ಮಗನಿಗೆ 'ಶಿಕಾರಿ'ಪುರ ಬಿಟ್ಟು ಶಸ್ತ್ರತ್ಯಾಗ ಮಾಡಿದರೇ ಬಿಎಸ್‌ವೈ?
ಶಿವಮೊಗ್ಗ, ಜುಲೈ 22: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಪರ್ಧೆ ಮಾಡುತ್ತಿಲ್ಲ. ಕಿರಿಯ ಪುತ್ರ ವಿಜಯೇಂದ್ರ ಶಿಕಾರಿಪುರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಖಚಿತಪಡಿಸಿದ್ದಾರೆ. ಈ ಮೂಲಕ ವಿಜಯೇಂದ್ರ ರಾಜಕೀಯ ಪದಾರ್ಪಣೆ ತವರಿನಲ್ಲೆ ಎನ್ನುವುದನ್ನು ಖಚಿತಪಡಿಸಿದ್ದಾರೆ.
ಶಿಕಾರಿಪುರದಲ್ಲಿ ಯಾರು ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲಕ್ಕೆ ಶುಕ್ರವಾರ ಅಂಜನಾಪುರದಲ್ಲಿ ಯಡಿಯೂರಪ್ಪ ತೆರೆ ಎಳೆದಿದ್ದಾರೆ. ಕೇವಲ 12 ಸೆಕೆಂಡ್‌ನ ಅವರ ಹೇಳಿಕೆ ಜಿಲ್ಲಾ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ರಾಜ್ಯ ರಾಜಕಾರಣದಲ್ಲೂ ಕುತೂಹಲ ಮತ್ತು ಚರ್ಚೆಗೂ ಕಾರಣವಾಗಿದೆ.
ಬಿಎಸ್ ಯಡಿಯೂರಪ್ಪ ಎಂಟು ಭಾರಿ ಶಿಕಾರಿಪುರ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಇಲ್ಲಿಂದ ಗೆದ್ದು ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ ಪ್ರಭಾವ ವೃದ್ಧಿಸಿಕೊಂಡಿದ್ದಾರೆ. ಅಧಿಕಾರ ಇದ್ದಾಗ, ಅವಕಾಶ ಸಿಕ್ಕಾಗಲೆಲ್ಲ ಕ್ಷೇತ್ರಕ್ಕೆ ಹೇರಳವಾಗಿ ಅನುದಾನ ತಂದಿದ್ದಾರೆ. ಮೂಲ ಸೌಕರ್ಯಗಳು, ನೀರಾವರಿ ಯೋಜನೆಗಳಿಗೆ ಸಾವಿರಾರು ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಮುಂದಿನ ಅವಧಿಗೂ ಯಡಿಯೂರಪ್ಪ ಅವರೆ ಸ್ಪರ್ಧೆ ಮಾಡಬೇಕು ಎಂಬುದು ಕ್ಷೇತ್ರದಲ್ಲಿನ ಅವರ ಬೆಂಬಲಿಗರು, ಪಕ್ಷದ ಕಾರ್ಯಕರ್ತರ ಅಭಿಮತವಾಗಿತ್ತು.
ಇನ್ನೂ ಯಡಿಯೂರಪ್ಪ ಅವರು ಪುತ್ರನಿಗಾಗಿ ಕ್ಷೇತ್ರ ಬಿಟ್ಟುಕೊಡುತ್ತಿರುವುದು ಇದೆ ಮೊದಲಲ್ಲ. ಯಡಿಯೂರಪ್ಪ ಅವರು 1983ರಲ್ಲಿ ಮೊದಲ ಭಾರಿ ಶಿಕಾರಿಪುರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಆ ನಂತರ ಎಂಟು ಭಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1999ರಲ್ಲಿ ಕಾಂಗ್ರೆಸ್ ಪಕ್ಷದ ಬಿ.ಎನ್.ಮಹಾಲಿಂಗಪ್ಪ ಅವರ ಎದುರು ಸೋಲನಪ್ಪಿದ್ದರು. ಆದಾದ ನಂತರ ಪುನಃ ಯಡಿಯೂರಪ್ಪ ಅವರು ವಿಜಯಯಾತ್ರೆ ಮುಂದುವರೆಯುತ್ತಲೆ ಬಂದಿತ್ತು.

ರಾಜಕೀಯದಿಂದ ಹಿಂದೆ ಸರಿಯಲು ವಯಸ್ಸು ಕಾರಣವಾಯ್ತಾ?
75 ವರ್ಷ ಪೂರೈಸಿದವರಿಗೆ ಟಿಕೆಟ್ ನೀಡುವುದಿಲ್ಲ ಎಂಬುದು ಬಿಜೆಪಿಯೊಳಗಿನ ಅಘೋಷಿತ ನಿಯಮ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಹಿರಿಯ ನಾಯರಿಗೆ ಕೊಕ್ ಕೊಡಲಾಯಿತು. ಇತ್ತ ವಯಸ್ಸಿನ ಕಾರಣಕ್ಕಾಗಿಯೇ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನ ತೊರೆಯಬೇಕಾಯಿತು. ಈಗ ಇದೆ ವಯೋಮಿತಿಯಿಂದಾಗಿ ಶಿಕಾರಿಪುರ ಕ್ಷೇತ್ರವನ್ನು ಯಡಿಯೂರಪ್ಪ ಬಿಟ್ಟುಕೊಡಬೇಕಾಗಿದೆ. ಇದೀಗ ರಾಜ್ಯ ರಾಜಕೀಯದಲ್ಲಿ ಗುರುತಿಸಿಕೊಳ್ಳುತ್ತಿರುವ ಕಿರಿಯ ಮಗನಿಗೆ ತಮ್ಮ ಕ್ಷೇತ್ರವನ್ನು ಬಿಟ್ಟುಕೊಡಲು ನಿರ್ಧರಿಸಿದ್ದಾರೆ.

ವಿಜಯೇಂದ್ರ ಸ್ಪರ್ಧೆ ಖಚಿತಪಡಿಸಿದ ಬಿಎಸ್‌ವೈ
ಯಡಿಯೂರಪ್ಪ ನಂತರ ಶಿಕಾರಿಪುರ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸುವರು ಎಂಬ ಕುತೂಹಲ ಚರ್ಚೆಗೆ ಕಾರಣವಾಗಿತ್ತು. ಹಲವು ಹೆಸರುಗಳು ಕೂಡ ಚಾಲ್ತಿಗೆ ಬಂದಿದ್ದವು. ಪುತ್ರಿ ಬಿ.ವೈ.ಅರುಣಾದೇವಿ, ಸಂಸದ ರಾಘವೇಂದ್ರ, ಬಿ.ವೈ.ರಾಘವೇಂದ್ರ ಪತ್ನಿ ತೇಜಸ್ವಿನಿ, ಬಿ.ವೈ.ವಿಜಯೇಂದ್ರ, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಸೇರಿದಂತೆ ಯಡಿಯೂರಪ್ಪ ಅವರ ಕುಟುಂಬದವರು, ಆಪ್ತ ಬಳಗದವರ ಹೆಸರುಗಳು ಚಾಲ್ತಿಗೆ ಬಂದಿದ್ದವು. ಈಗ ಎಲ್ಲಾ ಕುತೂಹಲ ಮತ್ತು ಚರ್ಚೆಗೂ ಯಡಿಯೂರಪ್ಪ ತೆರೆ ಎಳೆದಿದ್ದಾರೆ.
ಶಿಕಾರಿಪುರ ವಿಧಾನಸಭೆ ಕ್ಷೇತ್ರದಿಂದ ಮುಂದಿನ ಚುನಾವಣೆಗೆ ತಾವು ಸ್ಪರ್ಧೆ ಮಾಡುವುದಿಲ್ಲ. ಬಿ.ವೈ.ವಿಜಯೇಂದ್ರ ಅವರು ಸ್ಪರ್ಧಿಸಲಿದ್ದಾರೆ. ಶಿಕಾರಿಪುರ ಕ್ಷೇತ್ರದ ಜನರು ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗ ರಾಜಕಾರಣಕ್ಕೆ ವಿಜಯೇಂದ್ರ ಎಂಟ್ರಿ
ಬಿ.ವೈ.ವಿಜಯೇಂದ್ರ ಬಿಜೆಪಿಯಲ್ಲಿ ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಓಡಾಡುತ್ತಿದ್ದರು. ಉಪ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ಕೈಗೊಂಡಿದ್ದರು. ಹಳೆ ಮೈಸೂರು ಭಾಗದಲ್ಲೇ ಅವರು ಅಖಾಡಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಇನ್ನು, ಪಕ್ಷದಲ್ಲಿ ಪ್ರಭಾವಿ ಅನಿಸಿಕೊಂಡರೂ ಶಿವಮೊಗ್ಗ ಜಿಲ್ಲೆಯ ರಾಜಕಾರಣದತ್ತ ಹೆಚ್ಚು ಗಮನ ಹರಿಸಿರಲಿಲ್ಲ. ಜಿಲ್ಲೆ ರಾಜಕಾರಣದ ಕುರಿತು ಬಹಿರಂಗವಾಗಿ ಎಂದಿಗೂ ಚರ್ಚೆ ಮಾಡುತ್ತಿರಲಿಲ್ಲ. ಯಡಿಯೂರಪ್ಪ ಅವರ ಘೋಷಣೆ ಬೆನ್ನಿಗೆ ವಿಜಯೇಂದ್ರ ಅವರು ವಿದ್ಯುಕ್ತವಾಗಿ ಜಿಲ್ಲಾ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದಂತಾಗಿದೆ.

8 ಬಾರಿ ಗೆದ್ದ ಕ್ಷೇತ್ರ ಬಿಟ್ಟುಕೊಟ್ಟ ಬಿಎಸ್‌ವೈ
ಶಿಕಾರಿಪುರ ಕ್ಷೇತ್ರದಲ್ಲಿ ನಿರಂತರ ವಿಜಯ ಸಾಧಿಸುತ್ತಿರುವ ಯಡಿಯೂರಪ್ಪ ಅವರು ಒಮ್ಮೆ ಮಾತ್ರ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. 2014ರಲ್ಲಿ ಯಡಿಯೂರಪ್ಪ ಅವರು ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದರು. 3.63 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆ ಯಡಿಯೂರಪ್ಪ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2014ರಲ್ಲಿ ಶಿಕಾರಿಪುರ ವಿಧಾನಸಭೆಗೆ ಉಪ ಚುನಾವಣೆ ನಡೆಯಿತು. ಆಗ ಬಿಜೆಪಿಯಿಂದ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ ಪಕ್ಷದ ಶಾಂತವೀರಪ್ಪ ಗೌಡ ಅವರನ್ನು ಸೋಲಿಸಿ ರಾಘವೇಂದ್ರ ಗೆಲುವು ಸಾಧಿಸಿದ್ದರು.
ಈಗ ವಯಸ್ಸಿನ ಕಾರಣಕ್ಕೆ ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದ್ದಾರೆ. ಹಾಗಾಗಿ ತಾವು ಎಂಟು ಭಾರಿ ಗೆಲುವು ಸಾಧಿಸಿದ್ದ ಶಿಕಾರಿಪುರ ಕ್ಷೇತ್ರವನ್ನು ಮತ್ತೊಬ್ಬ ಪುತ್ರನಿಗೆ ಬಿಟ್ಟುಕೊಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ.












Click it and Unblock the Notifications