ಶಿವಮೊಗ್ಗ: ಹಾಡಹಗಲೇ ಶಿಕ್ಷಕಿಗೆ ಹೆದರಿಸಿ ತಾಳಿ ಕಿತ್ತೊಯ್ದ ಕಳ್ಳರು...!
ಶಿವಮೊಗ್ಗ, ಆಗಸ್ಟ್ 27: ಕೊರೊನಾ ಲಾಕ್ ಡೌನ್ ಬಳಿಕ ಎಲ್ಲೆಡೆ ಅಪರಾಧ ಲೋಕದ ಕರಾಳ ಮುಖ ಮತ್ತೆ ಕಾಣುತ್ತಿದ್ದು, ಕಳ್ಳರು ಹಾಡಹಗಲೇ ಶಿಕ್ಷಕಿಗೆ ಹೆದರಿಸಿ ತಾಳಿ ಕಿತ್ತೊಯ್ದಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ನಡೆದಿದೆ.
ಇತ್ತೀಚಿಗೆ ಶೃಂಗೇರಿಯಲ್ಲಿ ಯುವಕನೊಬ್ಬ ಹಾಡಹಗಲೇ ಚಿನ್ನದ ಅಂಗಡಿಗೆ ನುಗ್ಗಿ ಎಲ್ಲರ ಎದುರೇ ಚಿನ್ನ ಎಗರಿಸಿದ ಘಟನೆ ನಡುವೆಯೇ, ಈಗ ಹೊಸನಗರ ತಾಲ್ಲೂಕಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆರೋಡಿಯಿಂದ ಸಂಸೆ ಬರೇಕಲ್ ಹೋಂ ಸ್ಟೇ ರಸ್ತೆಯಲ್ಲಿ "ವಿದ್ಯಾಗಮ' ಯೋಜನೆಯಡಿ ಮನೆ ಪಾಠಕ್ಕೆ ಹೋಗುತ್ತಿದ್ದ ಶಿಕ್ಷಕಿಯೊಬ್ಬರನ್ನು ಮಾರಕಾಸ್ತ್ರ ತೋರಿಸಿ ಬೆದರಿಸಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಆರೋಡಿ ಕೊಡಸೆ ಸರ್ಕಾರಿ ಶಾಲಾ ಶಿಕ್ಷಕಿ ಮಂಜುಳಾ ತಮ್ಮ ಬೈಕಿನಲ್ಲಿ ಆರೋಡಿಯಿಂದ ಸಂಸೆ ಕಡೆ ಹೋಗುತ್ತಿದ್ದ ವೇಳೆ, ಬೈಕ್ ನಲ್ಲಿ ಬಂದ ಮೂವರು ಅಡ್ಡಗಟ್ಟಿ, ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿದ್ದಾರೆ. ನಂತರ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಮಾಂಗಲ್ಯ ಸರ, ಬಳೆ, ಉಂಗುರ ಸೇರಿ 4 ಲಕ್ಷ ರುಪಾಯಿಗೂ ಹೆಚ್ಚು ಮೌಲ್ಯದ 92 ಗ್ರಾಂ ಚಿನ್ನಾಭರಣವನ್ನು ದೋಚಿದ್ದಾರೆ ಎಂದು ಶಿಕ್ಷಕಿ ದೂರಿನಲ್ಲಿ ತಿಳಿಸಿದ್ದಾರೆ.
ಕೊರೊನಾ ವೈರಸ್ ಹೊಡೆತದಿಂದ ಉದ್ಯೋಗ, ದುಡಿಮೆ ಇಲ್ಲದೆ ಕೆಟ್ಟ ದಾರಿಗೆ ಇಳಿಯುತ್ತಿರುವ ಪ್ರಕರಣಗಳು ಹೆಚ್ಚಿವೆ. ಈ ನಡುವೆ ಅಲ್ಲಲ್ಲಿ ಇಂತಹ ಪ್ರಕರಣಗಳು ವರದಿ ಆಗುತ್ತಿವೆ.












Click it and Unblock the Notifications