ರಾಮನಗರ ಕರಗೋತ್ಸವ: ಶಕ್ತಿ ದೇವತೆಗೆ ಮಡಿಲಕ್ಕಿ ಸಮರ್ಪಿಸಿದ ಶಾಸಕ ಇಕ್ಬಾಲ್ ಹುಸೇನ್
ರಾಮನಗರ, ಜುಲೈ 04: ಇತಿಹಾಸ ಪ್ರಸಿದ್ಧ ರಾಮನಗರ ಕರಗೋತ್ಸವ ಇಂದು(ಜುಲೈ 04) ಸಂಜೆ ಅದ್ಧೂರಿಯಾಗಿ ನಡೆಯಲಿದ್ದು, ಇಂದು ಮುಂಜಾನೆಯಿಂಲೇ ಪೂಜಾ ಕೈಕಾರ್ಯಗಳು ಆರಂಭಗೊಂಡಿದೆ. ಶಕ್ತಿ ದೇವತೆ ಚಾಮುಂಡೇಶ್ವರಿ ಹಬ್ಬದ ಸಂಭ್ರಮ ರೇಷ್ಮೆ ನಗರಿಯಲ್ಲಿ ಮನೆ ಮಾಡಿದೆ.
ಕಳೆದ ವಾರದಿಂದಲೇ ಹಬ್ಬಕ್ಕೆ ಚಾಲನೆ ದೊರಕಿದ್ದು, ಇಡೀ ನಗರವನ್ನು ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಜನಪ್ರಿಯ ರಾಮನಗರ ಕರಗೋತ್ಸವಕ್ಕೆ ವಿವಿಧ ಜಿಲ್ಲೆಗಳಿಂದ ಎಲ್ಲಾ ಜಾತಿ, ಧರ್ಮದ ಸುಮಾರು 2.5 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ.

ಸಂಪ್ರದಾಯಿಕವಾಗಿ ಚಾಮುಂಡೇಶ್ವರಿ ಕರಗ ಮಹೋತ್ಸವ ನಡೆಯುತ್ತಿದ್ದು, ಶಾಸಕ ಇಕ್ಬಾಲ್ ಹುಸೇನ್ ಇಂದು ಬೆಳಗ್ಗೆ ಮಡಿಲಕ್ಕಿ ಸೇವೆ ನೆರವೇರಿಸಿದ್ದಾರೆ. ಆದಿಶಕ್ತಿ ಸೇರಿ ನಗರದ ಅಷ್ಠಮಾತೃಕೆಯ ದೇವಾಲಯಗಳಿಗೆ ಮಡಿಲಕ್ಕಿ ಸೇವೆ ನೆರವೇರಿಸಿರುವ ಶಾಸಕರು ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.
ಈ ವೇಳೆ ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್ 'ನನಗೆ ರಾಮನೂ ಒಂದೇ ರಹೀಮನೂ ಒಂದೇ. ನನಗೆ ಈ ದೇವಿಯ ಆಶೀರ್ವಾದದಿಂದ ಶಾಸಕನಾಗುವ ಅವಕಾಶ ಸಿಕ್ಕಿದೆ. ನಾನು ಬೆಳದಿರುವುದೇ ಹಿಂದೂ ಧರ್ಮದವರ ಜೊತೆ. ನಾನು ವಿದ್ಯಾಭ್ಯಾಸ ಮಾಡಿರುವುದು ಪೂಜ್ಯ ಕರಿಯಪ್ಪನವರ ವಿದ್ಯಾ ಶಾಲೆಯಲ್ಲಿ. ನನಗೆ ಎಲ್ಲಾ ದೇವರು ಒಂದೇ' ಎಂದರು.
ರಾಮನಗರ ಕರಗೋತ್ಸವದ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಸಮಂಜರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಕನ್ನಡ ಚಿತ್ರರಂಗದ ಖ್ಯಾತ ನಟರಾದ ಡಾ.ಶಿವ ರಾಜ್‌ಕುಮಾರ್, ಧ್ರುವ ಸರ್ಜಾ, ಡಾಲಿ ಧನಂಜಯ್, ರಾಜ್ ಬಿ.ಶೆಟ್ಟಿ , ನಟಿ ರಚಿತಾ ರಾಮ್, ಗಾಯಕರಾದ ಸಂಜಿತ್ ಹೆಗ್ಡೆ, ನವೀನ್ ಸಜ್ಜು, ನಿರೂಪಕಿ ಅನುಶ್ರೀ ಸೇರಿದಂತೆ ಕಿರುತೆರೆ ಕಲಾವಿದರು ಭಾಗಿಯಾಗಲಿದ್ದಾರೆ.

ಇನ್ನು ವೇದಿಕೆ ಕಾರ್ಯಕ್ರಮದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್, ಜಿಲ್ಲೆಯ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ.
ಇನ್ನು ರಾಮನಗರ ಕರಗೋತ್ಸವದ ಬಗ್ಗೆ ಎಂಇಐ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ ಮಾಹಿತಿ ನೀಡಿದ್ದು, '1991ರಿಂದಲೂ ಕರಗ ಮಹೋತ್ಸವವನ್ನು ಹಂತ ಹಂತವಾಗಿ ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇಂದು ಇಡೀ ರಾಮನಗರದ ಊರಿನ ಹಬ್ಬವಾಗಿ ಕರಗ ಆಚರಿಸಲಾಗುತ್ತಿದೆ. ಹಿಂದೆ ನಡೆಯುತ್ತಿದ್ದ ಕೋಮು ಗಲಭೆಯನ್ನು ನಿಯಂತ್ರಿಸಿ, ಸಮುದಾಯಗಳನ್ನು ಬೆಸೆಯಲು ಕರಗ ಮಹತ್ವದ ಪಾತ್ರ ವಹಿಸಿದೆ ಎಂದರು.
ಒಡೆದ ಮನಸ್ಸು ಒಗ್ಗೂಡಿಸಿದ ಚಾಮುಂಡೇಶ್ವರಿ ಕರಗ ನಗರದ ಕೋಮು ಸೌಹಾರ್ದಕ್ಕೆ ಭದ್ರ ಬುನಾದಿ ಹಾಕಿದೆ. ಕೆಲವರು ಸೌಹಾರ್ದ ಒಡೆಯಲು ಯತ್ನಿಸಿದರೂ, ಜನ ಅದಕ್ಕೆ ಅವಕಾಶ ಕೊಡದೆ ಹಿಂದೂ ಮುಸ್ಲಿಮರ ಒಟ್ಟಾಗಿ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ.
ಹಿಂದೂ ಮತ್ತು ಮುಸ್ಲಿಮರು ಸಹ ಹಿಂದೆ ಚಂದಾ ಹಾಕಿ ಹಬ್ಬ ಆಚರಿಸುತ್ತಿದ್ದರು. ಈ ಸಲ ಶಾಸಕರೇ ನೇತೃತ್ವ ವಹಿಸಿಕೊಂಡು ಖರ್ಚಿನ ಹೊಣೆ ಹೊತ್ತು ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಎಲ್ಲರೂ ಶಾಂತಿ ಮತ್ತು ಸೌಹಾರ್ದದಿಂದ ಕರಗದ ಯಶಸ್ಸಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.












Click it and Unblock the Notifications