ರಾಮನಗರದಲ್ಲಿ ಕಾಡಾನೆಗಳ ದಾಳಿಗೆ ಮಾವಿನ ಮರಗಳು ನಾಶ
ರಾಮನಗರ, ಮೇ 30: ಇತ್ತೀಚಿನ ದಿನಗಳಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಾಗಿದ್ದು, ಕಾಡುಪ್ರಾಣಿಗಳ ದಾಳಿಯಿಂದ ಜನರು ಹೈರಾಣಾಗಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ವೆಂಕಟಪ್ಪನದೊಡ್ಡಿ ಗ್ರಾಮದಲ್ಲಿ ಕಳೆದ ರಾತ್ರಿ ಕಾಡಾನೆಗಳು ದಾಂಗುಡಿ ಇಟ್ಟಿದ್ದವು. ಆನೆಗಳ ಹಿಂಡನ್ನು ಕಾಡಿಗೆ ಓಡಿಸುವಾಗ ನೂರಾರು ಮಾವಿನ ಮರಗಳು ನಾಶವಾಗಿವೆ.
ಚಿರತೆ ಮತ್ತು ಕರಡಿ ದಾಳಿಯ ನಡುವೆ ನಿರಂತರವಾಗಿ ಆನೆ ದಾಳಿಯಿಂದ ರೈತರು ಲಕ್ಷಾಂತರ ರುಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಬಿಡಿಗಾಸು ಪರಿಹಾರ ನೀಡುತ್ತಿರುವುದು ಆನೆಯ ಹೊಟ್ಟೆಗೆ ಹರೆಕಾಸಿನ ಮಜ್ಜಿಗೆ ಎನ್ನುವಂತಾಗಿ ರೈತರ ಬದುಕು. ಮುತ್ತತ್ತಿ ಅರಣ್ಯ ಪ್ರದೇಶದಿಂದ ಬಂದಿರುವ 20 ಆನೆಗಳ ಹಿಂಡು, ಕಬ್ಬಾಳು ವಲಯದಲ್ಲಿ ಬೀಡು ಬಿಟ್ಟಿದ್ದು, ಪ್ರತಿ ದಿನ ಕಬ್ಬಾಳು ವಲಯದ ಜಮೀನುಗಳಿಗೆ ಲಗ್ಗೆ ಹಿಟ್ಟು ಅಪಾರ ಪ್ರಮಾಣದ ಬೆಳೆ ನಾಶ ಮಾಡುತ್ತಿವೆ.
ಅರಣ್ಯ ಇಲಾಖೆ ನೀಡುವ ಪರಿಹಾರ ಒಂದು ಮಾವಿನ ಮರಕ್ಕೆ ಕೇವಲ 100 ರಿಂದ 200 ರುಪಾಯಿ ಮಾತ್ರ. ಅದು ಕಚೇರಿ ಅಲೆಯಲು, ಅವರು ಕೇಳುವ ದಾಖಲೆಗಳನ್ನು ಒದಗಿಸಲು ಕೂಡಾ ಹಣ ಸಾಕಾಗುವುದಿಲ್ಲ ಎನ್ನುತ್ತಾರೆ ನೊಂದ ರೈತರು.

ಪ್ರತಿ ವರ್ಷ ಆನೆ ದಾಳಿ ಸಾಮಾನ್ಯವಾಗಿದೆ . ಹಿಂದಿನ ವರ್ಷದಲ್ಲಿ ಆನೆ ದಾಳಿಯಿಂದ ಆದ ಬೆಳೆ ನಷ್ಟ ಪರಿಹಾರ ಇನ್ನೂ ಸಿಕ್ಕಿಲ್ಲ. ಮತ್ತೆ ಗಾಯದ ಮೇಲೆ ಬರೆ ಎಂಬಂತೆ ಇಂದು ನೂರಾರು ಮಾವಿನ ಮರಗಳು ನಾಶವಾಗಿವೆ.
ಇದೇ ರೀತಿ ಮುಂದುವರೆದರೆ ವ್ಯವಸಾಯ ಮಾಡುವುದು ಹೇಗೆ? ಇದ್ದ ಅಲ್ಪ ಸ್ವಲ್ಪ ಜಮೀನಲ್ಲಿ ಸಾಲ ಮಾಡಿ ಮಾಡಿದ ಬೇಸಾಯ, ಆನೆ ದಾಳಿಗೆ ನಾಶವಾಗಿದೆ. ನಾವು ಮುಂದೆ ಜೀವನ ಸಾಗಿಸುವುದು ಹೇಗೆ? ಸರ್ಕಾರ ಸೂಕ್ತ ಪರಿಹಾರ ನೀಡಿದರೆ ಸಹಾಯವಾಗುತ್ತದೆ, ಇಲ್ಲವೆಂದರೆ ಆತ್ಮಹತ್ಯೆ ಒಂದೇ ದಾರಿ ಎಂದು ರೈತರು ಹೇಳುತ್ತಾರೆ.

ಅರಣ್ಯ ಸಿಬ್ಬಂದಿಗಳ ಕೊರತೆಯ ನಡುವೆಯೂ ಆನೆಗಳನ್ನು ಕಾಡಿಗೆ ಓಡಿಸಲು ಅರಣ್ಯ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದು, ಅರಣ್ಯ ಇಲಾಖೆಗೆ ತಲೆ ನೋವಾಗಿರುವ ಕಾಡಾನೆಗಳನ್ನು ಕಾಡಿಗಟ್ಟುವ ಪ್ರಯತ್ನ ನಡೆಯುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.












Click it and Unblock the Notifications