ಶಿವಮೊಗ್ಗ: ಲಂಚ ಪಡೆಯುತ್ತಿದ್ದಾಗಲೇ ಎಸಿಬಿ ದಾಳಿ, ಅಧಿಕಾರಿ ಬಂಧನ
ಶಿವಮೊಗ್ಗ, ಮಾರ್ಚ್ 30: ಲಂಚ ಸ್ವೀಕರಿಸುತ್ತಿದ್ದ ಗ್ರೇಡ್ 1 ಹೆಚ್ಚುವರಿ ಪ್ರಭಾರ ಪಿಡಿಓ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡಸಿ, ಬಂಧಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಎಂ. ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಗ್ರೇಡ್ 1 ಹೆಚ್ಚುವರಿ ಪ್ರಭಾರ ಪಿಡಿಓ ಮುರುಗೇಶ್ ಎಸಿಬಿ ಬಲಿಗೆ ಬಿದ್ದ ಅಧಿಕಾರಿಯಾಗಿದ್ದಾರೆ.
ಒಂದು ಲಕ್ಷ ಲಂಚಕ್ಕೆ ಬೇಡಿಕೆ
ಸ್ಥಳೀಯರೊಬ್ಬರಿಗೆ ಭೂ ಪರಿವರ್ತನೆಗೊಂಡ 10 ಗುಂಟೆ ಜಾಗದ ನಿವೇಶನಗಳಿಗೆ ಪ್ಲಾನಿಂಗ್ ಅಪ್ರೂವಲ್ ಮತ್ತು ಮ್ಯೂಟೇಶನ್ ಮಾಡಿಕೊಡಲು ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಗ್ರೇಡ್ 1 ಹೆಚ್ಚುವರಿ ಪ್ರಭಾರ ಪಿಡಿಓ ಮುರುಗೇಶ್ ಒಂದು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಮೊದಲ ಕಂತಿನಲ್ಲಿ 20 ಸಾವಿರ ರೂ. ಲಂಚದ ಹಣವನ್ನು ಸ್ವೀಕರಿಸಿದ್ದಾನೆ.

ಬುಧವಾರ ಮಧ್ಯಾಹ್ನ ಎರಡನೇ ಕಂತಿನ ಲಂಚದ ಹಣ 30 ಸಾವಿರ ರೂ. ಪಡೆಯುತ್ತಿದ್ದ ವೇಳೆ ಶಿವಮೊಗ್ಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲಂಚದ ಹಣದ ಸಹಿತ ಮುರುಗೇಶ್ ಸಿಕ್ಕಿಬಿದ್ದಿದ್ದಾನೆ. ಆತನನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.
ಪೂರ್ವ ವಲಯ ಪೊಲೀಸ್ ಅಧೀಕ್ಷಕ ಜಯಪ್ರಕಾಶ್ ಮಾರ್ಗದರ್ಶನದಲ್ಲಿ, ಶಿವಮೊಗ್ಗ ಭ್ರಷ್ಟಾಚಾರ ನಿಗ್ರಹ ದಳ ಡಿವೈಎಸ್‌ಪಿ ಜೆ. ಲೋಕೇಶ್ ನೇತೃತ್ವದಲ್ಲಿ, ಇನ್ಸ್‌ಪೆಕ್ಟರ್ ಇಮ್ರಾನ್ ಬೇಗ್, ಸಿಬ್ಬಂದಿ ವಸಂತ ಕಾಯಕದ, ನಾಗರಾಜ, ರಘುನಾಯ್ಕ, ಸುರೇಂದ್ರ, ಅರುಣ್ ಪವಾರ್, ಯೋಗೇಶ್ವರಪ್ಪ, ಚರಣ್ ರಾಜ್, ಜಯಂತ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications