"ಗಾಂಧಿಯನ್ನು ಗೋಡ್ಸೆ ಒಂದು ಬಾರಿ ಕೊಂದರೆ, ಕಾಂಗ್ರೆಸ್ ಪ್ರತಿದಿನ ಕೊಲ್ಲುತ್ತಿದೆ"
ಶಿವಮೊಗ್ಗ, ಅಕ್ಟೋಬರ್ 21: "ಗಾಂಧೀಜಿಯನ್ನು ಗೋಡ್ಸೆ ಒಂದು ಬಾರಿ ಕೊಂದರು, ಆದರೆ ಈ ಕಾಂಗ್ರೆಸ್ ಗಾಂಧಿಯವರನ್ನು ಪ್ರತಿನಿತ್ಯ ಕೊಲ್ಲುತ್ತಿದೆ" ಎಂದು ಕಿಡಿಕಾರಿದ್ದಾರೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ.
ಶಿವಮೊಗ್ಗದಲ್ಲಿ ಗಾಂಧಿಸಂಕಲ್ಪ ಪಾದಯಾತ್ರೆ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, "ಮಹಾತ್ಮಾ ಗಾಂಧೀಜಿಯವರನ್ನು ನಾಥೂರಾಮ್ ಗೋಡ್ಸೆ ಕೊಂದರು ಎಂದು ಹೇಳಲಾಗುತ್ತದೆ. ಗೋಹತ್ಯೆ ನಿಷೇಧ ಗಾಂಧೀಜಿ ಅವರ ಕನಸು. ಆದರೆ ಕೇಂದ್ರ ಮತ್ತು ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಮಾಡಲು ಕಾಂಗ್ರೆಸ್ ನವರು ಬಿಡುತ್ತಿಲ್ಲ. ಅಖಂಡ ಭಾರತ ಒಂದು ಎಂಬುದು ಗಾಂಧೀ ಕನಸಾಗಿತ್ತು. ಆ ಕನಸು ನನಸು ಮಾಡಲು ಕಾಂಗ್ರೆಸ್ ನವರು ಬಿಡುತ್ತಿಲ್ಲ. ಗಾಂಧೀಜಿಯವರನ್ನು ಕಾಂಗ್ರೆಸ್ ನವರು ಈ ಮೂಲಕ ಪ್ರತಿನಿತ್ಯ ಕೊಲ್ಲುತ್ತಿದ್ದಾರೆ" ಎಂದು ಆರೋಪಿಸಿದರು.

"ಕಳೆದ 70 ವರ್ಷದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿಕೊಂಡು ಬಂದರೂ ಗಾಂಧೀಜಿ ಅವರ ಶೌಚಾಲಯ ಮುಕ್ತ ಭಾರತದ ಕನಸು ನನಸು ಮಾಡಲು ಆಗಿಲ್ಲ. ಇದಕ್ಕೆ ಪ್ರಧಾನಿಯಗಿರುವ ಮೋದಿಯವರೇ ಬರಬೇಕಾಯಿತು. ಸ್ವಚ್ಛ ಭಾರತ್ ಸೇರಿದಂತೆ ಅನೇಕ ಯೋಜನೆಗಳಿಗೆ ಮೋದಿಯವರು ಚಾಲನೆ ನೀಡಿದ್ದಾರೆ. ಗಾಂಧೀಜಿ ಅವರ ಕನಸು, ಚಿಂತನೆ, ತತ್ವ ಸಿದ್ಧಾಂತಗಳಿಗೆ ನಿಜವಾದ ಗೌರವ ನೀಡುತ್ತಿರುವುದು ನಮ್ಮ ಬಿಜೆಪಿ. ಕಾಂಗ್ರೆಸ್ ನವರು ಚುನಾವಣೆಗಾಗಿ, ಅಧಿಕಾರಕ್ಕಾಗಿ ಗಾಂಧಿ ಅವರ ಹೆಸರನ್ನು ಬಳಸಿಕೊಂಡಿದ್ದಾರೆ" ಎಂದು ಕಾಂಗ್ರೇಸ್ ನ ವಿರುದ್ಧ ಕಿಡಿಕಾರಿದರು.












Click it and Unblock the Notifications