ರಾಮನಗರ: ತಮ್ಮ ಮಗನನ್ನು ಸರ್ಕಾರಿ ಅಂಗನವಾಡಿಗೆ ದಾಖಲಿಸಿ ಮಾದರಿಯಾದ ನ್ಯಾಯಾಧೀಶ
ರಾಮನಗರ, ಜನವರಿ, 4: ಸಣ್ಣ ಸರ್ಕಾರಿ ನೌಕರನು ಕೂಡ ತನ್ನ ಮಕ್ಕಳು ಖಾಸಗಿ ಶಾಲೆಯಲ್ಲಿ ಓದಬೇಕು ಎಂದು ಹಂಬಲಿಸುತ್ತಾರೆ. ಅಷ್ಟೇ ಏಕೆ ತಮ್ಮ ಮಕ್ಕಳ ವಿದ್ಯಾಭ್ಯಾಸ ವಿಷಯ ಬಂದರೆ ಸರ್ಕಾರಿ ಶಾಲೆಯ ಶಿಕ್ಷಕರೂ ಸಹ ಖಾಸಗಿ ಶಾಲೆಯ ವ್ಯಾಮೋಹದಿಂದ ಹೊರತಾಗಿಲ್ಲ.
ಇಂಥ ಮನಃಸ್ಥಿತಿಯುಳ್ಳ ಜನರು ಅಂಗನವಾಡಿ ದೂರದ ಮಾತಾಗಿರುತ್ತದೆ. ಇಂದಿನ ಜನರು ಬೇಬಿ ಸಿಟ್ಟಿಂಗ್ಸ್, ಕಿಂಡರ್ ಗಾರ್ಟನ್ಗಳ ಮೋಹಕ್ಕೆ ಒಳಗಾಗುತ್ತಿದ್ದಾರೆ. ಅಂತಹವರ ನಡುವೆ ಬೊಂಬೆನಾಡು ಚನ್ನಪಟ್ಟಣದ ನ್ಯಾಯಾಧೀಶರೊಬ್ಬರು ಇಂತಹ ಮೋಹಕ್ಕೆ ಒಳಗಾಗದೇ ತಮ್ಮ ಮಗನನ್ನು ಸರ್ಕಾರಿ ಅಂಗನವಾಡಿಗೆ ಸೇರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ನ್ಯಾಯಾಧೀಶರ ಈ ನಡೆ ಕಂಡು ಸ್ಥಳೀಯರು ಉಬ್ಬೇರುವಂತೆ ಮಾಡಿದ್ದು, ಇತರೆ ಪೋಷಕರು ಖಾಸಗಿ ಶಾಲೆಗಳ ಮೋಹಕ್ಕೆ ಬೀಳದಂತೆ ಸಂದೇಶವೊಂದನ್ನು ನೀಡಿದ್ದಾರೆ. ಚನ್ನಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ. ಮಹೇಂದ್ರರವರು ತಮ್ಮ ಮೂರೂವರೆ ವರ್ಷದ ಮಗ ಎಚ್.ಎಂ. ನಿದರ್ಶನನ್ನು ಕೋಟೆ ಬಡಾವಣೆಯ ಆಂಜನೇಯ ದೇವಾಲಯ ಬಳಿಯ ಸರ್ಕಾರಿ ಅಂಗನವಾಡಿಗೆ ದಾಖಲಿಸಿದರು.

ಮಗುವನ್ನು ಸರ್ಕಾರಿ ಅಂಗನವಾಡಿಗೆ ದಾಖಲಿಸುವ ನಿರ್ಧಾರ ಮಾಡಿದ ಪತಿಗೆ ಬೆಂಬಲವಾಗಿ ನ್ಯಾಯಾಧೀಶರ ಪತ್ನಿಯೂ ಅಂಗನವಾಡಿ ಕೇಂದ್ರಕ್ಕೆ ಆಗಮಿಸಿ ಪತಿಯ ಸರಳತೆಗೆ ಪ್ರೋತ್ಸಾಹ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು. ತಮ್ಮ ಮಗುವನ್ನು ಕೇಂದ್ರಕ್ಕೆ ದಾಖಲು ಮಾಡಿದ ನ್ಯಾಯಾಧೀಶ ದಂಪತಿಗಳಿಗೆ ಸಿಡಿಪಿಒ ಸಿದ್ದಲಿಂಗಯ್ಯ ಹಾಗೂ ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಧನ್ಯವಾದ ಸಲ್ಲಿಸಿದರು.
ಈ ವೇಳೆ ಜತೆ ಮಾತನಾಡಿದ ನ್ಯಾಯಾಧೀಶರಾದ ಎಂ. ಮಹೇಂದ್ರ, ನಾನು ಕೂಡ ಸರ್ಕಾರಿ ಶಾಲಾ- ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದೇನೆ. ನನ್ನ ಮಗನಿಗೂ ಸರ್ಕಾರಿ ಅಂಗನವಾಡಿಯಲ್ಲೇ ಶಿಕ್ಷಣ ಕೊಡಿಸಬೇಕು ಎಂಬ ಮಹಾದಾಸೆ ಇದೆ. ಹಾಗಾಗಿ ನಮ್ಮ ವಸತಿ ಗೃಹದ ಸಮೀಪವಿರುವ ಅಂಗನವಾಡಿ ಕೇಂದ್ರಕ್ಕೆ ನನ್ನ ಮಗನನ್ನು ದಾಖಲಿಸಿದ್ದೇನೆ ಎಂದರು.

ಇತ್ತೀಚಿನ ದಿನಗಳಲ್ಲಿ ಕೆಲ ಪಾಲಕರು ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುತ್ತಿದ್ದಾರೆ. ಅಂಥವರಿಗೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ನನ್ನ ಮಗನನ್ನು ಈ ಅಂಗನವಾಡಿ ಕೇಂದ್ರಕ್ಕೆ ದಾಖಲು ಮಾಡಿದ್ದೇನೆ. ಅಲ್ಲದೇ ನನ್ನ ನಿರ್ಧಾರಕ್ಕೆ ನನ್ನ ಪತ್ನಿ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ನನಗೆ ಹೆಮ್ಮೆ ಎನಿಸಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಸರ್ಕಾರವೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಹಲವು ಸವಲತ್ತು ಒದಗಿಸುತ್ತಿದೆ. ಇದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ನ್ಯಾಯಾಧೀಶರು ಜನರಲ್ಲಿ ಮನವಿ ಮಾಡಿದರು.











Click it and Unblock the Notifications