ಎಚ್‌ಡಿಕೆ ಹುಟ್ಟುಹಬ್ಬ; ಪರಿಸರ ರಕ್ಷಣೆ ಪಣತೊಟ್ಟ ಅಭಿಮಾನಿಗಳು
ರಾಮನಗರ, ಡಿಸೆಂಬರ್ 16; 'ಕಾಡು ಬೆಳಸಿ ನಾಡು ಉಳಿಸಿ' ಎಂಬ ಸಂದೇಶದೊಂದಿಗೆ ರೈತರಿಗೆ ಸಸಿಗಳನ್ನು ವಿತರಣೆ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯತು.
ರಾಮನಗರದಲ್ಲಿ ಬುಧವಾರ ವಿನೂತನವಾಗಿ ಎಚ್. ಡಿ. ಕುಮಾರಸ್ವಾಮಿ ಅವರ 61ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ಆಚರಣೆ ಮಾಡಿದರು. ರಾಮನಗರ ತಾಲೂಕು ಜೆಡಿಎಸ್ ಘಟಕದಿಂದ ಹುಟ್ಟು ಹಬ್ಬ ಆಚರಣೆ ಮಾಡಲಾಯಿತು.
ನಗರದ ಎಪಿಎಂಸಿ ಆವರಣದಲ್ಲಿ ರೈತರಿಗೆ ತೆಂಗು, ಮಾವು ಹಾಗೂ ಅಡಕೆ ಸಸಿಗಳನ್ನು ವಿತರಿಸಲಾಯಿಸಿ 'ಕಾಡು ಬೆಳಸಿ ನಾಡು ಉಳಿಸಿ' ಎಂಬ ಸಂದೇಶವನ್ನು ಸಾರಿದರು. ಬೃಹತ್ ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್ ಮಾತನಾಡಿ, "ನಮ್ಮ ನೆಚ್ಚಿನ ನಾಯಕರಾದ ಕುಮಾರಸ್ವಾಮಿಯವರ ಜನ್ಮದಿನವನ್ನು ಈ ಬಾರಿ ಕಾಡು ಬೆಳೆಸಿ, ನಾಡು ಉಳಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಿದ್ದೇವೆ" ಎಂದರು.
"ಕುಮಾರಸ್ವಾಮಿ ಅವರಿಗೆ ಆರೋಗ್ಯ, ಆಯುಷ್ಯ ವೃದ್ಧಿಸಿ ಇನ್ನೂ ಹೆಚ್ಚಿನ ಜನಸೇವೆ ಮಾಡಲು ಭಗವಂತ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದೆವು. ರೈತರು ಹಾಗೂ ನಾಗರಿಕರು ಸೇರಿದಂತೆ 61 ಮಂದಿಗೆ ತಲಾ ಒಂದೊಂದು ಮಾವು, ತೆಂಗು ಹಾಗೂ ಅಡಕೆ ಸಸಿಗಳನ್ನು ವಿತರಣೆ ಮಾಡಲಾಗಿದೆ" ಎಂದು ಹೇಳಿದರು.
"ಈಗಾಗಲೇ ಜನರು ಕೋವಿಡ್ ಕಾರಣದಿಂದಾಗಿ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ, ಸಂಭ್ರಮಾಚರಣೆ ಬೇಡ ಎಂದು ಕುಮಾರಸ್ವಾಮಿ ಅವರು ಸೂಚನೆ ನೀಡಿದ ಹಿನ್ನಲೆಯಲ್ಲಿ ರೈತರಿಗೆ ನೆರವಾಗುವ ದೃಷ್ಟಿಯಿಂದ ಸಸಿಗಳನ್ನು ವಿತರಿಸಿದ್ದೇವೆ" ಎಂದು ರಾಜಶೇಖರ್ ತಿಳಿಸಿದರು.

"ಮತ್ತೊಮ್ಮೆ ಕುಮಾರಸ್ವಾಮಿಯವರು ಈ ನಾಡಿನ ಚುಕ್ಕಾಣಿ ಹಿಡಿಯಬೇಕು ಎಂಬುದು ಕರುನಾಡಿನ ಸಮಸ್ತ ವರ್ಗದ ಮನದಾಳದ ಬಯಕೆಯಾಗಿದೆ. ಅದು ಶೀಘ್ರವೇ ಈಡೇರುವ ಲಕ್ಷಣಗಳು ಈಗಾಗಲೇ ಗೋಚರಿಸಲಾರಂಭಿಸಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ವಕ್ತಾರ ಬಿ. ಉಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಲಕ್ಕೋಜನಹಳ್ಳಿ ದೊರೆಸ್ವಾಮಿ, ಜೆಡಿಎಸ್ ಮುಖಂಡರಾದ ಸಿ.ಎಸ್.ಜಯಕುಮಾರ್, ಪರ್ವಿಜ್ ಪಾಷ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications