Vande Bharat Express Train :ಯಶವಂತಪುರ-ಶಿವಮೊಗ್ಗ ನಡುವೆ ವಂದೇ ಭಾರತ್ ಸಂಚಾರ
ಶಿವಮೊಗ್ಗ, ಜುಲೈ 02: ಸೆಮಿ-ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಹೊಸ ಹೊಸ ಮಾರ್ಗದಲ್ಲಿ ಪರಿಚಯಿಸಬೇಕು ಎಂಬ ಬೇಡಿಕೆ ಇದೆ. ಕರ್ನಾಟಕದಲ್ಲಿ ಶಿವಮೊಗ್ಗ-ಬೆಂಗಳೂರು ಸಂಪರ್ಕಿಸಲು ವಂದೇ ಭಾರತ್ ರೈಲು ಬೇಕು ಎಂದು ಒತ್ತಾಯಿಸಲಾಗುತ್ತಿದೆ. ಆದರೆ ಈ ಕುರಿತು ರೈಲ್ವೆ ಇಲಾಖೆ ಇನ್ನೂ ಯಾವುದೇ ಆದೇಶ ಹೊರಡಿಸಿಲ್ಲ.
ಮಂಗಳವಾರ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ಮಾಡಿದ್ದರು. ಶಿವಮೊಗ್ಗ ಕ್ಷೇತ್ರದ ರೈಲ್ವೆ ಯೋಜನೆಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಚರ್ಚಿಸಿದರು. ಇವುಗಳಲ್ಲಿ ಶಿವಮೊಗ್ಗ-ಬೆಂಗಳೂರು ವಂದೇ ಭಾರತ್ ರೈಲು ಸಂಪರ್ಕವೂ ಸೇರಿದೆ.

ಯಶವಂತಪುರ-ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗಕ್ಕೆ ರಸ್ತೆ, ರೈಲು, ವಿಮಾನ ಸಂಪರ್ಕವಿದೆ. ಬೆಂಗಳೂರು-ಶಿವಮೊಗ್ಗ ನಡುವೆ ಜನ ಶತಾಬ್ದಿ ರೈಲು ಸಂಚಾರ ನಡೆಸುತ್ತದೆ. ರಾಜಧಾನಿ ಬೆಂಗಳೂರು ಮತ್ತು ಶಿವಮೊಗ್ಗ ನಡುವೆ ವಂದೇ ಭಾರತ್ ರೈಲು ಸಂಪರ್ಕಬೇಕು ಎಂದು ಬೇಡಿಕೆ ಇಡಲಾಗಿದೆ.
ಸಂಸದ ಬಿ. ವೈ. ರಾಘವೇಂದ್ರ ರೈಲ್ವೆ ಸಚಿವರ ಜೊತೆ ಯಶವಂತಪುರ-ಶಿವಮೊಗ್ಗ- ಯಶವಂತಪುರ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸಬೇಕು ಎಂದು ಮನವಿ ಮಾಡಿದ್ದಾರೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಆದಷ್ಟು ಬೇಗನೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ.
ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ತರಲು ಈಗಾಗಲೇ ತಯಾರಿ ಆರಂಭವಾಗಿದೆ. ಶಿವಮೊಗ್ಗ ಹೊರವಲಯದ ಕೋಟೆಗಂಗೂರಿನಲ್ಲಿ ಕೋಚಿಂಗ್ ಡಿಪೋ ಕಾಮಗಾರಿ ನಡೆಯುತ್ತಿದೆ. ಈ ಡಿಪೋದಲ್ಲಿ ವಂದೇ ಭಾರತ್ ರೈಲು ನಿರ್ವಹಣೆ ಮಾಡಲು ಅನುಕೂಲವಾಗುವಂತೆ ಡಿಪೋ ಯೋಜನೆ ಸಿದ್ಧಪಡಿಸುವಂತೆ ಈಗಾಗಲೇ ಸಂಸದರು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗುವ ತನಕ ಕೆಎಸ್ಆರ್ ಬೆಂಗಳೂರು-ಧಾರವಾಡ-ಹುಬ್ಬಳ್ಳಿ ನಡುವೆ ಸಂಚಾರ ನಡೆಸುವ ವಂದೇ ಭಾರತ್ ರೈಲನ್ನು ಬೀರೂರಿನಲ್ಲಿ ನಿಲುಗಡೆ ಮಾಡಬೇಕು. ಆಗ ಮಲೆನಾಡ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಬೇಡಿಕೆ ಇಡಲಾಗಿದೆ.
2023ರಲ್ಲಿ ನೈಋತ್ಯ ರೈಲ್ವೆ ಹಲವು ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ರೈಲು ನಿರ್ವಹಣೆ ಮೂ ಸೌಲಭ್ಯ ಕಲ್ಪಿಸಲು ಸೂಚನೆ ನೀಡಿತ್ತು. ಈ 10 ಮಾರ್ಗದಲ್ಲಿ ಬೆಂಗಳೂರು ಮತ್ತು ಶಿವಮೊಗ್ಗ ನಡುವಿನ ಮಾರ್ಗವೂ ಸೇರಿತ್ತು. ಈಗ ಯಶವಂತಪುರ-ಬೆಂಗಳೂರು ವಂದೇ ಭಾರತ್ ರೈಲಿಗೆ ಬೇಡಿಕೆಯನ್ನು ಸಲ್ಲಿಸಲಾಗಿದೆ.
ಶಿವಮೊಗ್ಗದಿಂದ ಪ್ರತಿದಿನ ಬೆಂಗಳೂರು, ಮೈಸೂರು ನಗರಗಳಿಗೆ ರೈಲುಗಳ ಸಂಪರ್ಕವಿದೆ. ಶಿವಮೊಗ್ಗ ನಗರಕ್ಕೆ ಪ್ರತಿದಿನ 20ಕ್ಕೂ ಅಧಿಕ ರೈಲುಗಳು ಆಗಮಿಸುತ್ತವೆ. ಕೆಲವು ರೈಲುಗಳು ಶಿವಮೊಗ್ಗದಿಂದ ತಾಳಗುಪ್ಪ ತನಕ ಸಂಚಾರ ನಡೆಸುತ್ತವೆ. ಆದರೆ ವಂದೇ ಭಾರತ್ ರೈಲು ಶಿವಮೊಗ್ಗಕ್ಕೆ ಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ.
ಮಂಗಳವಾರ ಸಂಸದ ಬಿ. ವೈ. ರಾಘವೇಂದ್ರ ಚರ್ಚಿಸಿದ ಶಿವಮೊಗ್ಗದ ಇತರ ರೈಲು ಯೋಜನೆಗಳು
* ತಾಳಗುಪ್ಪ-ಶಿರಸಿ-ತಡಸ-ಹುಬ್ಬಳ್ಳಿ ಹೊಸ ರೈಲು ಮಾರ್ಗ ಮಂಜೂರಾತಿ
* ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗಕ್ಕೆ ಮಂಜೂರಾತಿ
* ಶಿವಮೂಗ-ಬೀರೂರು ಡಬ್ಲಿಂಗ್ ಕಾಮಗಾರಿ
* ಕೋಟೆಗಂಗೂರ್ ಕೋಚಿಂಗ್ ಡಿಪೋ ಮತ್ತು ಟರ್ಮಿನಲ್ ಸ್ಟೇಷನ್
* ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗ
* ಭದ್ರಾವತಿ ರೈಲು ನಿಲ್ದಾಣದ ಅಭಿವೃದ್ಧಿ
* ಶಿವಮೊಗ್ಗ-ರೇಣಿಗುಂಟಾ-ಚೆನ್ನೈ ಎರಡು ವಾರಕ್ಕೊಮ್ಮೆ ವಿಶೇಷ ರೈಲು ಮರುಸ್ಥಾಪನೆ
* ರೈಲು ಸಂಖ್ಯೆ 16581/ 16582 ರ ದೈನಂದಿನ ರೈಲಿಗೆ ವಿಸ್ತರಣೆ
* ಹಾರನಹಳ್ಳಿ ರೈಲು ನಿಲ್ದಾಣದಲ್ಲಿ ರೈಲು 16227/ 16228 ನಿಲುಗಡೆ
* ಬೈಂದೂರಿನ ಮೂಕಾಬಿಕಾ ರೈಲು ನಿಲ್ದಾಣದಲ್ಲಿ ರೈಲುಗಳ ನಿಲುಗಡೆ
* ಉಡುಪಿ ಜಿಲ್ಲೆ ಸೇನಾಪುರ ರೈಲು ನಿಲ್ದಾಣದಲ್ಲಿ ರೈಲುಗಳ ನಿಲುಗಡೆ












Click it and Unblock the Notifications