Breaking News: ಶಿವಮೊಗ್ಗದಲ್ಲಿ ಬೆಳ್ಳುಳ್ಳಿ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ
ಶಿವಮೊಗ್ಗ, ಸೆಪ್ಟೆಂಬರ್ 30: ಶಿವಮೊಗ್ಗದಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಮಾರುಕಟ್ಟೆ ಮೇಲೆ ದಾಳಿ ಮಾಡಿದ್ದಾರೆ. ನಗರಕ್ಕೆ ಚೀನಾ ಬೆಳ್ಳುಳ್ಳಿ ಬಂದಿದೆ ಎಂಬ ಆರೋಪವಿದ್ದು, ಅಧಿಕಾರಿಗಳು ಸ್ಯಾಂಪಲ್ ಸಂಗ್ರಹ ಮಾಡಲು ದಾಳಿ ಮಾಡಿ, ಪರಿಶೀಲನೆ ಕೈಗೊಂಡಿದ್ದಾರೆ. ಭಾರತೀಯ ಬೆಳ್ಳುಳ್ಳಿಗೆ ಹೋಲಿಕೆ ಮಾಡಿದರೆ ಚೀನಾದ ಬೆಳ್ಳುಳ್ಳಿಯ ದರ ಕಡಿಮೆ ಇದೆ ಎಂಬ ಮಾಹಿತಿ ಸಿಕ್ಕಿದೆ.
ಸೋಮವಾರ ಶಿವಮೊಗ್ಗದ ಮಾರುಕಟ್ಟೆಗೆ ಚೀನಾ ಬೆಳ್ಳುಳ್ಳಿ ಬಂದಿದೆ ಎಂಬ ಮಾಹಿತಿ ಆಧರಿಸಿ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಎಪಿಎಂಸಿ ತರಕಾರಿ ಮಾರುಕಟ್ಟೆ, ನಗರದ ಗಾಂಧಿ ಬಜಾರ್, ಲಷ್ಕರ್ ಮೊಹಲ್ಲಾದ 7-8 ಅಂಗಡಿಗಳ ಮೇಲೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳ ತಂಡ ದಾಳಿ ಮಾಡಿದೆ.

ದಾಳಿಯ ವೇಳೆ ಅಧಿಕಾರಿಗಳು ಅನುಮಾನಾಸ್ಪದ ಬೆಳ್ಳುಳ್ಳಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬೆಳ್ಳುಳ್ಳಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ರವಾನಿಸಲಾಗುತ್ತದೆ. ಪ್ರಸ್ತುತ ಮಾರುಕಟ್ಟೆಗಳಲ್ಲಿ ಬೆಳ್ಳುಳ್ಳಿ ರೇಟ್ ದುಬಾರಿಯಾಗಿದೆ. ಕೆಜಿಗೆ 250 ರಿಂದ 400 ರೂಪಾಯಿಗೆ ಮಾರಾಟವಾಗುತ್ತಿದೆ.
ಇಂತಹ ಹೊತ್ತಿನಲ್ಲಿ ಕೆಲವು ವ್ಯಾಪಾರಿಗಳು ದೇಶಿ ಬೆಳ್ಳುಳ್ಳಿಗಳ ಜೊತೆ ಚೀನಾ ಬೆಳ್ಳುಳ್ಳಿ ಸೇರಿಸಿ ಮಾರಾಟವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಚೀನಾ ಬೆಳ್ಳುಳ್ಳಿ ಕೆಜಿಗೆ 80 ರೂ. ಆಗಿದ್ದು ಲಾಭದಾಯಕ ವ್ಯಾಪಾರಕ್ಕೆ ವ್ಯಾಪಾರಿಗಳು ಹೀಗೆ ಮಾಡುತ್ತಿದ್ದಾರೆ ಎಂದು ದೂರುಗಳು ಬಂದಿವೆ.
ಚೀನಾ ಬೆಳ್ಳುಳ್ಳಿ ಜನರ ಆರೋಗ್ಯಕ್ಕೆ ಹಾನಿಕಾರ ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ನಗರದ ವಿವಿಧ ಅಂಗಡಿಗಳ ಮೇಲೆ ದಾಳಿಯನ್ನು ನಡೆಸಿ, ಬೆಳ್ಳುಳ್ಳಿ ಸ್ಯಾಂಪಲ್ ಪಡೆದು, ಪರಿಶೀಲನೆ ಮುಂದುವರೆಸಿದ್ದಾರೆ.
ಚೀನಾದ ಬೆಳ್ಳುಳ್ಳಿ ಅದರ ಗಾತ್ರ ಮತ್ತು ಸುಗಂಧದ ಕಾರಣಕ್ಕೆ ಹೆಚ್ಚು ಜನಪ್ರಿಯ. ಆದರೆ ಅದರ ಬೆಲೆ ದೇಶಿಯ ಬೆಳ್ಳುಳ್ಳಿಗಿಂತ ಕಡಿಮೆ ಇದೆ. ಆದ್ದರಿಂದ ಕಳ್ಳ ಸಾಗಣೆ ಮೂಲಕ ಅದನ್ನು ತಂದು ಮಾರಾಟ ಮಾಡಲಾಗುತ್ತದೆ ಎಂಬುದು ಆರೋಪವಾಗಿದೆ. 2014ರಲ್ಲಿಯೇ ಭಾರತದ ಮಾರುಕಟ್ಟೆಯಲ್ಲಿ ಚೀನಾ ಬೆಳ್ಳುಳ್ಳಿಯನ್ನು ನಿಷೇಧಿಸಲಾಗಿದೆ.
ಕೆಲವು ದಿನಗಳ ಹಿಂದೆ ಗುಜರಾತ್‌ನ ರಾಜ್‌ಕೋಟ್‌ನ ಎಪಿಎಂಸಿಯಲ್ಲಿ ಚೀನಾ ಬೆಳ್ಳುಳ್ಳಿಯ ಚೀಲಗಳು ಪತ್ತೆಯಾಗಿದ್ದವು. ಇದನ್ನು ನೋಡಿದ್ದ ಸ್ಥಳೀಯ ವ್ಯಾಪಾರಿಗಳು ಪ್ರತಿಭಟನೆಯನ್ನು ಸಹ ಮಾಡಿದ್ದರು. ಈ ಬೆಳ್ಳುಳ್ಳಿ ತಿಳಿ ಗುಲಾಬಿ ಮತ್ತು ಬಿಳಿ ಬಣ್ಣ ಹೊಂದಿದ್ದು, ಗಾತ್ರದಲ್ಲಿ ಚಿಕ್ಕದಾಗಿವೆ.
ಚೀನಾ ಬೆಳ್ಳುಳ್ಳಿ ಬೆಳೆಯಲು ಹೆಚ್ಚು ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರ ಬಳಕೆ ಮಾಡಲಾಗುತ್ತದೆ ಎಂಬ ಆರೋಪವಿದೆ. ಇವು ಆರೋಗ್ಯಕ್ಕೆ ಹಾನಿಕರ ಎಂಬ ಕಾರಣಕ್ಕೆ ಅದರ ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ ದೇಶಿಯ ಬೆಳ್ಳುಳ್ಳಿಗಿಂತ ಕಡಿಮೆ ದರದಲ್ಲಿ ಸಿಗುವ ಕಾರಣ ಅದನ್ನು ಕಳ್ಳ ಸಾಗಣೆ ಮೂಲಕ ತಂದು, ದೇಶಿಯ ಬೆಳ್ಳುಳ್ಳಿಗಳ ಜೊತೆ ಮಿಕ್ಸ್ ಮಾಡಿ ಮಾರಾಟ ಮಾಡಲಾಗುತ್ತದೆ ಎಂಬುದು ದೂರು.












Click it and Unblock the Notifications