Breaking: ಓಂ ಶಕ್ತಿ ದರ್ಶನ ಪಡೆದು ಬಂದ 6 ಮಹಿಳೆಯರಿಗೆ ಕೊರೊನಾ ಸೋಂಕು; ಶಿವಮೊಗ್ಗದಲ್ಲಿ ಆತಂಕ
ಶಿವಮೊಗ್ಗ, ಜನವರಿ 7: ತಮಿಳುನಾಡಿನಲ್ಲಿ ಓಂ ಶಕ್ತಿ ದರ್ಶನ ಪಡೆದು ಶಿವಮೊಗ್ಗಕ್ಕೆ ಮರಳಿದ ಆರು ಜನರಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಇದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ಶಿವಮೊಗ್ಗ, ಭದ್ರಾವತಿಯಿಂದ ನಾಲ್ಕು ಸಾವಿರಕ್ಕೂ ಅಧಿಕ ಮಹಿಳೆಯರು, ಮಕ್ಕಳು ಓಂ ಶಕ್ತಿ ದರ್ಶನ ಪಡೆಯಲು ತಮಿಳುನಾಡಿಗೆ ತೆರಳಿದ್ದರು. ಅವರೆಲ್ಲ ಶಿವಮೊಗ್ಗ ಜಿಲ್ಲೆಗೆ ಮರಳುತ್ತಿದ್ದಂತೆ ಪರೀಕ್ಷೆ ನಡೆಸಲಾಗಿದ್ದು, ಆರು ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢವಾಗಿದೆ.

ಈ ಕುರಿತು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ""ಬುಧವಾರ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಗುರುವಾರ Random ಟೆಸ್ಟ್ ಮಾಡಿದಾಗ ಮತ್ತೆ ನಾಲ್ವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢವಾಗಿದೆ. ಓಂ ಶಕ್ತಿ ದರ್ಶನ ಪಡೆದು ಬಂದ ಒಟ್ಟು ಆರು ಮಂದಿಗೆ ಸೋಂಕು ತಗುಲಿದೆ,'' ಎಂದು ತಿಳಿಸಿದರು.
ಇನ್ನು ಮೂರ್ನಾಲ್ಕು ದಿನ ನಿಗಾ
ಓಂ ಶಕ್ತಿ ದರ್ಶನ ಪಡೆದು ಹಿಂತಿರುಗುವವರಿಗೆ ಏಳು ದಿನ ಹೋಮ್ ಕ್ವಾರಂಟೈನ್‌ಗೆ ಒಳಗಾಗುವಂತೆ ಸೂಚಿಸಲಾಗಿತ್ತು. ಅದರ ನಡುವೆ Random ಟೆಸ್ಟ್ ಮಾಡಲಾಗುತ್ತಿದೆ. ಈ ವೇಳೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಳ್ಳುತ್ತಿದೆ.

'ದರ್ಶನ ಪಡೆದು ಹಿಂತಿರುಗಿದ ದಿನವೇ ಕೊರೊನಾ ಟೆಸ್ಟ್ ಮಾಡಿದ್ದೇವೆ. ಆ ದಿನವೇ ಪಾಸಿಟಿವ್ ಬರಬೇಕು ಎಂದೇನಿಲ್ಲ. ಮೂರ್ನಾಲ್ಕು ದಿನದ ಬಳಿಕವು ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಇನ್ನೂ ಮೂರ್ನಾಲ್ಕು ದಿನ ಇವರ ಮೇಲೆ ನಿಗಾ ಇಡುತ್ತೇವೆ. Random ಟೆಸ್ಟ್ ಮುಂದುವರೆಸುತ್ತೇವೆ' ಎಂದ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದ್ದಾರೆ.
ಓಂ ಶಕ್ತಿ ಯಾತ್ರಾರ್ಥಿಗಳಿಂದ ಆತಂಕ
ಕೊರೊನಾ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲೇ ಓಂ ಶಕ್ತಿ ದರ್ಶನಕ್ಕೆ ತೆರಳಲಾಗಿತ್ತು. ಶಿವಮೊಗ್ಗ, ಭದ್ರಾವತಿಯಿಂದ 80ಕ್ಕೂ ಹೆಚ್ಚು ಬಸ್‌ಗಳಲ್ಲಿ ಮಹಿಳೆಯರು, ಮಕ್ಕಳು ಪ್ರವಾಸ ಕೈಗೊಂಡಿದ್ದರು. ವಿವಿಧ ದೇಗುಲಗಳಿಗೆ ಭೇಟಿ ನೀಡಿದ ಬಳಿಕ ಶಿವಮೊಗ್ಗಕ್ಕೆ ಹಿಂತಿರುಗಿದ್ದಾರೆ. ನಾಲ್ಕು ಸಾವಿರಕ್ಕೂ ಅಧಿಕ ಮಹಿಳೆಯರು, ಮಕ್ಕಳಿಗೆ ಹೋಮ್ ಕ್ವಾರಂಟೈನ್‌ಗೆ ಸೂಚಿಸಲಾಗಿದೆ.
ಈಗ ಆರು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದು ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಓಂ ಶಕ್ತಿ ಪ್ರವಾಸವೇ ಸೂಪರ್ ಸ್ಪ್ರೆಡರ್ ಆಗುವ ಭೀತಿಯಲ್ಲಿ ಶಿವಮೊಗ್ಗ ಜಿಲ್ಲಾಡಳಿತ ನಿಗಾ ವಹಿಸಿದೆ.












Click it and Unblock the Notifications