ಬಿಜೆಪಿಯವರು ತಮ್ಮ ಭ್ರಷ್ಟಾಚಾರದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ?: ಸಂಸದ ಡಿ.ಕೆ.ಸುರೇಶ್ ಪ್ರಶ್ನೆ
ಭ್ರಷ್ಟಾಚಾರದ ಕುರಿತು ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಜನರಿಗೆ ಹೇಳಬೇಕು ಎಂದು ಸಂಸದ ಡಿ.ಕೆ.ಸುರೇಶ್ ರಾಮನಗರದಲ್ಲಿ ಆಗ್ರಹಿಸಿದರು.
ರಾಮನಗರ, ಮಾರ್ಚ್, 06: ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿದೆ. ಅವರು ಪ್ರಚಾರದ ಜೊತೆಗೆ ಈ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಪ್ರಧಾನಮಂತ್ರಿಗಳು ಜನರಿಗೆ ಉತ್ತರ ಕೊಡಬೇಕು. ರಾಜ್ಯ ಸರ್ಕಾರದ 40% ಕಮಿಷನ್ ಸಾಭೀತಾಗುತ್ತಿದೆ. ಉದ್ಯೋಗಕ್ಕೋಸ್ಕರ ಹಣ ವಸೂಲಿ ಮಾಡಿ ಅಧಿಕಾರಿಗಳು ಜೈಲಿನಲ್ಲಿದ್ದಾರೆ. ಈ ಕುರಿತು ಎಲ್ಲಾ ಕಡೆ ವಿಜಯ ಸಂಕಲ್ಪ ಯಾತ್ರೆಯಲ್ಲಿ ಹೇಳಬೇಕು ಎಂದು ಸಂಸದ ಡಿ.ಕೆ.ಸುರೇಶ್ ರಾಮನಗರದಲ್ಲಿ ಆಗ್ರಹಿಸಿದರು. ಹಾಗೆಯೆ ರಾಜ್ಯದ ಯುವಕರಿಗೆ ಬಿಜೆಪಿಯವರು ನಿರುದ್ಯೋಗದ ಟೋಪಿ ಹಾಕಿದ್ದಾರೆ ಎಂದು ಕಿಡಿಕಾರಿದರು.
ನಗರದ ಹೊರವಲಯದಲ್ಲಿರುವ ಕೆಂಗಲ್ ಬಳಿಯ ಖಾಸಗಿ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಡಬಲ್ ಇಂಜಿನ್ ಸರ್ಕಾರ ಇದ್ದರೂ ಕೂಡ ಬೆಲೆ ಏರಿಕೆಯನ್ನು ಯಾಕೆ ತಡೆಯಲಿಲ್ಲ. ಜೀವನ ನಡೆಸುವುದು ಹೇಗೆ ಅಂತಾ ಜನ ಇವತ್ತು ಆತಂಕದಲ್ಲಿದ್ದಾರೆ. ಅದಕ್ಕೆ ನಿಮ್ಮ ಪರಿಹಾರ ಏನು ಅಂತಾ ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.

ನಾವು ಚುನಾವಣೆಗೆ ಸಿದ್ಧರಾಗಿದ್ದೇವೆ
ಬಿಜೆಪಿಯವರು ರಾಜಕೀಯವಾಗಿ ಏನೇ ಮಾತಾಡಿದರೂ ನಮಗೆ ಲೆಕ್ಕ ಇಲ್ಲ. ಚುನಾವಣೆಗೆ ನಾವು ಸಿದ್ಧವಾಗಿದ್ದೇವೆ. ಸಾರ್ವತ್ರಿಕ ಚುನಾವಣೆ ಸದ್ಯದಲ್ಲೇ ಬರಲಿದೆ. ಜನರು ಶೀಘ್ರದಲ್ಲೇ ತಮ್ಮ ತೀರ್ಪನ್ನು ಕೊಡುತ್ತಾರೆ. ಬಿಜೆಪಿಯವರ ವಿಜಯದ ಸಂಕೇತ ಎಲ್ಲವೂ ಮುಗಿದಿದೆ. ಮುಂದಿನ ದಿನಗಳಲ್ಲಿ ವಿಜಯಸಂಕಲ್ಪ ಯಾತ್ರೆ ಮಾಡುತ್ತಿರುವ ನಾಯಕರಿಗೆ ಜನ ಬುದ್ದಿ ಕಲಿಸುತ್ತಾರೆ ಎಂದು ಸಂಸದ ಡಿ.ಕೆ.ಸುರೇಶ್ ಭವಿಷ್ಯ ನುಡಿದರು.
ಆರ್.ಅಶೋಕ್ ವಿರುದ್ಧ ಡಿ.ಕೆ. ಸುರೇಶ್ ಕಿಡಿ
ಜಿಲ್ಲೆಯಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಈಗ ಜೋಡೆತ್ತುಗಳಲ್ಲ. ಅವರು ಕುಂಟೆತ್ತುಗಳು ಎಂದು ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಲಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಸುರೇಶ್, ಅವರ ಜೊತೆಯಲ್ಲಿರುವವರೆಲ್ಲಾ ಕುಂಟುಕೊಂಡೇ ಓಡಾಡುತ್ತಾರೆ. ಬಿಜೆಪಿ ಎಲ್ಲಾ ವಿಚಾರದಲ್ಲೂ ಕುಂಟಿಕೊಂಡು ಬಂದಿದೆ ಎಂದು ವ್ಯಗ್ಯವಾಡಿದರು.

ಈಗಾಗಲೇ ಮಾಧ್ಯಮದಲ್ಲಿ ತೋರಿಸಿದ್ದೀರಾ ಯಾರ ಸಿಡಿ ಬಂತು ಅಂತಾ. ಯಾರು ಲಂಚದಲ್ಲಿ ಸಿಕ್ಕಿಹಾಕಿಕೊಂಡು ರಾಜೀನಾಮೆ ಕೊಟ್ಟರು.?, ಬಿಜೆಪಿ ಕಾರ್ಯಕರ್ತರ ಆತ್ಮಹತ್ಯೆಗೆ ಯಾರು ಕಾರಣ ಆದರು? ಸುಮಾರು ಎಂಟು ಕೋಟಿ ಹಣ ವಿಚಾರದಲ್ಲಿ ಅವರ ಕುಂಟೆತ್ತು. ಜೋಡೆತ್ತು ಎಂದು ಹೇಳಬೇಕೆ ಹೊರತು ಬೇರೆ ವಿಷಯದಲ್ಲಿ ಅಲ್ಲ ಎಂದು ತಿರುಗೇಟು ನೀಡಿದರು.
ಯುವಕರಿಗೆ ನಿರುದ್ಯೋಗದ ಟೋಪಿ ಹಾಕಿದ್ದಾರೆ
ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರುದ್ಯೋಗಿಗಳಾಗುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿಲ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿ, ರಾಜ್ಯ, ದೇಶದ ಯುವ ಸಮುದಾಯವನ್ನು ನಿರುದ್ಯೋಗಿಗಳನ್ನಾಗಿ ಮಾಡಿದ್ದೇವೆ ಅಂತಾ ಬಿಜೆಪಿಯವರಿಗೆ ಭಯ ಇದೆ. ಯುವಕರು ಬುದ್ದಿವಂತರಾಗಿದ್ದಾರೆ. ನೀವು ಹಾಕಿದ ನಿರುದ್ಯೋಗ ಟೋಪಿಯನ್ನು ಯುವಕರು ಮತ್ತೆ ನಿಮಗೆ ಹಾಕುತ್ತಾರೆ ಎಂದು ಟಾಂಗ್ ನೀಡಿದರು.
ಜಿಲ್ಲೆಯನ್ನು ಅಭಿವೃದ್ಧಿ ಮಾಡದ ಇವರು ಜಗಳಕ್ಕೆ ಮಾತ್ರ ಸೀಮಿತ ಎನ್ನುವ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಅಭಿವೃದ್ಧಿ ಅಂದರೆ ಗೊತ್ತಿದೆಯಾ ಕೇಳಿ. ತಾಲೂಕು ಕಚೇರಿ, ಸರ್ವೇ ಆಫೀಸ್, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆಯುತ್ತಿರುವ ಲಂಚವನ್ನು ತಡೆಯಲು ಹೇಳಿ. ಆಮೇಲೆ ಅಭಿವೃದ್ಧಿ ಬಗ್ಗೆ ಅಶೋಕ್ ಮಾತನಾಡಲಿ ಎಂದು ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications