ಬೆಂಗಳೂರು ತ್ಯಾಜ್ಯ ರಾಮನಗರಕ್ಕೆ ತಂದರೆ ಕಸದ ಲಾರಿಗೆ ಬೆಂಕಿ ಹಚ್ಚುತ್ತೇವೆ: ಸರ್ಕಾರಕ್ಕೆ ಎಚ್ಚರಿಕೆ
ರಾಮನಗರ, ಅಕ್ಟೋಬರ್ 16: ಬೃಹತ್ ಬೆಂಗಳೂರು ಮಹಾ ನಗರ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಮಾಡಲು ರಾಮನಗರ ಜಿಲ್ಲೆಯಲ್ಲಿ ಅಗತ್ಯ ಭೂಮಿ ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಸರ್ಕಾರ ಸೂಚನೆ ನೀಡಿರುವ ಬೆನ್ನಲ್ಲೇ ಸರ್ಕಾರದ ವಿರುದ್ಧ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಗೆ ಬೆಂಗಳೂರಿನ ಕಸವನ್ನು ಹೊತ್ತು ವಾಹನಗಳು ಜಿಲ್ಲೆ ಪ್ರವೇಶ ಮಾಡಿದರೆ ಕಸದ ಸಮೇತ ಲಾರಿಗಳಿಗೆ ಬೆಂಕಿ ಹಾಕುವ ಎಚ್ಚರಿಕೆಯನ್ನು ರೇಷ್ಮೆನಾಡು ರಾಮನಗರದ ಹರಿಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಜೆಡಿಎಸ್ ಕಾರ್ಯಕರ್ತರು ಹರಿಸಂದ್ರ ಗ್ರಾಮ ಪಂಚಾಯತಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಡಿಕೆಶಿ ಸಹೋದರರಿಂದ ಜನರ ಭಾವನೆಗಳಿಗೆ ನೋವು ತರುವ ಕೆಲಸ
ಬಿಬಿಎಂಪಿ ವ್ಯಾಪ್ತಿಯ ಕಸವನ್ನು ತಾಲೂಕಿನ ಕಸಬಾ ಹೋಬಳಿಯ ಹರಿಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಲೇವಾರಿ ಮಾಡಲು ಗುರುತಿಸಲಾಗಿದೆ ಎಂಬ ಸುದ್ದಿ ಹೊರಬಿದ್ದ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸಿ, ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವವಹಿಸಿದ ಜೆಡಿಎಸ್ ಮುಖಂಡ ನರಸಿಂಹಮೂರ್ತಿ ಮಾತನಾಡಿ, "ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಅಭ್ಯರ್ಥಿ ಹಾಗಾಗಿ ಜಿಲ್ಲೆ ಅಭಿವೃದ್ಧಿ ಶ್ರಮಿಸುತ್ತಾರೆ ಎಂದು ಮೂರು ಕೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಳಿಸಿದ್ದಾರೆ. ಆದರೆ ತಮ್ಮ ಆಯ್ಕೆ ಮಾಡಿದ ಜನರ ಭಾವನೆಗಳಿಗೆ ನೋವು ತರುವ ಕೆಲಸಕ್ಕೆ ಡಿಕೆಶಿ ಸಹೋದರರು ಮುಂದಾಗಿದ್ದಾರೆ.
ಜಿಲ್ಲೆಯ ಜನರ ಆಶೀರ್ವಾದ ದಿಂದ ಚುನಾವಣೆಯಲ್ಲಿ ಗೆದ್ದು ಬ್ರಾಂಡ್ ಬೆಂಗಳೂರು ನೆಪದಲ್ಲಿ ರೇಷ್ಮೆನಾಡನ್ನು ಕಸದ ಬೀಡು ಮಾಡಲು ಮುಂದಾಗಿದ್ದಾರೆ. ಬಿಬಿಎಂಪಿ ಕಸವನ್ನು ರಾಮನಗರದಲ್ಲಿ ವಿಲೇವಾರಿ ಮಾಡುವ ಮೂಲಕ ಬೆಂಗಳೂರು ಜನರ ವಿಶ್ವಾಸಗಳಿಸಿ, ಲೋಕಸಭಾ ಚುನಾವಣೆಯಲ್ಲಿ ತಮ್ಮ ಸಹೋದರ ಡಿ.ಕೆ.ಸುರೇಶ್ ಓಟ್ ಬ್ಯಾಂಕ್ ಹೆಚ್ಚಿಸಿಕೊಳ್ಳಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹುನ್ನಾರ ನಡೆಸಿದ್ದಾರೆ" ಎಂದು ಆರೋಪಿಸಿದರು.

ಕಸ ವಿಲೇವಾರಿಯಿಂದ ರೇಷ್ಮೆ ಬೇಸಾಯಕ್ಕೆ ಮಾರಕ
ಹರಿಸಂದ್ರ ಗ್ರಾಮದ ರೈತ ಚಂದ್ರಶೇಖರ್ ಮಾತನಾಡಿ "ಹರಿಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 30 ಕ್ಕೂ ಹೆಚ್ಚು ಹಳ್ಳಿಗಳು ಅಕ್ಕಪಕ್ಕದಲ್ಲಿವೆ. ಅಲ್ಲದೇ ರಾಮನಗರ ಪಟ್ಟಣದ ಹಲವು ಬಡವಾಣೆಗಳಿಗೆ ಕುಡಿಯುವ ನೀರು ಒದಗಿಸುವ ಅರ್ಕಾವತಿ ಕಾಲುವೆ ಈ ಭಾಗದಲ್ಲಿ ಹಾದು ಹೋಗಿದೆ ಹಾಗಾಗಿ ಈ ಪ್ರದೇಶ ಕಸ ವಿಲೇವಾರಿ ಸೂಕ್ತವಾಗಿಲ್ಲ.
ಸರ್ಕಾರ ಕಸದ ಡಂಪಿಂಗ್ ಯಾರ್ಡ್ ಮಾಡಲು ಮುಂದಾಗಿರುವ ತಾಲೂಕಿನ ಕಸಬಾ ಹೋಬಳಿಯಲ್ಲಿ ಅತಿ ಹೆಚ್ಚು ರೇಷ್ಮೆ ಬೇಸಾಯ ಮಾಡುತ್ತಾರೆ. ಒಂದು ವೇಳೆ ಬಿಬಿಎಂಪಿ ಕಸವನ್ನು ಇಲ್ಲಿ ಸುರಿದರೆ ಯಾವುದೇ ಕಾರಣಕ್ಕೂ ರೇಷ್ಮೆ ಬೇಸಾಯ ಮಾಡಲು ಸಾಧ್ಯವಾಗುವುದಿಲ್ಲ, ರೇಷ್ಮೆನಾಡು ಎಂಬುದು ಕೇವಲ ಹೆರು ಮಾತ್ರ ಉಳಿಯುತ್ತದೆ ರೇಷೆ ಬೇಸಾಯ ಸಂಪೂರ್ಣ ನಾಶವಾಗುತ್ತದೆ" ಎಂದು ರೈತರು ತಮ್ಮ ಆತಂಕ ವ್ಯಕ್ತಪಡಿಸಿದರು.












Click it and Unblock the Notifications