ಮೇ 16ರಿಂದ ಆಗುಂಬೆ ಘಾಟ್ ರಸ್ತೆ ವಾಹನ ಸಂಚಾರಕ್ಕೆ ಮುಕ್ತ
ಶಿವಮೊಗ್ಗ, ಮೇ 14 : ಆಗುಂಬೆ ಘಾಟ್ ರಸ್ತೆಯಲ್ಲಿ ಮೇ 16 ರಿಂದ ವಾಹನ ಸಂಚಾರ ಆರಂಭವಾಗಲಿದೆ. ಏಪ್ರಿಲ್ 1ರಿಂದ ರಸ್ತೆ ದುರಸ್ತಿಗಾಗಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. ಮೇ 16ರಿಂದ ದ್ವಿಚಕ್ರ ವಾಹನ, ಕಾರು ಮತ್ತು ಮಿನಿ ಬಸ್‌ಗಳು ಘಾಟ್ ರಸ್ತೆಯಲ್ಲಿ ಸಂಚಾರ ನಡೆಸಬಹುದಾಗಿದೆ.
ಭಾರಿ ಸರಕು ಸಾಗಣೆ ವಾಹನಗಳಿಗೆ ಮಾತ್ರ ಪ್ರವೇಶವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕಾಂಕ್ರಿಟ್ ಕಾಮಗಾರಿ ಕ್ಯೂರಿಂಗ್ ಹಂತದಲ್ಲಿರುವುದರಿಂದ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಜೂನ್ 1ರ ತನಕ ಭಾರಿ ವಾಹನಗಳು ಸಂಚಾರ ನಡೆಸುವಂತಿಲ್ಲ.

ಕಾಮಗಾರಿ ಪೂರ್ಣಗೊಂಡಿಲ್ಲ : ಆಗುಂಬೆ ಘಾಟ್‌ನ 7ನೇ ತಿರುವಿನಲ್ಲಿ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲವು ಮರಗಳನ್ನು ಕಡಿದು ಕಾಮಗಾರಿ ನಡೆಸಬೇಕಿತ್ತು. ಆದರೆ, ವನ್ಯಜೀವಿ ಮಂಡಳಿ ಅನುಮತಿ ನೀಡದ ಪರಿಣಾಮ ಕಾಮಗಾರಿ ಇನ್ನೂ ಅಂತಿಮಗೊಂಡಿಲ್ಲ.
ತಾತ್ಕಾಲಿಕವಾಗಿ ವಾಹನಗಳಿಗೆ ತೊಂದರೆ ಆಗದಂತೆ ರಸ್ತೆಯ ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. 7ನೇ ತಿರುವಿನಲ್ಲಿ ಸೇರಿದಂತೆ ಹಲವು ಕಡೆ ತುರ್ತು ಕಾಮಗಾರಿಗೆ ಅವಕಾಶ ನೀಡುವಂತೆ ಕೋರಿ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಪತ್ರ ಬರೆಯಲಾಗಿದೆ.
2018ರ ಜುಲೈ 10 ಮತ್ತು 13ರಂದು ಸುರಿದ ಮಳೆಯಿಂದಾಗಿ ಆಗುಂಬೆ ಘಾಟ್ ರಸ್ತೆಯ 7 ಮತ್ತು 14ನೇ ತಿರುವಿನಲ್ಲಿ ಹಾಗೂ ಆನೆ ಬಂಡೆ ಬಳಿ ಗುಡ್ಡ ಕುಸಿತ ಉಂಟಾಗಿತ್ತು. ಈ ಭಾಗದಲ್ಲಿ ಶಾಶ್ವತ ದುರಸ್ತಿ ಕಾಮಗಾರಿಯನ್ನು ನಡೆಸಲು ಘಾಟ್ ರಸ್ತೆ ಬಂದ್ ಮಾಡಲಾಗಿತ್ತು.
ಏಪ್ರಿಲ್ 1 ರಿಂದ 30ರ ತನಕ ಆಗುಂಬೆ ಘಾಟ್‌ನಲ್ಲಿ ವಾಹನ ಸಂಚಾರ ಬಂದ್ ಆಗಿತ್ತು. ಬಳಿಕ ವಾಹನ ಸಂಚಾರ ನಿಷೇಧವನ್ನು ಮೇ 15ರ ತನಕ ವಿಸ್ತರಣೆ ಮಾಡಲಾಗಿತ್ತು.












Click it and Unblock the Notifications