ಮಹಿಳಾ ದಿನದ ವಿಶೇಷ ; 4 ಸಾವಿರ ಶವಗಳಿಗೆ ಮುಕ್ತಿ ಕೊಟ್ಟ ಮಹಿಳೆ
ರಾಮನಗರ, ಮಾರ್ಚ್ 07: ಇಂದು ವಿಶ್ವ ಮಹಿಳಾ ದಿನಾಚರಣೆ. ಸಾಧನೆಗೆ ವಿದ್ಯೆ, ಬಡತನ ಎಂಬುದು ಅಡ್ಡಿಯಾಗುವುದಿಲ್ಲ ಎನ್ನುವುದನ್ನು ಬಡತನದಲ್ಲಿ ಹುಟ್ಟಿ, ಕೇವಲ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ ಮಹಿಳೆ ತೋರಿಸಿಕೊಟ್ಟಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಮಹಿಳೆ ಅನಾಥ ಶವಗಳಿಗೆ ಮುಕ್ತಿ ಕರುಣಿಸಿ ಬಂಧುವಾಗಿದ್ದಾರೆ.
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಲವು ಮಹನೀಯರು ತಮ್ಮ ಕೆಲಸದ ಮೂಲಕ ಸಮಾಜದ ಗಮನ ಸೆಳೆದಿದ್ದಾರೆ. ಸತ್ತವರನ್ನ ಮುಟ್ಟಲು ಸಂಬಂಧಿಕರೇ ಹಿಂಜರಿಯುತ್ತಾರೆ. ಆದರೆ ಅನಾಥ ಶವಗಳಿಗೆ ಆಶಾ ಎಂಬ ಮಹಿಳೆ ತಾನೇ ಸಂಬಂಧಿಯಾಗಿ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ. ಜಗತ್ತನ್ನೇ ನಡುಗಿಸಿದ ಒಂದು ಮತ್ತು ಎರಡನೇ ಕೋವಿಡ್ ಅಲೆಯಲ್ಲಿ ಮೃತಪಟ್ಟವರನ್ನೂ ನೋಡಲು ಸಂಬಂಧಿಕರು ಹೆದರಿ ಮನೆ ಸೇರಿದ ಸಮಯದಲ್ಲೂ ಎದೆಗುಂದದೆ ಆಶಾ ಮುಂದೆ ನಿಂತು ಅಂತ್ಯ ಸಂಸ್ಕಾರ ಮಾಡಿದ್ದಾರೆ.
ಯಾವುದೇ ಫಲಫೇಕ್ಷೆಗಳಿಲ್ಲದೆ ಕಳೆದ ಆರು ವರ್ಷಗಳಿಂದಲ್ಲೂ ಸಾವಿರಾರೂ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ನಡೆಸುವ ಮೂಲಕ ಅನಾಥ ಶವಗಳ ಪೋಷಕರಾಗಿರುವ ಆಶಾ, ಜೈಪುರದಲ್ಲಿ ಹುಟ್ಟಿದವರು ಕೂಲಿ ಕೆಲಸಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆಶಾ ಅವರ ಭಾವ ಪ್ರವೀಣ್ ಆಂಬ್ಯುಲೆನ್ಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಅದೊಂದು ದಿನ ಪ್ರವೀಣ್‌ಗೆ ಒಂದು ಕರೆ ಬರುತ್ತದೆ. ರೈಲ್ವೆ ಹಳಿಯ ಮೇಲೆ ಒಂದು ಅನಾಥ ಮೃತದೇಹ ಬಿದ್ದಿದೆ ಬನ್ನಿ ಎಂದು ಆಗ ಆಶಾ ಕೂಡ ಜೊತೆ ಹೋಗುತ್ತಾರೆ. ಅಲ್ಲಿ ಮೃತದೇಹ ಛಿದ್ರವಾಗಿ ಬಿದ್ದಿರುತ್ತದೆ ಅದನ್ನ ಮುಟ್ಟಲು ಯಾರೋಬ್ಬರು ಮುಂದೆ ಬಾರದ್ದನ್ನು ಮನಗೊಂಡು ಅಂದಿನಿಂದ ಅನಾಥ ಶವಗಳ ಸಂಸ್ಕಾರ ಮಾಡುವ ಕಾಯಕ ಪ್ರಾರಂಭಿಸಿದ್ದಾರೆ ಆಶಾ.

4886ಕ್ಕೂ ಅಧಿಕ ಶವ ಸಂಸ್ಕಾರ
ಬೀದಿಬದಿ ಮೃತ ಪಡುವವರಿಗೆ, ವಾರಸುದಾರರಿದ್ದರೂ ದಿಕ್ಕಿಲ್ಲದೇ ಬೀದಿ ಹೆಣವಾಗುವವರಿಗೆ ಆಶಾ ಅಂತಿಮ ವಿಧಿವಿಧಾನ ನೆರವೇರಿಸುತ್ತಾರೆ. ಕಳೆದ ಆರು ವರ್ಷಗಳಿಂದ ಸುಮಾರು 4886 ಕ್ಕೂ ಹೆಚ್ಚು ಶವಗಳಿಗೆ ಪೋಷಕರಾಗಿ, ಮುಕ್ತಿ ಕೊಡಿಸಿದ್ದಾರೆ. ಇದಕ್ಕೆಂದೇ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಆಶಾ ಮನೆಯಲ್ಲಿ ಇಬ್ಬರು ಮಕ್ಕಳಿದ್ದರೂ, ಮಕ್ಕಳ ಹಾರೈಕೆಯ ಜೊತೆ ಜೊತೆಗೆ ಅನಾಥ ಶವಗಳಿಗೂ ಅಂತಿಮ ಕಾರ್ಯ ನಡೆಸುತ್ತಿದ್ದಾರೆ.

ಕೋವಿಡ್ ಕಾಲದಲ್ಲಿಯೂ ಮಾಡಿದ್ದಾರೆ
ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ ಮೃತದೇಹಗಳನ್ನ ಮುಂದೆ ನಿಂತು ಮಹಾಮಾರಿಗೂ ಅಂಜದೇ ಆಶಾ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಅನಾಥ ಶವಗಳಿಗೆ ವಾರಸುದಾರರಾಗಲು ಯಾರೂ ಮುಂದೆ ಬಾರದೆ ಇರುವ ಇಂತಹ ಕಾಲದಲ್ಲಿ ಆಶಾ ತನ್ನ ದಿಟ್ಟತನವನ್ನ ತೋರಿ ಆ ಒಂದು ಘಟನೆಯನ್ನ ಪ್ರೇರಣೆಯಾಗಿ ತೆಗೆದುಕೊಂಡು ಅನಾಥ ಶವಗಳಿಗೆ ಮುಕ್ತಿ ನೀಡುತ್ತಿದ್ದಾರೆ. ಅನಾಥ ಶವಗಳಿಗೆ ಮುಕ್ತಿ ನೀಡುವ ಕಾರ್ಯಕ್ಕೆ ಸಮಯದ ನಿಗದಿ ಇಲ್ಲ.

ರಾಮನಗರದಲ್ಲಿ ಮಾತ್ರವಲ್ಲ
ಕೇವಲ ರಾಮನಗರ ಜಿಲ್ಲೆ ಮಾತ್ರವಲ್ಲ. ಎಲ್ಲಿಂದ ಕರೆ ಬರುತ್ತೋ ಅಲ್ಲಿಗೆ ಹೋಗಿ ಶವದ ಅಂತ್ಯ ಸಂಸ್ಕಾರ ಮಾಡಿ ಬರುತ್ತಾರೆ. ಇನ್ನೂ ಕೇವಲ ಅನಾಥ ಶವಗಳ ಅಂತ್ಯ ಸಂಸ್ಕಾರ ಮಾಡುವುದಲ್ಲದೆ ಸಮಾಜ ಮುಖಿ ಕೆಲಸಗಳನ್ನು ಮಾಡಿ ಆಶಾ ಸೈ ಎನಿಸಿಕೊಂಡಿದ್ದಾರೆ. ಜೀವ ರಕ್ಷಾ ಚಾರಿಟಬಲ್ ಟ್ರಸ್ಟ್ ಮಾಡಿಕೊಂಡಿರುವ ಇವರು ಲಾಕ್ಡೌನ್ ಆದ ಸಮಯದಲ್ಲಿ 40 ದಿನಗಳ ಕಾಲ ಬೆಳಗ್ಗೆ ಸಂಜೆ ರಾಮನಗರದ ಪ್ರಮುಖ ರಸ್ತೆಗಳಲ್ಲಿನ ನಿರ್ಗತಿಕರಿಗೆ ಅನ್ನದಾನ ಕೂಡ ಮಾಡಿದ್ದಾರೆ.

ಪೊಲೀಸರ ಸಮ್ಮುಖದಲ್ಲೇ ಕಾರ್ಯ
ರೈಲ್ವೇ ಪೋಲಿಸರು ಹಾಗೂ ರಾಮನಗರ ಜಿಲ್ಲೆಯ ಪೊಲೀಸರಿಗೆ ಎಲ್ಲಾದರೂ ಅನಾಥ ಶವಗಳು ಸಿಕ್ಕಲ್ಲಿ ಮೊದಲಿಗೆ ಆಶಾ ಅವರಿಗೆ ವಿಷಯ ತಿಳಿಸುತ್ತಾರೆ. ತಕ್ಷಣ ಆಶಾ ತಮ್ಮ ಆಂಬ್ಯುಲೆನ್ಸ್ ತೆಗೆದುಕೊಂಡು ಹೋಗಿ ಶವವನ್ನು ತಂದು ಪೊಲೀಸರ ಸಮ್ಮುಖದಲ್ಲೇ ಅಂತ್ಯ ಸಂಸ್ಕಾರ ಮಾಡುತ್ತಾರೆ. ಅದರಲ್ಲೂ ರಾಮನಗರದ ಹಿಂದೂ ರುಧ್ರಭೂಮಿಯಲ್ಲಿ ಹೆಚ್ಚು ಅನಾಥ ಶವಗಳ ಅಂತ್ಯ ಸಂಸ್ಕಾರ ಮಾಡಲಾಗಿದೆ. ಇನ್ನು ಯಾರೂ ಮಾಡದ ಕೆಲಸ ಓರ್ವ ಮಹಿಳೆ ಮಾಡುತ್ತಿರುವುದಕ್ಕೆ ಹಲವು ಸಂಘ ಸಂಸ್ಥೆಗಳು ಆಶಾ ಅವರನ್ನ ಸನ್ಮಾನ ಮಾಡುವ ಮೂಲಕ ಗೌರವ ಸಲ್ಲಿಸುತ್ತಿದ್ದಾರೆ.












Click it and Unblock the Notifications