ಬೆಂಗಳೂರಿಗೆ ಹೋಗುವ ವಿಚಾರದಲ್ಲಿ ಜಗಳ; ಪತ್ನಿ ಕೊಂದು ಪತಿ ಆತ್ಮಹತ್ಯೆ!
ರಾಮನಗರ, ಅಕ್ಟೋಬರ್ 17; ನಗರವಾಸದ ಗೀಳಿಗೆ ಬಿದ್ದ ಪತ್ನಿ ಹಾಗೂ ಪತಿಯ ನಡುವೆ ನಡೆದ ಜಗಳಕ್ಕೆ ಎರಡು ಜೀವಗಳು ಬಲಿಯಾಗಿವೆ. ಪಟ್ಟಣ ವಾಸದ ಆಸೆಗೆ ಬಿದ್ದ ಪತ್ನಿಯನ್ನು ಕೊಂದು ಪತಿ ತಾನು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ನಡೆದಿದೆ.
ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ, ಗುಡ್ಡೆ ವೀರನ ಹೊಸಹಳ್ಳಿ ನಿವಾಸಿ ದೇಸೀಗೌಡ (38) ಪತ್ನಿ ಇಂದಿರಮ್ಮ (31) ಹತ್ಯೆ ಮಾಡಿ ಬಳಿಕ ತಾನೂ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಊರಿನಲ್ಲಿ ಅಂಗಡಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ದಂಪತಿಗಳ ನಡುವೆ ಬೆಂಗಳೂರಿಗೆ ಹೋಗುವ ಕುರಿತು ಜಗಳ ನಡೆಯುತ್ತಿತ್ತು.
ಇಂದಿರಮ್ಮ, ದೇಸೀಗೌಡ ಮಗನೊಂದಿಗೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್‌ನಿಂದಾಗಿ ದಂಪತಿಗಳು ಬೆಂಗಳೂರಿನಿಂದ ಸ್ವಗ್ರಾಮ ಗುಡ್ಡೆವೀರನಹೊಸಹಳ್ಳಿ ಗ್ರಾಮಕ್ಕೆ ವಾಪಸ್ ಬಂದಿದ್ದರು.

ಇತ್ತೀಚೆಗೆ ಕೋವಿಡ್ ಪರಿಸ್ಥಿತಿ ಹತೋಟಿಗೆ ಬಂದಿದ್ದು, ನಗರ ವಾಸಕ್ಕೆ ಗೀಳು ಬಿದಿದ್ದ ಪತ್ನಿ ಇಂದಿರಾ ಪದೇ ಪದೇ ಗಂಡನನ್ನು ಮತ್ತೆ ಬೆಂಗಳೂರಿಗೆ ವಾಪಸ್ ಹೋಗುವಂತೆ ಪೀಡಿಸುತ್ತಿದ್ದಳು. ಗ್ರಾಮದಲ್ಲಿ ಚಿಲ್ಲರೆ ಹಾಗೂ ಕೋಳಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ದಂಪತಿಗಳು ಇತ್ತೀಚೆಗೆ ಗಂಡನನ್ನು ಮೂಲೆಗುಂಪು ಮಾಡಿ ತಾನೇ ಸ್ವತಃ ಅಂಗಡಿಯ ಜವಾಬ್ದಾರಿಯನ್ನು ಇಂದಿರಾ ನೋಡಿಕೊಳ್ಳುತ್ತಿದ್ದಳು.
ಕಳೆದ ಕೆಲ ದಿನಗಳ ಹಿಂದೆ ಮತ್ತೆ ಬೆಂಗಳೂರಿಗೆ ಹೋಗೋಣ ಎಂದು ಕ್ಯಾತೆ ತೆಗೆದಿದ್ದ ಪತ್ನಿಯೊಂದಿಗೆ ದೇಸೀಗೌಡ ಜಗಳ ಮಾಡಿಕೊಂಡಿದ್ದ. ಗ್ರಾಮದ ಹಿರಿಯರು ರಾಜಿ ಪಂಚಾಯಿತಿ ಮಾಡಿಸಿದ್ದರು. ಇದರ ಮಧ್ಯೆ ಹೆಂಡತಿಯ ಉಪಟಳದಿಂದ ಬೇಸತ್ತಿದ್ದ ದೇಸೀಗೌಡ ಇಬ್ಬರು ಜೀವಂತವಾಗಿರಬಾರದು ಎಂಬ ನಿಧಾರಕ್ಕೆ ಬಂದು ತನ್ನ ಪತ್ನಿಯನ್ನು ಚೂರಿಯಿಂದ ಕತ್ತು ಕುಯ್ದು ಕೊಲೆ ಮಡಿ, ತಾನು ಊರ ಹೊರಗಿನ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಷಯ ತಿಳಿದ ಸರ್ಕಲ್ ಇನ್ಸ್‌ಪೆಕ್ಟರ್ ಟಿ. ಟಿ. ಕೃಷ್ಣ, ಸಬ್ ಇನ್ಸ್‌ಪೆಕ್ಟರ್ ಅನಂತರಾಮು ಹಾಗೂ ಕೋಡಿಹಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಶವಗಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಿದ್ದಾರೆ.
ಕ್ಷುಲ್ಲಕ ವಿಚಾರ ವಿಕೋಪಕ್ಕೆ ತಿರುಗಿ ದಂಪತಿಗಳು ಜೀವ ಕಳೆದುಕೊಂಡ ದೃಶ್ಯ ಸುತ್ತಮುತ್ತಲಿನ ಗ್ರಾಮಸ್ಥರ ಮನಕಲಕುವಂತಿತ್ತು. ಕೋಡಿಹಳ್ಳಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಆತ್ಮಹತ್ಯೆ ತಡೆ ಸಹಾಯವಾಣಿ; ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಆರಂಭಿಸಿದೆ. ದೂರವಾಣಿ ಸಂಖ್ಯೆ 080 - 25497777.












Click it and Unblock the Notifications