ಏಪ್ರಿಲ್ 1 ರಿಂದ 30ರ ತನಕ ಆಗುಂಬೆ ಘಾಟ್ ರಸ್ತೆ ಬಂದ್
ಶಿವಮೊಗ್ಗ, ಮಾರ್ಚ್ 31 : ಆಗುಂಬೆ ಘಾಟ್ ರಸ್ತೆಯಲ್ಲಿ ಏಪ್ರಿಲ್ 1 ರಿಂದ 30ರ ತನಕ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನ ಸವಾರರಿಗೆ ಶಿವಮೊಗ್ಗ ಜಿಲ್ಲಾಡಳಿತ ಪರ್ಯಾಯ ಮಾರ್ಗಗಳನ್ನು ಸೂಚಿಸಿದೆ.
ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಶಿವಮೊಗ್ಗ-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಆಗುಂಬೆ ಘಾಟ್ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ರಸ್ತೆಯಲ್ಲಿ ಗುಡ್ಡ ಕುಸಿದಿರುವ ಪ್ರದೇಶದಲ್ಲಿ ಶಾಶ್ವತ ದುರಸ್ತಿ ಕಾರ್ಯ ನಡೆಯಲಿದೆ.
ಮೊದಲು ಮಾರ್ಚ್ 1 ರಿಂದ 31ರ ತನಕ ರಸ್ತೆಯನ್ನು ಬಂದ್ ಮಾಡಲು ಆದೇಶ ಹೊರಡಿಸಲಾಗಿತ್ತು. ಆದರೆ, ದ್ವಿತೀಯ ಪಿಯುಸಿ ಪರೀಕ್ಷೆಗಳ ಹಿನ್ನಲೆಯಲ್ಲಿ ಆದೇಶವನ್ನು ಮುಂದೂಡಲಾಗಿತ್ತು. ಸದ್ಯ, ಏಪ್ರಿಲ್ 1 ರಿಂದ 30ರ ತನಕ ರಸ್ತೆ ಬಂದ್ ಆಗಲಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಏಪ್ರಿಲ್ 4ರ ತನಕ ಇರುವ ಕಾರಣ ಈ ಮಾರ್ಗದಲ್ಲಿ ಸಂಚರಿಸುವ ವಿದ್ಯಾರ್ಥಿಗಳಿಗೆ ಆಗುಂಬೆಯ ಸರ್ಕಾರಿ ಶಾಲೆ, ಎಸ್‌ವಿಎಸ್ ಶಾಲೆ ವಿದ್ಯಾರ್ಥಿಗಳು ಓಡಾಡಲು ಮಿನಿ ಬಸ್‌ಗಳಿಗೆ ಅವಕಾಶ ಮಾಡಿಕೊಡಲಾಗಿದೆ...

ರಾಷ್ಟ್ರೀಯ ಹೆದ್ದಾರಿ 169ಎ ಬಂದ್
ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟ್ ಕಿ.ಮೀ.33.70 ಮತ್ತು 37.018 ಕಿ.ಮೀ. ಗುಡ್ಡ ಕುಸಿದಿರುವುದನ್ನು ಶಾಶ್ವತವಾಗಿ ದುರಸ್ಥಿಗೊಳಿಸುವ ಕಾಮಗಾರಿ ಕೈಗೊಳ್ಳುವ ಸಂಬಂಧ 1/4/2019 ರಿಂದ 30/4/2019ರವರೆಗೆ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಗುಡ್ಡ ಕುಸಿತ ಉಂಟಾಗಿದೆ
2018ರ ಜುಲೈ 10 ಮತ್ತು 13ರಂದು ಸುರಿದ ಭಾರಿ ಮಳೆಯಿಂದಾಗಿ ಆಗುಂಬೆ ಘಾಟ್ ರಸ್ತೆಯ 7 ಮತ್ತು 14ನೇ ತಿರುವಿನಲ್ಲಿ ಹಾಗೂ ಆನೆಬಂಡೆ ಬಳಿ ಗುಡ್ಡ ಕುಸಿತ ಉಂಟಾಗಿತ್ತು. ಈ ಭಾಗದಲ್ಲಿ ಶಾಶ್ವತ ದುರಸ್ತಿ ಕಾರ್ಯವನ್ನು ಶಿವಮೊಗ್ಗ ಜಿಲ್ಲಾಡಳಿತ ಕೈಗೊಳ್ಳಲಿದೆ. ಆದ್ದರಿಂದ, ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.

ಪರ್ಯಾಯ ಮಾರ್ಗಗಳು
ಆಗುಂಬೆ ಘಾಟ್ ರಸ್ತೆಯಲ್ಲಿ ಸಂಚಾರ ನಡೆಸುವ ಭಾರಿ ವಾಹನಗಳಾದ ರಾಜಹಂಸ, ಐರಾವತ ಬಸ್ಸುಗಳು ಮತ್ತು ಖಾಸಗಿ ಲಕ್ಸುರಿ ಬಸ್‌ಗಳು, ಬುಲೆಟ್ ಟ್ಯಾಂಕರ್ಸ್, ಷಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸೀಸ್ ವಾಹನಗಳಿಗೆ ಪರ್ಯಾಯ ಮಾರ್ಗಗಳನ್ನು ನೀಡಲಾಗಿದೆ.

ಲಘು ವಾಹನಗಳ ಸಂಚಾರ
ಲಘು ವಾಹನಗಳಾದ ಸಾಮಾನ್ಯ ಬಸ್ಸುಗಳು, ಜೀಪು, ವ್ಯಾನ್, ಎಲ್.ಸಿ.ವಿ.(ಮಿನಿ ವ್ಯಾನ್), ದ್ವಿಚಕ್ರ ವಾಹನಗಳು ತೀರ್ಥಹಳ್ಳಿ-ಕೊಪ್ಪ-ಶೃಂಗೇರಿ-ಮಾಳಾಘಾಟ್-ಕಾರ್ಕಳ-ಉಡುಪಿ ಮೂಲಕ ಸಂಚಾರ ನಡೆಸಬಹುದಾಗಿದೆ.












Click it and Unblock the Notifications