ರಂಗುಪಡೆದ ಚುನಾವಣೆ ವರ್ಷದ ಗಣೇಶೋತ್ಸವ; ಗಣೇಶ ಮೂರ್ತಿ ವಿತರಣೆಗೆ ರಾಜಕೀಯ ಪಕ್ಷಗಳ ಪೈಪೋಟಿ
ಚನ್ನಪಟ್ಟಣ, ಆಗಸ್ಟ್ 23: ಕೊರೊನಾವೈರಸ್ ಸಾಂಕ್ರಾಮಿಕದ ಭೀತಿ, ಲಾಕ್ ಡೌನ್, ನಿರ್ಬಂಧಗಳಿಂದ ಕಳೆದು ಎರಡು ವರ್ಷಗಳ ಕಾಲ ಗೌರಿ ಗಣೇಶ ಹಬ್ಬ ಕಳೆಗುಂದಿತ್ತು. ಆದರೆ, ಈ ಬಾರಿ ಹಬ್ಬ ವಿಶೇಷ ರಂಗು ಪಡೆಯುತ್ತಿದೆ. ಅಲ್ಲದೇ ಚುನಾವಣೆ ವರ್ಷವಾದ ಕಾರಣ ಜನಪ್ರತಿನಿಧಿಗಳು ಅದ್ದೂರಿ ಗಣೇಶೋತ್ಸವಕ್ಕೆ ಬೆಂಬಲ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಗಣೇಶ ಹಬ್ಬಕ್ಕೆ ವಿಶೇಷ ರಂಗು ಬಂದಿದೆ.
ಪ್ರತಿ ವರ್ಷದಂತೆ ಈ ಬಾರಿಯು ಉಚಿತವಾಗಿ 501 ಗಣೇಶ ಮೂರ್ತಿಗಳ ವಿತರಣೆಗೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಯಮುತ್ತು ಮುಂದಾಗಿದ್ದಾರೆ. ಜೆಡಿಎಸ್ ಮುಖಂಡರಿಗೆ ಸೆಡ್ಡು ಹೊಡೆದು ಇದೇ ಮೂದಲ ಬಾರಿಗೆ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಕೂಡ ಉಚಿತವಾಗಿ ಗಣೇಶ ಮೂರ್ತಿಗಳನ್ನು ವಿತರಿಸಲು ಮುಂದಾಗಿದ್ದಾರೆ. ಜೆಡಿಎಸ್, ಬಿಜೆಪಿ ಮುಖಂಡರ ಉಚಿತ ಗಣೇಶ ಮೂರ್ತಿ ವಿತರಣೆ ಪೈಪೋಟಿಯಲ್ಲಿ ಗಣೇಶೋತ್ಸವ ರಾಜಕೀಯ ರಂಗು ಪಡೆದಿದೆ.
ಈಗಾಗಲೇ ನಗರದಲ್ಲಿ ಜೆಡಿಎಸ್ ಮುಖಂಡರು ಹಾಗೂ ಬಿಜೆಪಿ ಮುಖಂಡರು ಕಚೇರಿ ತೆರೆದು ಗಣೇಶನ ಮೂರ್ತಿಗಳಿಗೆ ನೋಂದಣಿ ಪ್ರಾರಂಭಿಸಿದ್ದಾರೆ.
ತಾಲ್ಲೂಕಿನ ಯುವಕರು ಉಚಿತ ಗಣೇಶ ಮೂರ್ತಿ ನೋಂದಣಿಗೆ ಮುಗಿಬಿದ್ದಿದ್ದಾರೆ. ಅಲ್ಲದೇ ಪ್ರತಿ ಗಲ್ಲಿ ಗಲ್ಲಿಗಳಲ್ಲಿ ಗಣೇಶೋತ್ಸವ ವಿಜೃಂಭಣೆಯಿಂದ ನಡೆಸಲು ಎಲ್ಲಾ ತಯಾರಿಯಲ್ಲಿ ಮಗ್ನರಾಗಿದ್ದಾರೆ. ವಿವಿಧ ಪಕ್ಷಗಳ ನಡುವೆ ಪೈಪೋಟಿ ಹೇಗಿದೆ ಎಂಬುದರ ವಿವರ ಮುಂದಿದೆ...

ತಾಲೂಕಿನ ಪ್ರತಿ ಗ್ರಾಮಗಳಿಗೂ ಗಣೇಶ ಮೂರ್ತಿ ವಿತರಣೆ
ಕಳೆದ 10 ವರ್ಷದಿಂದಲೂ ಗೌರಿಗಣೇಶ ಹಬ್ಬಕ್ಕೆ ಉಚಿತವಾಗಿ ತಾಲೂಕಿನ ಎಲ್ಲ ಗ್ರಾಮಗಳಿಗೆ ಗಣೇಶನ ಮೂರ್ತಿಗಳನ್ನು ವಿತರಣೆ ಮಾಡುತ್ತಿದ್ದೇನೆ. ನಮ್ಮ ತಾಯಿ ಚನ್ನಮ್ಮ ರವರ ಸವಿ ನೆನಪಿಗಾಗಿ ಚನ್ನಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತವಾಗಿ ಗಣೇಶ ಮೂರ್ತಿಗಳನ್ನು ವಿತರಿಸುತ್ತಿದ್ದೇವೆ. ಹಾಗೆಯೇ ಈ ವರ್ಷವೂ ಟ್ರಸ್ಟ್ ವತಿಯಿಂದ ತಾಲ್ಲೂಕಿನ ಬಹುತೇಕ ಎಲ್ಲಾ ಗ್ರಾಮಗಳಿಗೂ ಗಣೇಶ ಹಬ್ಬದ ಪ್ರಯುಕ್ತ ಉಚಿತ ಗೌರಿ ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು ಎಂದು ಜಯಮುತ್ತು ತಿಳಿಸಿದರು.

ರಾಜಕೀಯ ಲಾಭವಿಲ್ಲ
ಕಳೆದ ಎರಡು ವರ್ಷ ಕೋವಿಡ್ ಮಹಾಮಾರಿಯ ಬೀತಿ ಹಿನ್ನಲೆಯಲ್ಲಿ ಗಣೇಶೋತ್ಸವ ಆಚರಣೆಗೆ ಸರಕಾರ ನಿರ್ಭಂದ ವಿಧಿಸಿದ ಗಣೇಶ ಮೂರ್ತಿ ವಿತರಣೆ ಮಾಡಲು ಸಾಧ್ಯವಾಗಿರಲಿಲ್ಲ , ಈ ಬಾರಿ ಗಣೇಶೋತ್ಸವಕ್ಕೆ ಸರಕಾರ ಅನುಮತಿ ನೀಡಿರುವುದರಿಂದ ಈ ವರ್ಷವು ಕೂಡ 501 ಗಣೇಶ ಮೂರ್ತಿಗಳನ್ನು ವಿತರಣೆ ಮಾಡುತ್ತೇನೆ ಇದರಲ್ಲಿ ಯಾವುದೇ ರಾಜಕೀಯ ಲಾಭಕ್ಕೆ ಮಾಡುತ್ತಿರುವ ಕಾರ್ಯವಲ್ಲ ಎಂದು ಜೆಡಿಎಸ್ ಮುಖಂಡ ಜಯಮುತ್ತು ತಿಳಿಸಿದರು.

1000 ಗಣೇಶ ಮೂರ್ತಿ ವಿತರಿಸಲಿರುವ ಬಿಜೆಪಿ ಯುವ ಘಟಕ
ಗೌರಿ ಗಣೇಶ ಹಬ್ಬ ಸಮೀಸುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನಾಧ್ಯಂತ ಗೌರಿ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಾವಿರದ ಒಂದು ಗಣೇಶ ಮೂರ್ತಿಗಳನ್ನು ತಾಲ್ಲೂಕು ಬಿಜೆಪಿ ಯುವ ಘಟಕದ ವತಿಯಿಂದ ಉಚಿತವಾಗಿ ವಿತರಿಸಲಾಗುತ್ತಿದ್ದೇವೆ ಎಂದು ವಿಧಾನಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಹೇಳಿದ್ದಾರೆ.

ಕೆರೆಕಟ್ಟೆಗಳು ತುಂಬಿರುವುದರಿಂದ ಅದ್ದೂರಿ ಹಬ್ಬ
ಕಳೆದ ಎರಡು ಮೂರು ವರ್ಷಗಳಿಂದ ಕೋವಿಡ್ ಹಾವಳಿಯಿಂದಾಗಿ ಸರಿಯಾಗಿ ಗೌರಿ ಗಣೇಶ ಹಬ್ಬ ಆಚರಿಸಲು ಸಾಧ್ಯವಾಗಿರಲಿಲ್ಲ ಈ ಬಾರಿ ಗೌರಿ ಗಣೇಶ ಹಬ್ಬಕ್ಕೆ ಸರಕಾರ ಎಲ್ಲಾ ನಿರ್ಬಂಧ ತೆಗೆದುಹಾಕಿದ್ದು ಮಳೆಯಿಂದ ಎಲ್ಲಾ ಕೆರೆಕಟ್ಟೆಗಳು ತುಂಬಿವೆ. ಹಾಗಾಗಿ ಈ ಬಾರಿ ಅದ್ದೂರಿ ಗಣೇಶೋತ್ಸವ ಆಚರಣೆ ಮಾಡಲು ಉಚಿತವಾಗಿ ಗಣೇಶ ಮೂರ್ತಿಗಳ ವಿತರಣೆಗೆ ಮುಂದಾಗಿರುವುದಾಗಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಿಳಿಸಿದರು.












Click it and Unblock the Notifications