Breaking; ಶಿವಮೊಗ್ಗದ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ ಕೊಟ್ಟ ಡಿಸಿ
ಶಿವಮೊಗ್ಗ, ಡಿಸೆಂಬರ್ 13; ಶಿವಮೊಗ್ಗದ ರೈಲು ಪ್ರಯಾಣಿಕರಿಗೆ ಜಿಲ್ಲಾಧಿಕಾರಿಗಳು ಸಿಹಿಸುದ್ದಿ ನೀಡಿದ್ದಾರೆ. ಹಲವು ವರ್ಷಗಳ ಬೇಡಿಕೆಗೆ ಅವರು ಒಪ್ಪಿಗೆ ನೀಡಿದ್ದು, ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಶಿವಮೊಗ್ಗ ವಿಮಾನ ನಿಲ್ದಾಣದಿಂದ ನಗರದ ವಿವಿಧ ಪ್ರದೇಶಗಳಿಗೆ ನಗರ ಸಾರಿಗೆ ಬಸ್ ಸೇವೆ ಆರಂಭಿಸಲು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಒಪ್ಪಿಗೆ ನೀಡಿದ್ದಾರೆ. ರೈಲು ನಿಲ್ದಾಣದಿಂದ ನಗರದೊಳಗೆ ಹೋಗಲು ಆಟೋ, ಖಾಸಗಿ ವಾಹನಗಳನ್ನು ಬಳಸುವುದು ತಪ್ಪಲಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ರೈಲ್ವೆ ನಿಲ್ದಾಣದಿಂದ ನಗರದ ವಿವಿಧ ಪ್ರದೇಶಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಆರ್‌ಟಿಸಿ ನಗರ ಸಾರಿಗೆ ಬಸ್ ನಿಯೋಜನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ರೈಲು ನಿಲ್ದಾಣದಿಂದ ನಗರಕ್ಕೆ ನಗರ ಸಾರಿಗೆ ಬಸ್ ಸೌಲಭ್ಯ ಆರಂಭಿಸುವಂತೆ ವಿವಿಧ ಸಂಘಟನೆಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದವು. ಈ ಬೇಡಿಕೆಗೆ ಈಗ ಜಿಲ್ಲಾಡಳಿತ ಒಪ್ಪಿಗೆ ಕೊಟ್ಟಿದೆ.ಶಿವಮೊಗ್ಗ ನಗರಕ್ಕೆ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ನಗರಗಳಿಂದ ರೈಲು ಸಂಪರ್ಕವಿದೆ. ನಗರಕ್ಕೆ ರೈಲುಗಳು ಬರುವ, ಹೊರಡುವ ಸಮಯಕ್ಕೆ ಸರಿಯಾಗಿ ನಗರ ಸಾರಿಗೆ ಬಸ್ ಓಡಿಸಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿದ್ದವು.
ಜೆನರ್ಮ್ ಯೋಜನೆಯಡಿ ಶಿವಮೊಗ್ಗ-ಭದ್ರಾವತಿ ನಗರಗಳಿಗೆ 100 ಬಸ್ ಬಸ್‌ಗಳು ಮಂಜೂರಾಗಿವೆ. ಅವಳಿ ನಗರಗಳ ನಡುವೆ ನಗರ ಸಾರಿಗೆ ಬಸ್‌ಗಳು ಸಂಚಾರ ನಡೆಸುತ್ತಿವೆ. 36 ಬಸ್‌ಗಳು ನಗರದೊಳಗೆ ಸಂಚಾರ ನಡೆಸಬೇಕು ಎಂಬ ನಿಯಮವಿದೆ. ಇದರ ಅನ್ವಯ ರೈಲು ನಿಲ್ದಾಣಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿತ್ತು.
ಶಿವಮೊಗ್ಗ ರೈಲು ನಿಲ್ದಾಣದಿಂದ ನಗರಕ್ಕೆ ಸಾಗಲು ಆಟೋಗಳನ್ನು ಬಳಸಬೇಕು. ಆದರೆ ಅವರು ದುಬಾರಿ ಹಣ ವಸೂಲು ಮಾಡುತ್ತಾರೆ ಎಂಬುದು ಆರೋಪವಾಗಿದೆ. ಈಗ ನಗರ ಸಾರಿಗೆ ಬಸ್‌ಗಳು ಆರಂಭವಾದರೆ ರೈಲು ಪ್ರಯಾಣಿಕರಿಗೆ ಅನುಕೂಲವಾಗಲಿದೆ.












Click it and Unblock the Notifications