Shiggaon By Election: ಶಿಗ್ಗಾಂವಿಯಲ್ಲಿ ಕಾಂಗ್ರೆಸ್‌ಗೆ ಭಿನ್ನಮತದಿಂದ ಹಿನ್ನಡೆ? ಆಂತರಿಕ ಸಮೀಕ್ಷಾ ವರದಿಯಲ್ಲೇನಿದೆ?
ಹಾವೇರಿ ನವೆಂಬರ್ 10: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಸ್ಪರ್ಧಿಸುತ್ತಿರುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಕಾಂಗ್ರೆಸ್ ತೊಡೆತಟ್ಟಿ ನಿಂತಿದೆ. ಕಾಂಗ್ರೆಸ್ ಹಲವು ತಂತ್ರಗಾರಿಕೆ ಮೂಲಕ ಬೊಮ್ಮಾಯಿ ಭದ್ರಕೇಟೆಯನ್ನು ಒಡೆಲು ಕಸರತ್ತು ನಡೆಸಿದೆ. ಈ ನಡುವೆ ಕಾಂಗ್ರೆಸ್ ನಡೆಸಿದ ಆಂತರಿಕ ಸಮೀಕ್ಷಾ ವರದಿ ಕಾಂಗ್ರೆಸ್ ಕೈ ಸೇರಿದ್ದು ಗೆಲುವಿನ ಲೆಕ್ಕಾಚಾರಗಳು ತಲೆಕೆಳಗಾಗಿವಿ.
ಹೌದು... ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಯಾಸಿರ್ ಖಾನ್ ಪಠಾಣ್ ಅವರನ್ನು ಕಣಕ್ಕಿಳಿಸಿದೆ. ಅವರ ಗೆಲುವಿಗಾಗಿ ಆಡಳಿತ ಪಕ್ಷ ಕಾಂಗ್ರೆಸ್ ಭರ್ಜರಿ ಪ್ರಚಾರ ಕೂಡ ನಡೆಸಿದೆ. ಆದರೆ ಕಾಂಗ್ರೆಸ್ ನಡೆಸಿದ ಆಂತರಿಕಾ ಸಮೀಕ್ಷಾ ವರದಿ ಪ್ರಕಾರ ಶಿಗ್ಗಾಂವಿಯಲ್ಲಿ ಕಾಂಗ್ರೆಸ್‌ಗೆ ಭಿನ್ನಮತದಿಂದ ಹಿನ್ನಡೆಯಾಗುವ ಸೂಚನೆಗಳು ಸಿಕ್ಕಿವೆ.

ಕ್ಷೇತ್ರದಲ್ಲಿ ಜನರನ್ನು ರೀಚ್ ಆಗದ ಪಠಾಣ್‌ಗೆ ಮತಗಳು ಬರುತ್ತವಾ ಎನ್ನುವ ಅನುಮಾನ ಮೂಡಿದೆ. ಇದಲ್ಲದೆ ಬೊಮ್ಮಾಯಿ ಪರ ಮುಸ್ಲಿಂರ ಸಾಫ್ಟ್ ಕಾರ್ನರ್ ಇದ್ದು, ಭರತ್ ಮಾಡಿರುವ ಗ್ರೌಂಡ್ ವರ್ಕ್ ಪ್ಲಸ್ ಆಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಆಂತರಿಕಾ ವರದಿಯಲ್ಲಿ ಗೊತ್ತಾಗಿದೆ. ಹೀಗಾಗಿ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ವೇಗ ನೀಡಬೇಕು ಎನ್ನುವ ಸುಳಿವನ್ನು ವರದಿ ನೀಡಿದೆ.
ಹಾವೇರಿಯಲ್ಲಿ ಉಪಚುನಾವಣೆ ಕದನ ಜೋರಾಗಿ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭರ್ಜರಿ ಮತಬೇಟೆ ನಡೆಸಿ, ಶಿಗ್ಗಾಂವಿ ತಾಲೂಕಿನ ಹಲವು ಪ್ರದೇಶಗಳಲ್ಲಿ ರೋಡ್‌ಶೋ ಕೂಡ ಮಾಡಿದರು. ಅಖಾಡದಲ್ಲಿ ಮಾತಿನ ಯುದ್ಧದ ನಡುವೆ ಕಾಂಗ್ರೆಸ್ ನಡೆಸಿದ ಸಮೀಕ್ಷೆ ಸರ್ಕಾರದ ನಿದ್ದೆಗೆಡಿಸಿದೆ.
ಬೊಮ್ಮಾಯಿಯ ಪ್ರತಿಷ್ಠೆಯ ಕ್ಷೇತ್ರವಾದ ಶಿಗ್ಗಾಂವಿಯಲ್ಲಿ ಬಿಜೆಪಿಗೆ ಸೋಲಿನ ರುಚಿ ತೋರಿಸಲು ಕಾಂಗ್ರೆಸ್ ಸಾಕಷ್ಟು ಕಸರತ್ತು ನಡೆಸಿದೆ. ಐದು ಬಾರಿ ಸೋಲುಂಡಿರುವ ಕಾಂಗ್ರೆಸ್ ಈ ಬಾರಿ ಗೆಲುವಿಗೆ ಶತಪ್ರಯತ್ನ ನಡೆಸಿದೆ. ಇದಕ್ಕಾಗಿ ಕಾಂಗ್ರೆಸ್‌ನ ಮಂತ್ರಿಗಳು, ಶಾಸಕರು ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದು ತೆರೆಮರೆಯಲ್ಲಿ ಗೆಲುವಿನ ಆಟ ಶುರು ಮಾಡಿದ್ದಾರೆ.

ಇನ್ನೂ ಸಚಿವ ಸತೀಶ್ ಜಾರಕಿಹೊಳಿ ನಿದ್ದೆಗೆಟ್ಟು ಕ್ಷೇತ್ರ ಸಂಚಾರ ಮಾಡಿ ಸಮುದಾಯಗಳ ಮನವೊಲಿಸಲು ಯತ್ನಿಸಿದ್ದಾರೆ. ಪಠಾಣ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರಿಂದ ಬಂಡಾಯವೆದಿದ್ದ ಅಜ್ಜಂಪೀರ್ ಖಾದ್ರಿಯ ಕೋಪವನ್ನು ಶಮನ ಮಾಡಲು ಯಶಸ್ವಿಯಾಗಿರುವ ಕಾಂಗ್ರೆಸ್ ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಮುನ್ನುಗ್ಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪ್ರಚಾರದ ಹಾದಿಯಲ್ಲಿ ಎಲ್ಲವೂ ಸುಗಮವಾಗಿ ಸಾಗುತ್ತಿದೆ. ಆದರೆ ಕಾಂಗ್ರೆಸ್ ನಡೆಸಿದ ಆಂತರಿಕ ವರದಿ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ನಿದ್ದೆಗೆಡಿಸಿದ್ದು ಕೈ ನಾಯಕರು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ.
ಶಿಗ್ಗಾಂವಿ ಕ್ಷೇತ್ರ ಸದ್ಯ ಭರತ್ ಬೊಮ್ಮಾಯಿ ಹಾಗೂ ಯಾಸಿರ್ ಖಾನ್ ಪಠಾಣ್ ಕದನದ ಕ್ಷೇತ್ರವಾಗಿರದ ಬಸವರಾಜ್ ಬೊಮ್ಮಾಯಿ ಹಾಗೂ ಕಾಂಗ್ರೆಸ್ ನಡುವಿನ ಕದನವಾಗಿದೆ. ಒಟ್ಟಿನಲ್ಲಿ ಶತಾಯಗತಾಯ ಬಿರುಸಿನ ಪ್ರಚಾರದ ಮೂಲಕ ಜಾತಿಲೆಕ್ಕಾಚಾರದಲ್ಲಿ ಸಮುದಾಯಗಳನ್ನು ಸೆಳೆಯುತ್ತಾ ಕಾಂಗ್ರೆಸ್ ಗೆಲ್ಲಲು ಶತಪ್ರಯತ್ನ ನಡೆಸಿದೆ. ಶಿಗ್ಗಾಂವಿ ಜನ ಯಾರ ಕೈ ಹಿಡಿಯುತ್ತಾರೆಂದು ಕಾದು ನೋಡಬೇಕಿದೆ.












Click it and Unblock the Notifications