ಶಿವಮೊಗ್ಗ; ಮೀನಿನ ಗಾಳಕ್ಕೆ ಸಿಕ್ಕಿಬಿತ್ತು ಮೊಸಳೆ ಮರಿ!
ಶಿವಮೊಗ್ಗ, ಜನವರಿ 09; ಮೀನು ಹಿಡಿಯಲು ಹಾಕಿದ್ದ ಗಾಳಕ್ಕೆ ಮೊಸಳೆ ಮರಿ ಸಿಕ್ಕಿಬಿದ್ದದೆ. ಇದನ್ನು ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಶಿವಮೊಗ್ಗ ತಾಲೂಕು ಪಿಳ್ಳಂಗಿರಿ ಗ್ರಾಮದ ರಶೀದ್ ಅವರಿಗೆ ಮೊಸಳೆ ಮರಿ ಸಿಕ್ಕಿದೆ.
ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ, ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಹರಿಯುವ ತುಂಗಾ ನದಿಯಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದರು. ಗಾಳ ಜಗ್ಗಿದಂತಾಗಿದೆ ಕೂಡಲೇ ಅವರು ಗಾಳವನ್ನು ಮೇಲಕ್ಕೆ ಎಳೆದುಕೊಂಡಿದ್ದಾರೆ. ಗಾಳದಲ್ಲಿ ಮೀನಿನ ಬದಲು ಮೊಸಳೆ ಮರಿ ಸಿಕ್ಕಿಬಿದ್ದಿತ್ತು. ಇದನ್ನು ಕಂಡು ಅವರು ಭಯಗೊಂಡಿದ್ದಾರೆ. ನೆರೆಹೊರೆಯವರಿಗೆ ವಿಚಾರ ತಿಳಿಸಿದ್ದಾರೆ.
ಇತ್ತೀಚೆಗೆ ತುಂಗಾ, ಭದ್ರಾ ನದಿಗಳ ಸಂಗಮ ಸ್ಥಳವಾದ ಕೂಡಲಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿತ್ತು. ಈಗ ಕೂಡಲಿ ಸಮೀಪದ ಪಿಳ್ಳಂಗಿರಿ ಬಳಿ ಮೊಸಳೆ ಮರಿ ಪ್ರತ್ಯಕ್ಷವಾಗಿದ್ದು, ಸಂತಾನೋತ್ಪತ್ತಿಯಾಗಿರುವುದಕ್ಕೆ ಸಾಕ್ಷಿಯಾಗಿದೆ. ತುಂಗಾ ನದಿಯಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದ್ದು, ಈ ಭಾಗದ ಜನರಲ್ಲಿ ಭಯ ಮೂಡಿಸಿದೆ.

ಕೂಡಲಿ ಮತ್ತು ಪಿಳ್ಳಂಗಿರಿ ಅಕ್ಕಪಕ್ಕದ ಗ್ರಾಮಗಳು. ಕೂಡಲಿಯಲ್ಲಿ ತುಂಗಾ, ಭದ್ರಾ ಸಂಗಮ ಸ್ಥಳವಾಗಿದೆ. ಪಿಳ್ಳಂಗಿರಿಯಲ್ಲಿ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ, ಆಂಜನೇಯ ಸ್ವಾಮಿ ದೇವಸ್ಥಾನವಿದೆ. ಇವೆರಡೂ ಗ್ರಾಮಗಳಿಗೆ ಪ್ರತಿ ದಿನ ನೂರಾರು ಭಕ್ತರು ಬರುತ್ತಾರೆ. ಕೂಡಲಿಯ ಸಂಗಮ ಸ್ಥಳದಲ್ಲಿ ಮಿಂದೆದ್ದರೆ ಪುಣ್ಯ ಪ್ರಾಪ್ತಯಾಗಲಿದೆ.
ಅಲ್ಲದೆ ಇಲ್ಲಿ ಅಸ್ತಿ ವಿಸರ್ಜನೆ ಮಾಡಿದರೆ ಮೃತರಿಗೆ ಸ್ವರ್ಗ ಲಭಿಸಲಿದೆ ಎಂಬ ನಂಬಿಕೆ ಇದೆ. ಹಾಗಾಗಿ ಪ್ರತಿದಿನ ಜನರು ಬಂದು ಪೂಜೆ ಸಲ್ಲಿಸುತ್ತಾರೆ. ಮೊಸಳೆಗಳು ಇರುವುದು ಗೊತ್ತಾಗಿ, ಜನರು ಪುಣ್ಯ ಸ್ನಾನಕ್ಕೆ ಇಳಿಯಲು ಹೆದರುವಂತಾಗಿದೆ.
ಇತ್ತೀಚೆಗೆ ಭಾರಿ ಮಳೆಯಾಗಿ ತುಂಗಾ, ಭದ್ರಾ ನದಿಗಳು ತುಂಬಿ ಹರಿದವು. ಈ ವೇಳೆ ಮೊಸಳೆ ತೇಲಿ ಬಂದಿರುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಾರೆ. ಮೊಸಳೆಯೊಂದು ಕೂಡಲಿಯ ಸ್ನಾನಘಟ್ಟದ ಬಳಿಗೆ ಬಂದು ಕುಳಿತಿತ್ತು. ಇದರು ಭಕ್ತರಲ್ಲಿ ಭೀತಿ ಉಂಟು ಮಾಡಿತ್ತು. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಲಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಪಿಳ್ಳಂಗಿರಿಯಲ್ಲಿ ಇದೆ ಮೊದಲು; ಪಿಳ್ಳಂಗಿರಿ ಭಾಗದಲ್ಲಿ ಇದೇ ಮೊದಲ ಬಾರಿಗೆ ಮೊಸಳೆ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೊಸಳೆ ಮರಿಗಳು ಸಾಮಾನ್ಯವಾಗಿ ದಡದ ಅಂಚಿನಲ್ಲೇ ಇರುತ್ತವೆ. ಮೀನು ಹಿಡಿಯಲು ಬಂದವರಿಗೆ ಇವು ಸುಲಭವಾಗಿ ಸಿಕ್ಕಿಬೀಳುತ್ತವೆ.
ಅಲ್ಲದೆ ಈ ಭಾಗದ ಜನರು ದನಕರುಗಳ ಮೈ ತೊಳೆಯಲು, ಕೃಷಿ ಚಟುವಟಿಕೆಗೆ ನೀರು ಹಾಯಿಸಲು ಹೊಳೆ ಬಳಿಗೆ ಬರುತ್ತಾರೆ. ಪಕ್ಕದಲ್ಲೇ ದೇಗುಲ ಇರುವುದರಿಂದ ಬೇರೆಡೆಯಿಂದ ಬರುವ ಭಕ್ತರು ಕೂಡ ಇಲ್ಲಿಗೆ ಭೇಟಿ ನೀಡುತ್ತಾರೆ. ಮೊಸಳೆ ಕಾಣಿಸಿಕೊಂಡಿರುವುದರಿಂದ ಎಲ್ಲರಲ್ಲೂ ಆತಂಕ ಉಂಟಾಗಿದೆ.
ಫೋನ್ ಮಾಡಿದರೂ ಬಾರದ ಸಿಬ್ಬಂದಿ; ಪಿಳ್ಳಂಗಿರಿಯಲ್ಲಿ ಗಾಳಕ್ಕೆ ಮೊಸಳೆ ಸಿಕ್ಕ ವಿಚಾರವನ್ನು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ, ಸ್ಥಳೀಯರು ಮೊಸಳೆ ಮರಿಯನ್ನು ಸುರಕ್ಷಿತವಾಗಿ ಹೊಳೆಗೆ ಬಿಟ್ಟಿದ್ದಾರೆ.
ಭದ್ರಾ ನದಿಯಲ್ಲಿ ಆಗಾಗ ಮೊಸಳೆಗಳು ಕಾಣಿಸಿಕೊಳ್ಳುತ್ತಿದ್ದವು. ಭದ್ರಾವತಿ ನಗರದ ಮಧ್ಯೆ ಹಾದು ಹೋಗಿರುವ ಭದ್ರಾ ನದಿಯಲ್ಲಿ ಮೊಸಳೆಗಳು ಪ್ರತ್ಯಕ್ಷವಾಗಿ ಜನರು ಭಯಗೊಂಡಿದ್ದು ಇದೆ. ಈಗ ವಿವಿಧ ಗ್ರಾಮಗಳ ಸಮೀಪ ಮೊಸಳೆ, ಮೊಸಳೆ ಮರಿಗಳು ಕಂಡ ಬರುತ್ತಿದ್ದು, ನದಿ ಅಂಚಿನ ಜನರಲ್ಲಿ ಭಯ ಹುಟ್ಟಿಸಿವೆ.












Click it and Unblock the Notifications