ಮೇಕೆದಾಟು ಪಾದಯಾತ್ರೆ ಆರಂಭ; ಕೋವಿಡ್ ನಿಯಮಗಳು ಗಾಳಿಗೆ
ರಾಮನಗರ, ಜನವರಿ 09; ಕರ್ನಾಟಕದಲ್ಲಿ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದ್ದ ಕಾಂಗ್ರೆಸ್ ನಾಯಕರ ಮೇಕೆದಾಟು ಪಾದಯಾತ್ರೆಗೆ ಭಾನುವಾರ ಚಾಲನೆ ಸಿಕ್ಕಿದೆ. ಕೋವಿಡ್ ಕಠಿಣ ನಿಯಮಗಳು, ವಾರಾಂತ್ಯದ ಕರ್ಫ್ಯೂ ಸೇರಿದಂತೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ.
ಭಾನುವಾರ ಬೆಳಗ್ಗೆ ಮೇಕೆದಾಟು ಸಂಗಮದಲ್ಲಿ ಹಿಂದೂ, ಕ್ರೈಸ್ತ ಧರ್ಮಗುರುಗಳು ಕುಂಡಗಳಲ್ಲಿದ್ದ ಸಸಿಗಳಿಗೆ ನೀರೆರೆಯುವ ಮೂಲಕ ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಿದರು. ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನಗಾರಿ ಬಾರಿಸುವ ಮೂಲಕ ನೀರಿಗಾಗಿ ಹೋರಾಟಕ್ಕೆ ಬದ್ಧ ಎಂಬ ಸಂದೇಶ ಸಾರಿದರು.
ಸರ್ಕಾರದ ಕೋವಿಡ್ ನಿಯಮಗಳನ್ನು ಕೆಲವು ಕಾಂಗ್ರೆಸ್ ನಾಯಕರು ಗಾಳಿಗೆ ತೂರಿದರು. ಪಾದಯಾತ್ರೆ ನೇತೃತ್ವ ವಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾಸ್ಕ್ ಧರಿಸದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಇನ್ನು ಹಲವು ಕಾರ್ಯಕರ್ತರು ಕೂಡಾ ಮಾಸ್ಕ್ ಧರಿಸದೇ ಕಾರ್ಯಕ್ರಮದಲ್ಲಿದ್ದರು.
ಮೇಕೆದಾಟುವಿನಿಂದ ಬೆಂಗಳೂರು ತನಕ 11 ದಿನಗಳ ಕಾಲ ಸುಮಾರು 160 ಕಿ. ಮೀ. ಪಾದಯಾತ್ರೆ ನಡೆಯಲಿದೆ. ರಾಜಕೀಯ ನಾಯಕರಿಗೆ ಒಂದು ನಿಯಮ, ಜನ ಸಾಮಾನ್ಯರಿಗೆ ಒಂದು ನಿಯಮ ಎಂಬುದು ಕಾಂಗ್ರೆಸ್ ಪಾದಯಾತ್ರೆ ಮೂಲಕ ಮತ್ತೆ ಸಾಬೀತಾಯಿತು. ಮಾಸ್ಕ್, ಸಾಮಾಜಿಕ ಅಂತರ ಯಾವ ನಿಯಮಗಳನ್ನು ಪಾಲನೆ ಮಾಡದಿದ್ದರೆ ಯಾರೂ ಸಹ ಕೇಳುವಂತೆ ಇರಲಿಲ್ಲ.

ಮಲ್ಲಿಕಾರ್ಜುನ ಖರ್ಗೆ ಹೇಳಿಕೆ
ಪಾದಯಾತ್ರೆ ಉದ್ಘಾಟಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, "ಬೆಂಗಳೂರು, ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ, ವಿದ್ಯುತ್ ಉತ್ಪಾದನೆ ಮಾಡುವಂತಹ ಯೋಜನೆ ಇದಾಗಿದೆ. ಕಾಂಗ್ರೆಸ್ ಈ ಯೋಜನೆಯನ್ನು ಆರಂಭಿಸುವ ಪ್ರಯತ್ನ ಮಾಡಿತು. ಎಂ. ಬಿ. ಪಾಟೀಲ್ ಸಚಿವರಾಗಿದ್ದಾರೆ ಡಿಪಿಆರ್ ಸ್ವರೂಪ ನೀಡಿದರು. ನಂತರ ಡಿ. ಕೆ. ಶಿವಕುಮಾರ್ ಸಚಿವರಾಗಿದ್ದಾಗ ಯೋಜನೆ ಜಾರಿಗೆ ಪ್ರಯತ್ನ ನಡೆಸಿದರು. ಈ ಯೋಜನೆಯಿಂದ ನಾಡಿಗೆ ಅನುಕೂಲವಾಗುತ್ತದೆ. ಕಾರ್ಯಸಾಧ್ಯ ಆಗುವವರೆಗೂ ಹೋರಾಟದ ಛಲ ಇರಬೇಕು. ಬಿಜೆಪಿ ಸರ್ಕಾರ ಪಾದಯಾತ್ರೆ ವಿಫಲಗೊಳಿಸಲು ಪ್ರಯತ್ನ ಪಡುತ್ತಿದೆ. ಯೋಜನೆಯಿಂದ ತಮಿಳುನಾಡಿಗೆ ತೊಂದರೆ ಆಗುವುದಿಲ್ಲ" ಎಂದರು.

ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಟೀಕೆ
ಸಿದ್ದರಾಮಯ್ಯ ಮಾತನಾಡಿ, "ಪಾದಯಾತ್ರೆ ಘೋಷಣೆ ಮಾಡಿದ ನಂತರ ಬಿಜೆಪಿ ಸರ್ಕಾರ ಪಾದಯಾತ್ರೆ ಹತ್ತಿಕ್ಕಲು ಬಹಳ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾಗಿದೆ. ಪರಿಸರ ಇಲಾಖೆಯಿಂದ ಅನುಮೋದನೆ ಪಡೆಯದೆ ದ್ರೋಹ ಮಾಡಿದೆ. ಯೋಜನೆಗೆ ಪರಿಸರ ಇಲಾಖೆ ಅನುಮೋದನೆ ಕೊಡುತ್ತಿಲ್ಲ. ಇದನ್ನು ಮರೆಮಾಚಲು ಪಾದಯಾತ್ರೆಗೆ ಅಡ್ಡಿಪಡಿಸುವ ಕೆಲಸ ಮಾಡುತ್ತಾ, ಜನರಿಗೆ ಸುಳ್ಳು, ತಪ್ಪು ಮಾಹಿತಿಯನ್ನು ಬಿಜೆಪಿ ನಾಯಕರು ನೀಡುತ್ತಿದ್ದಾರೆ" ಎಂದು ಆರೋಪಿಸಿದರು.
"ಸಿದ್ದರಾಮಯ್ಯ ಸರ್ಕಾರ ಏನೂ ಮಾಡಲಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಮೇಕೆದಾಟು ಯೋಜನೆ ಆರಂಭವಾಗಿದ್ದೇ ಕಾಂಗ್ರೆಸ್ 2013ರ ಕಾಂಗ್ರೆಸ್ ಅವಧಿಯಲ್ಲಿ. ಕಾಂಗ್ರೆಸ್ ಅವಧಿಯಲ್ಲಿ ವಿಳಂಬ ಆಗಿಲ್ಲ. ನಮ್ಮ ಕಾಲದಲ್ಲೂ ಕೋರ್ಟ್ ನಲ್ಲಿ ಇತ್ತು. ಆದರೂ ಡಿಪಿಆರ್ ಸಿದ್ದ ಮಾಡಿದೆವು. ತಮಿಳುನಾಡಿನವರು ಕಾಲು ಕೆರೆದು ಜಗಳ ಆಡುತ್ತಾರೆ. ಡಬಲ್ ಎಂಜಿನ್ ಸರ್ಕಾರ ದಲ್ಲಿ ವಿಳಂಬ ಮಾಡಿ ದ್ರೋಹ ಮಾಡಿದರು" ಎಂದು ದೂರಿದರು.

ಬಿಜೆಪಿಯ 25 ಸಂಸದರು ಇದ್ದಾರೆ
ಸಿದ್ದರಾಮಯ್ಯ ಮಾತನಾಡಿ, "ಬಿಜೆಪಿಯ 25 ಸಂಸದರು ರಾಜ್ಯದಲ್ಲಿದ್ದಾರೆ. ಪರಿಸರ ಇಲಾಖೆ ಅನುಮೋದನೆ ಪಡೆಯಲು ಆಗಿಲ್ಲ. ಆರು ಸಾವಿರ ಎಕೆರೆ ಮುಳುಗಡೆಗೆ ಪರ್ಯಾಯವಾಗಿ 10 ಸಾವಿರ ಎಕರೆ ಭೂಮಿ ಗುರುತಿಸಿದ್ದಾಗಿದೆ. ಶೇ 3೦ ಜನರಿಗೆ ಕುಡಿಯುವ ನೀರಿಲ್ಲ. ಯೋಜನೆ ಜಾರಿಯಾದರೆ ಕೆಆರ್‌ಎಸ್, ಕಬಿನಿ, ಹಾರಂಗಿ ಸೇರಿದಂತೆ 114 ಟಿಎಂಸಿ ನೀರು ಸಂಗ್ರಹಿಸಬಹುದು. ನಮ್ಮ 260 ಟಿಎಂಸಿ ಹೆಚ್ಚುವರಿ ನೀರು ಸಮುದ್ರ ಸೇರಿದೆ. ಯೋಜನೆ ಬಳಿಕ ನಮ್ಮ ನೀರು ಶೇಖರಣೆ ಮಾಡಿಕೊಳ್ಳುತ್ತೇವೆ. ತಮಿಳುನಾಡಿನವರ ಜೊತೆ ಬಿಜೆಪಿ ಸೇರಿಕೊಂಡಿದೆ. ತಮಿಳುನಾಡಿನ ಅಣ್ಣಾಮಲೈ, ಸಿ. ಟಿ. ರವಿ ವಿರೋಧ ಮಾಡುತ್ತಾರೆ. ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ ಕನ್ನಡಿಗರಿಗೆ ದ್ರೋಹ ಮಾಡುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.

ಹಲವಾರು ನಾಯಕರು ಭಾಗಿ
ಕನಕಪುರ ತಾಲ್ಲೂಕಿನ ಮೇಕೆದಾಟು ಸಂಗಮದಲ್ಲಿ ಪಾದಯಾತ್ರೆಗೆ ಭಾನುವಾರ ಬೆಳಗ್ಗೆ ಚಾಲನೆ ಸಿಕ್ಕಿತು. ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ, ಮಾಜಿ ಸಚಿವರಾದ ಎಂ. ಬಿ. ಪಾಟೀಲ್, ಮೋಟಮ್ಮ, ಉಮಾಶ್ರೀ, ಟಿ. ಬಿ. ಜಯಚಂದ್ರ, ಆರ್. ವಿ. ದೇಶಪಾಂಡೆ, ಎಚ್. ಕೆ. ಪಾಟೀಲ್, ಸಂಸದ ಡಿ. ಕೆ. ಸುರೇಶ್, ನಟ ದುನಿಯಾ ವಿಜಯ್, ನಿರ್ಮಾಪಕರಾದ ಸಾ.ರಾ. ಗೋವಿಂದು, ಎನ್. ಎಂ. ಸುರೇಶ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರು ಪಾಲ್ಗೊಂಡಿದ್ದರು.

ಕೋವಿಡ್ ನಿಯಮಗಳ ಉಲ್ಲಂಘನೆ
ಪಾದಯಾತ್ರೆ ಚಾಲನೆ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಕಂಡುಬಂತು. ಕೋವಿಡ್ ನಿಯಮಾವಳಿಗಳ ಪ್ರಕಾರ ಕಾರ್ಯಕ್ರಮ ನಡೆಸುವುದಾಗಿ ಕಾಂಗ್ರೆಸ್ ಮುಖಂಡರು ಪದೇ ಪದೇ ಹೇಳಿದ್ದರೂ ಮೊದಲ ದಿನವೇ ಅದು ಪಾಲನೆಯಾಗಲಿಲ್ಲ. ಸಾಕಷ್ಟು ಜನರು ಪಾದಯಾತ್ರೆ ಚಾಲನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಸಾಮಾಜಿಕ ಅಂತರ ಸಂಪೂರ್ಣ ಮಾಯವಾಗಿತ್ತು. ಪಾದಯಾತ್ರೆ ಸಂದರ್ಭದಲ್ಲಿಯೂ ಡಿ. ಕೆ. ಶಿವಕುಮಾರ್ ಸೇರಿದಂತೆ ಹಲವಾರು ಜನರು ಮಾಸ್ಕ್ ಧರಿಸಿರಲಿಲ್ಲ.












Click it and Unblock the Notifications