IAS transfer; ಶಿವಮೊಗ್ಗ ಜಿಲ್ಲಾಧಿಕಾರಿ ವರ್ಗಾವಣೆ
ಶಿವಮೊಗ್ಗ, ಜನವರಿ 29: ಕರ್ನಾಟಕ ಸರ್ಕಾರ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ. ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ಡಾ. ಸೆಲ್ವಮಣಿ ಆರ್. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಗುರುದತ್ತ ಹೆಗಡೆ ನೂತನ ಡಿಸಿಯಾಗಿ ನೇಮಕಗೊಂಡಿದ್ದಾರೆ.
ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ಡಾ. ಸೆಲ್ವಮಣಿ ಆರ್. ಅವರನ್ನು ಬೆಂಗಳೂರಿನ ಸೆಂಟರ್ ಫಾರ್ ಇ-ಆಡಳಿತದ ಸಿಇಒ ಆಗಿ ನೇಮಕ ಮಾಡಿದೆ. ಧಾರವಾಡ ಜಿಲ್ಲಾಧಿಕಾರಿಯಾಗಿದ್ದ ಗುರುದತ್ತ ಹೆಗಡೆ ಅವರನ್ನು ವರ್ಗಾವಣೆ ಮಾಡಿದ್ದು, ಶಿವಮೊಗ್ಗದ ನೂತನ ಜಿಲ್ಲಾಧಿಕಾರಿಯಾಗಿ ನೇಮಿಸಿದೆ.

ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿದ್ದ ದಿವ್ಯಪ್ರಭು ಜಿ. ಆರ್. ಜೆ. (ಕೆಎನ್: 2014) ಅವರನ್ನು ಕಳೆದ ವಾರ ವರ್ಗಾವಣೆ ಮಾಡಲಾಗಿತ್ತು. ವೆಂಕಟೇಶ್ ಟಿ. ಅವರನ್ನು ನೂತನ ಡಿಸಿಯಾಗಿ ನೇಮಕ ಮಾಡಲಾಗಿತ್ತು. ಹುದ್ದೆಯ ನಿರೀಕ್ಷೆಯಲ್ಲಿದ್ದ ದಿವ್ಯಪ್ರಭು ಜಿ. ಆರ್. ಜೆ. ಅವರನ್ನು ಧಾರವಾಡ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಹಲವು ಅಧಿಕಾರಿಗಳ ವರ್ಗಾವಣೆ; ಲೋಕಸಭೆ ಚುನಾವಣೆ 2024 ಎದುರಾಗುತ್ತಿರುವಾಗ ಕರ್ನಾಟಕ ಸರ್ಕಾರ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದೆ. ಚುನಾವಣಾ ದಿನಾಂಕ ಘೋಷಣೆಯಾಗಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದರೆ ವರ್ಗಾವಣೆ ಮಾಡುವಂತಿಲ್ಲ.
ಡಾ. ಸೆಲ್ವಮಣಿ ಆರ್. 2022ರ ಜನವರಿಯಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದರು. ಅದಕ್ಕೂ ಮೊದಲು ಕೆ. ಬಿ. ಶಿವಕುಮಾರ್ ಜಿಲ್ಲಾಧಿಕಾರಿಯಾಗಿದ್ದರು. ಅವರನ್ನು ವರ್ಗಾವಣೆಗೊಳಿಸಿ ಡಾ. ಸೆಲ್ವಮಣಿ ಆರ್. ನೇಮಕ ಮಾಡಲಾಗಿತ್ತು.
ಶಿವಮೊಗ್ಗದ ನೂತನ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ 2014ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಹೊನ್ನಗದ್ದೆ ಗ್ರಾಮದವರು. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಧಾರವಾಡದ ಕೆಇ ಬೋರ್ಡ್ ಶಾಲೆಯಲ್ಲಿ ಮಾಡಿದ್ದಾರೆ.
ಬೆಂಗಳೂರಿನ ಆರ್. ವಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಬಳಿಕ 2014ರಲ್ಲಿ ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಭಾರತೀಯ ಆಡಳಿತ ಸೇವೆಗೆ ಆಯ್ಕೆಗೊಂಡರು.
ಪ್ರೊಬೇಷನರಿ ಅವಧಿಯಲ್ಲಿ ಬೀದರ್ ಜಿಲ್ಲೆಯಲ್ಲಿ ಕೆಲಸ ಮಾಡಿದರು. ಕೊಪ್ಪಳದ ಉಪವಿಭಾಗಾಧಿಕಾರಿಯಾಗಿ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. 2022ರಲ್ಲಿ ಗುರುದತ್ತ ಹೆಗಡೆ ಅವರನ್ನು ಧಾರವಾಡ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು.
ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ರಾಜ್ಯ ಚುನಾವಣಾ ಆಯೋಗ ಈಗಾಗಲೇ ಕರ್ನಾಟಕ ಸರ್ಕಾರಕ್ಕೆ ಪತ್ರವನ್ನು ಬರೆದಿದೆ. ಲೋಕಸಭೆ ಚುನಾವಣಾ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದು ಎಂದು ಪತ್ರದಲ್ಲಿ ತಿಳಿಸಿದೆ.
ಫೆಬ್ರವರಿ 1ರಂದು 2024-25ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಮಾರ್ಚ್ ಅಂತ್ಯದಲ್ಲಿ ಲೋಕಸಭೆ ಚುನಾವಣೆ 2024ರ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ. ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದರೆ ಸರ್ಕಾರ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಲು ಕೇಂದ್ರ ಚುನಾವಣಾ ಆಯೋಗದ ಅನುಮತಿ ಪಡೆಯಬೇಕಾಗುತ್ತದೆ.












Click it and Unblock the Notifications