30 ವರ್ಷದ ಇತಿಹಾಸ ಮುರಿದ ಕಾಂಗ್ರೆಸ್, ವಿಜಯೇಂದ್ರಗೆ ಹಿನ್ನಡೆ!
ಶಿವಮೊಗ್ಗ, ನವೆಂಬರ್ 21: ಶಿಕಾರಿಪುರದ ಬಿಜೆಪಿ ಶಾಸಕ ಬಿ. ವೈ. ವಿಜಯೇಂದ್ರ ಕರ್ನಾಟಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಆದರೆ ಅವರ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ 30 ವರ್ಷಗಳ ದಾಖಲೆಯೊಂದನ್ನು ಮುರಿದು ಹಾಕಿದೆ.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಅವರ ಕುಟುಂಬದ ಪ್ರಭಾವ ಇರುವ ಕ್ಷೇತ್ರ ಶಿಕಾರಿಪುರ. ಆದ್ದರಿಂದ ಸ್ಥಳೀಯವಾಗಿ ನಡೆದ ಯಾವುದೇ ಚುನಾವಣೆಯನ್ನು ಅವರ ಕುಟುಂಬದ ಪ್ರಭಾವಕ್ಕೆ ಹೋಲಿಕೆ ಮಾಡುವುದು ಸಾಮಾನ್ಯ ಸಂಗತಿ.

2023ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬಿ. ಎಸ್. ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದರು. ತಾವು ಪ್ರತಿನಿಧಿಸುತ್ತಿದ್ದ ಶಿಕಾರಿಪುರ ಕ್ಷೇತ್ರವನ್ನು ಪುತ್ರ ಬಿ. ವೈ. ವಿಜಯೇಂದ್ರಗೆ ಬಿಟ್ಟುಕೊಟ್ಟರು. 81,810 ಮತಗಳನ್ನು ಪಡೆದು ಮೊದಲ ಬಾರಿಗೆ ಶಾಸಕರಾಗಿ ವಿಜಯೇಂದ್ರ ಆಯ್ಕೆಯಾಗಿದ್ದಾರೆ.
ಶಿಕಾರಿಪುರ ಚುನಾವಣಾ ಫಲಿತಾಂಶ 2023
ಇತಿಹಾಸ ಮುರಿದ ಕಾಂಗ್ರೆಸ್; ಬಿ. ವೈ. ವಿಜಯೇಂದ್ರ ಪ್ರತಿನಿಧಿಸುವ ಶಿಕಾರಿಪುರ ಕ್ಷೇತ್ರದ ತರಲಘಟ್ಟ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಸಾಧಿಸಿದೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಪಂಚಾಯಿತಿ ಅಧಿಕಾರವನ್ನು ಪಡೆದಿದೆ.
ಗ್ರಾಮ ಪಂಚಾಯಿತಿ ಒಟ್ಟು ಸದಸ್ಯ ಬಲ 16. ಕಾಂಗ್ರೆಸ್ ಮತ್ತು ಬಿಜೆಪಿ ತಲಾ 8 ಸ್ಥಾನದಲ್ಲಿ ಜಯಗಳಿಸಿದ್ದವು. ಅಧ್ಯಕ್ಷರಾಗಿ ಮಂಜಮ್ಮ ಜ್ಞಾನೇಶ್ ಮತ್ತು ಉಪಾಧ್ಯಕ್ಷರಾಗಿ ಕುಮಾರ್ ನಾಯ್ಕ್ ಆಯ್ಕೆಯಾದರು. ಈ ಮೂಲಕ ಸ್ಥಳೀಯ ಬಿಜೆಪಿ ಶಾಸಕರಿಗೆ ಕ್ಷೇತ್ರದಲ್ಲೇ ಹಿನ್ನಡೆಯಾಗಿದೆ.
30 ವರ್ಷದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ಅಧಿಕಾರ ಕಾಂಗ್ರೆಸ್ 'ಕೈ' ಸೇರಿದೆ. ಅದರಲ್ಲೂ ಬಿ. ವೈ. ವಿಜಯೇಂದ್ರ ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ಕೆಲವೇ ದಿನಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.
ಶಿಕಾರಿಪುರದ ಈ ಬಾರಿಯ ಚುನಾವಣೆ ಕುತೂಹಲಕ್ಕೆ ಕಾರಣವಾಗಿತ್ತು. ಯಡಿಯೂರಪ್ಪ ಚುನಾವಣಾ ನಿವೃತ್ತಿ ಬಳಿಕ ನಡೆದ ಮೊದಲ ಚುನಾವಣೆ ಇದಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಗೋಣಿ ಮಾಲತೇಶ್ 8101 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಟಿಕೆಟ್ ಸಿಗದೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಸ್. ಪಿ. ನಾಗರಾಜ್ ಗೌಡ 70802 ಮತಗಳನ್ನು ಪಡೆದು ಬಿ. ವೈ. ವಿಜಯೇಂದ್ರಗೆ ಪ್ರಬಲ ಪೈಪೋಟಿ ನೀಡಿದ್ದರು.
ರಾಜ್ಯ ಬಿಜೆಪಿಯ ಯುವ ನಾಯಕ ಬಿ. ವೈ. ವಿಜಯೇಂದ್ರ ಪಕ್ಷ ಸಂಘಟನೆಯಲ್ಲಿ ಚುರುಕು. ಶಿಕಾರಿಪುರದಲ್ಲಿ ಗೆಲುವು ಸಾಧಿಸಿದ ಬಳಿಕ ಶಾಸಕರ ಕಛೇರಿ ಆರಂಭಿಸಿ ಜನರ ಕಷ್ಟ, ದೂರು ಆಲಿಸುತ್ತಿದ್ದಾರೆ. ತಂದೆಯಿಂದ ಪಡೆದ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವ ಬೆಳೆಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ.
ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಹಲವು ಉಪ ಚುನಾವಣೆ ಹಾಗೂ ಪಕ್ಷ ಸಂಘಟನೆ ಸಂಬಂಧ ಹೈಕಮಾಂಡ್ ನೀಡಿದ್ದ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಿದ್ದ ವಿಜಯೇಂದ್ರಗೆ ಪಕ್ಷದ ಹೈಕಮಾಂಡ್ ಕರ್ನಾಟಕ ಬಿಜೆಪಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಬಿಜೆಪಿಯನ್ನು 2024ರ ಲೋಕಸಭೆ ಚುನಾವಣೆಗೆ ಸಿದ್ಧಗೊಳಿಸಬೇಕಿರುವ ಮಹತ್ವದ ಕಾರ್ಯವನ್ನು ವಿಜಯೇಂದ್ರ ಮಾಡಬೇಕಿದೆ. ಇದರ ಜೊತೆಗೆ ಕ್ಷೇತ್ರದ ಕಡೆ ಸಹ ಗಮನಹರಿಸಬೇಕಿದೆ.












Click it and Unblock the Notifications