ಹರ್ಷ ಹತ್ಯೆ ಪ್ರಕರಣ; ಬೆಂಗಳೂರಿನಲ್ಲಿ ನಾಲ್ವರ ಬಂಧನ
ಶಿವಮೊಗ್ಗ, ಫೆಬ್ರವರಿ 22; ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಸಂಬಂಧ ಇದುವರೆಗೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ಫೆಬ್ರವರಿ 25ರ ಶುಕ್ರವಾರ ಬೆಳಗ್ಗೆ ತನಕ ಕರ್ಫ್ಯೂ ವಿಸ್ತರಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಬಿ. ಎಂ. ಲಕ್ಷ್ಮೀ ಪ್ರಸಾದ್, "ಇಬ್ಬರು ಆರೋಪಿಗಳನ್ನು ಶಿವಮೊಗ್ಗದಲ್ಲಿ ಬಂಧಿಸಲಾಗಿದೆ. ಉಳಿದ ನಾಲ್ವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ" ಎಂದು ಹೇಳಿದರು.
"ಹರ್ಷ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಖಾಸಿಫ್, ಸಯ್ಯದ್ ನದೀಂ ಎಂಬುವವರನ್ನು ಶಿವಮೊಗ್ಗದಲ್ಲಿ ಬಂಧಿಸಲಾಗಿತ್ತು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಸೀಫ್ ಉಲ್ಲಾ ಖಾನ್, ರಿಹಾನ್ ಷರೀಫ್, ನಿಹಾನ್, ಅಬ್ದುಲ್ ಅಫ್ನಾನ್ ಎಂಬುವವರನ್ನು ಬಂಧಿಸಲಾಗಿದೆ" ಎಂದರು.

"ಬಂಧಿತ ಎಲ್ಲಾ ಆರೋಪಿಗಳು 21 ರಿಂದ 22 ವರ್ಷ ವಯಸ್ಸಿನವರು. ಖಾಸಿಫ್ ಮಾತ್ರ 30 ವರ್ಷದವನು. ಎಲ್ಲರೂ ಕ್ಲಾರ್ಕ್ ಪೇಟೆ ನಿವಾಸಿಗಳಾಗಿದ್ದರು. ಒಟ್ಟಿಗೆ ಇರುತ್ತಿದ್ದರು. ಇತ್ತೀಚೆಗೆ ಎಲ್ಲರೂ ಬೇರೆ ಬೇರೆ ಕಡೆ ವಾಸವಾಗಿದ್ದರು. ಖಾಸಿಫ್ ಮಾತ್ರ ಕ್ಲಾರ್ಕ್ ಪೇಟೆಯಲ್ಲಿ ವಾಸವಾಗಿದ್ದ" ಎಂದು ತಿಳಿಸಿದರು.
"ಹರ್ಷ ಹತ್ಯೆ ಪ್ರಕರಣ ಸಂಬಂಧ 12 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಕರಣ ಸಂಬಂಧ ಮತ್ತಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ" ಎಂದು ಬಿ. ಎಂ. ಲಕ್ಷ್ಮೀ ಪ್ರಸಾದ್ ಹೇಳಿದರು.
"ಹರ್ಷ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಂಧಿತರ ವಿಚಾರಣೆ ಬಳಿಕ ಈ ಕುರಿತು ಸ್ಪಷ್ಟತೆ ಸಿಗಲಿದೆ. ಭಾನುವಾರ ರಾತ್ರಿ ಹರ್ಷನನ್ನು ಸ್ವಲ್ಪ ದೂರದವರೆಗೆ ಓಡಿಸಿಕೊಂಡು ಹೋಗಿ ಹತ್ಯೆ ಮಾಡಿದ್ದಾರೆ" ಎಂದರು.
ನ್ಯಾಯಾಂಗ ತನಿಖೆಗೆ ಆಗ್ರಹ; ಹರ್ಷ ಕೊಲೆ ಪ್ರಕರಣವನ್ನು ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹರ್ಷ ಕೊಲೆ ಪ್ರಕರಣ, ನಂತರ ನಡೆದ ಗಲಭೆ ಸೇರಿದಂತೆ ಎಲ್ಲಾ ಪ್ರಕರಣಗಳ ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಮಂಗಳವಾರ ಈ ಕುರಿತು ಟ್ವೀಟ್ ಮಾಡಿರುವ ಅವರು, "ಶಿವಮೊಗ್ಗದ ಬಿಜೆಪಿ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ, ಆ ನಂತರದ ಶವಯಾತ್ರೆ ಸಂದರ್ಭದಲ್ಲಿ ನಡೆದ ಗಲಭೆ, ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ, ಹಲ್ಲೆ, ಕಲ್ಲು ತೂರಾಟ, ಸರ್ಕಾರದ ಸಚಿವ ಸ್ಥಾನದಲ್ಲಿರುವ ಈಶ್ವರಪ್ಪ ಶವಯಾತ್ರೆಯ ಮುಂದಾಳತ್ವ ವಹಿಸುವ ಮೂಲಕ 144 ಸೆಕ್ಷನ್ ನ ಉಲ್ಲಂಘನೆ ಮಾಡಿರುವುದು ಈ ಎಲ್ಲಾ ಒಟ್ಟು ಘಟನೆಗಳನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇನೆ" ಎಂದು ಹೇಳಿದ್ದಾರೆ.
ಶಿವಮೊಗ್ಗ ನಗರದಲ್ಲಿ ಕರ್ಫ್ಯೂ ವಿಸ್ತರಣೆ; ಇನ್ನು ಶಿವಮೊಗ್ಗ ನಗರದಲ್ಲಿ ಜಾರಿಯಲ್ಲಿದ್ದ ಕರ್ಫ್ಯೂವನ್ನು ಫೆಬ್ರವರಿ 25ರ ಬೆಳಗ್ಗೆ ತನಕ ವಿಸ್ತರಣೆ ಮಾಡಲಾಗಿದೆ. ಬುಧವಾರ ಬೆಳಗ್ಗೆ 6 ಗಂಟೆ ತನಕ ಮೊದಲು ಕರ್ಫ್ಯೂ ಜಾರಿಗೊಳಿಸಲಾಗಿತ್ತು.
ಮಂಗಳವಾರ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಈ ಕುರಿತು ಆದೇಶ ಹೊರಡಿಸಿದ್ದಾರೆ. "ಬುಧವಾರ ಬೆಳಗ್ಗೆವರೆಗೆ ಕರ್ಫ್ಯೂ ಇತ್ತು. ಆದರೆ ಕೆಲವು ಘಟನೆಗಳು ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆವರೆಗೆ ಕರ್ಫ್ಯೂ ವಿಸ್ತರಣೆ ಮಾಡಲಾಗುತ್ತಿದೆ" ಎಂದು ಹೇಳಿದ್ದಾರೆ.
ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಯಲ್ಲಿರುವ ಕಾರಣ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ರಿಂದ 9 ಗಂಟೆವರೆಗೆ ಅವಕಾಶ ಕಲ್ಪಿಸಲಾಗುತ್ತಿದೆ.
ಶಿವಮೊಗ್ಗ ನಗರದ ದೊಡ್ಡಪೇಟೆ, ಕೋಟೆ ಮತ್ತು ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯನ್ನು ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ನಗರದಲ್ಲಿ ಭದ್ರತೆಗೆ ಪೊಲೀಸರು ಮತ್ತು ಆರ್. ಎ. ಎಫ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಮಂಗಳವಾರ ಪೊಲೀಸರು ಮತ್ತು ಆರ್. ಎ. ಎಫ್. ಸಿಬ್ಬಂದಿ ಎಎ ಸರ್ಕಲ್, ಓ. ಟಿ. ರಸ್ತೆ, ಸೀಗೆಹಟ್ಟಿ, ಬಿ. ಬಿ. ರಸ್ತೆ, ವಂದನಾ ಟಾಕೀಸ್, ಸಿದ್ದಯ್ಯ ಸರ್ಕಲ್, ಎಂ. ಕೆ. ಕೆ. ರಸ್ತೆ, ಶಿವಪ್ಪನಾಯಕ ಸರ್ಕಲ್, ಲಷ್ಕರ್ ಮೊಹಲ್ಲದಲ್ಲಿ ಪಥ ಸಂಚಲನ ನಡೆಸಿದರು.












Click it and Unblock the Notifications