯಕತೆಯಿರುವುದಿಲ್ಲ.
ಆದುದರಿಂದ ಅಡಿಕೆ ಬೆಳೆಯುವ ರೈತರ ಹಿತದೃಷ್ಟಿಯಿಂದ ಪ್ರತ್ಯೇಕ ಮೀಟರ್ ಅಳವಡಿಸುವ ಆದೇಶವನ್ನು ಮರುಪರಿಶೀಲಿಸಿ ಹಿಂಪಡೆಯುವಂತೆ ತಮ್ಮಲ್ಲಿ ಕೋರುತ್ತೇನೆ ಎಂದು ಪತ್ರದಲ್ಲಿ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದ್ದಾರೆ.
ಕಾರ್ಮಿಕರ ಕೊರತೆ ಕಾರಣ ರೈತರು ಅಡಿಕೆ ಸುಲಿಯುವ ಯಂತ್ರ ಬಳಕೆಗೆ ಮಾಡುವುದು ಅನಿವಾರ್ಯವಾಗಿದೆ. ಆದರೆ ಇಷ್ಟು ದಿನ ಮನೆಯ ವಿದ್ಯುತ್ ಸಂಪರ್ಕವನ್ನು ರೈತರು ಬಳಕೆ ಮಾಡುತ್ತಿದ್ದರು.
ಆದರೆ ಈಗ ಅಡಿಕೆ ಸುಲಿಯುವ ಯಂತ್ರಕ್ಕೆ ಪ್ರತ್ಯೇಕ ವಾಣಿಜ್ಯ ಬಳಕೆಯ ಎಲ್‌ಟಿ-5ಎ ಮೀಟರ್ ಅಳವಡಿಸಿಕೊಳ್ಳಬೇಕು ಎಂದು ಇಂಧನ ಇಲಾಖೆ ಹೇಳುತ್ತಿದೆ. ಇದಕ್ಕೂ ಮೊದಲು ಗ್ರಾಮ ಪಂಚಾಯಿತಿಯಿಂದ ಎನ್‌ಒಸಿ ತಂದು ಕೊಡಬೇಕಿದೆ.
ಅಡಿಕೆ ಕಟಾವು ನವೆಂಬರ್‌ನಿಂದ ಜನವರಿ ಅಥವ ಫೆಬ್ರವರಿ ತನಕ ಇರುತ್ತದೆ. ಬಳಿಕ ಅಡಿಕೆ ಸುಲಿಯುವ ಯಂತ್ರ ಬಳಕೆ ಮಾಡುವುದಿಲ್ಲ. ಆದ್ದರಿಂದ ಅದಕ್ಕೆ ಪ್ರತ್ಯೇಕ ಮೀಟರ್ ಏಕೆ ಬೇಕು? ಎಂಬುದು ರೈತರ ಪ್ರಶ್ನೆ.
ಮಾಜಿ ಸಚಿವ, ತೀರ್ಥಹಳ್ಳಿಯ ಶಾಸಕ ಆರಗ ಜ್ಞಾನೇಂದ್ರ ಸಹ ವಿದ್ಯುತ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಡಿಕೆ ಸುಲಿಯುವ ಯಂತ್ರ ಬಳಕೆ ಮಾಡುವ ರೈತರಿಗೆ ಮೆಸ್ಕಾಂ ಕಿರುಕುಳ ನೀಡುತ್ತಿದೆ. ನವೆಂಬರ್ 27ರಂದು ಇದರ ವಿರುದ್ಧ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಉಚಿತ ವಿದ್ಯುತ್ ಕೊಡುತ್ತೇವೆ ಎಂದು ಹೇಳಿ ಈಗ ಸಿಬ್ಬಂದಿಗೆ ವೇತನ ನೀಡಲು ಹಣವಿಲ್ಲದೇ ರೈತರನ್ನು ಸುಲಿಗೆ ಮಾಡಲು ಹೊರಟಿದ್ದಾರೆ. ಈ ಹಿನ್ನಲೆಯಲ್ಲಿ ವಿದ್ಯುತ್ ಇಲಾಖೆ ಮನೆಯ ಮೀಟರ್ ಅನ್ನು ಅಡಿಕೆ ಸುಲಿಯುವ ಯಂತ್ರ ಬಳಕೆ ಮಾಡುವುದಕ್ಕೆ ಬಿಡಬೇಕು. ಅವರಿಗೆ ಯಾವುದೇ ಕಿರುಕುಳ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ಹಲವು ವರ್ಷಗಳಿಂದ ರೈತರು ಅಡಿಕೆ ಸುಲಿಯುವ ಯಂತ್ರ ಬಳಕೆ ಮಾಡುತ್ತಿದ್ದಾರೆ. ಆದರೆ ಈ ವರ್ಷ ಮಾತ್ರ ಮೆಸ್ಕಾಂ ಅವರಿಗೆ ಕಿರುಕುಳ ನೀಡುತ್ತಿದೆ. ಮಲೆನಾಡಿನ ಅಡಿಕೆ ಬೆಳೆ, ಅಡಿಕೆ ವ್ಯಾಪಾರದಿಂದ ಸರ್ಕಾರಕ್ಕೆ ನೂರಾರು ಕೋಟಿ ರೂ. ತೆರಿಗೆ ಹೋಗುತ್ತದೆ. ಸಣ್ಣ, ಅತಿ ಸಣ್ಣ ರೈತರು ಅಡಿಕೆ ಸುಲಿಯುವ ಯಂತ್ರ ಬಳಕೆ ಮಾಡುವುದಕ್ಕೆ ಕಿರುಕುಳ ನೀಡಲಾಗುತ್ತಿದೆ ಎಂದು ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ.












Click it and Unblock the Notifications