ಸಿಎಂ ತವರು ಕ್ಷೇತ್ರದಿಂದ ಜಮಾತ್ ಗೆ ಹೋಗಿದ್ರಾ 16 ಮಂದಿ?
ಶಿವಮೊಗ್ಗ, ಮೇ 09: ಮುಖ್ಯಮಂತ್ರಿಗಳ ಕ್ಷೇತ್ರ ಶಿಕಾರಿಪುರದಿಂದ ತಬ್ಲಿಘಿ ಜಮಾತ್ ಗೆ ಯಾರೂ ಹೋಗಿಲ್ಲ ಎನ್ನುವ ಮಾತು ಈವರೆಗೂ ಕೇಳಿಬರುತ್ತಿತ್ತು. ಆದರೆ 16ಕ್ಕೂ ಹೆಚ್ಚು ಜನರು ದೆಹಲಿಗೆ ತೆರಳಿದ್ದರು ಎನ್ನುವುದು ಇದೀಗ ಬೆಳಕಿಗೆ ಬಂದಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಹಮದಾಬಾದ್ ನಿಂದ ಚಿತ್ರದುರ್ಗ ಮಾರ್ಗದಲ್ಲಿ ಬುಧವಾರ ಶಿವಮೊಗ್ಗ ಆಗಮಿಸುತ್ತಿದ್ದ ಎರಡು ಖಾಸಗಿ ಬಸ್ ಅನ್ನು ಅಲ್ಲಿನ ಪೊಲೀಸರು ತಡೆದು ವಿಚಾರಣೆ ನಡೆಸಿದಾಗ, ಬಸ್‌ನಲ್ಲಿದ್ದ 33 ಜನರೂ ಜಮಾತ್ ಗೆ ತೆರಳಿದ್ದರು. ಅದರಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಚಿಕಿತ್ಸೆ ಪಡೆದು ಬಿಡುಗಡೆಗೊಂಡ ದಾಖಲೆಯೂ ಇದೆ.

ಈ ತಂಡದಲ್ಲಿ ಪಟ್ಟಣದ 16 ಜನರಿದ್ದಾರೆ ಎನ್ನುವುದು ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಪೊಲೀಸರು ನಡೆಸಿದ ವಿಚಾರಣೆ ವೇಳೆ ವಿಡಿಯೋ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಅಧಿಕಾರಿಗಳು ಸ್ಪಷ್ಟನೆ ನೀಡಬೇಕು, ಇನ್ನೆಷ್ಟು ಜನರು ಜಮಾತ್ ಗೆ ತೆರಳಿದ್ದರು ಎನ್ನುವ ಕುರಿತು ತನಿಖೆ ನಡೆಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.












Click it and Unblock the Notifications