ಕೋವಿಡ್ ಪರಿಸ್ಥಿತಿ ಮಹತ್ವದ ಘೋಷಣೆ ಮಾಡಿದ ಟೊಯೋಟಾ
ರಾಮನಗರ, ಮಾರ್ಚ್ 31; ಬಿಡದಿ ಕೈಗಾರಿಕಾ ವಲಯದಲ್ಲಿರುವ ಏಷ್ಯಾದ ಅತಿ ದೊಡ್ಡ ಕಾರು ತಯಾರಕ ಕಂಪನಿ ಟೊಯೋಟಾ ಕಿರ್ಲೋಸ್ಕರ್ ತನ್ನ ನೌಕರರ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡಲು ಮಹತ್ವದ ಘೋಷಣೆ ಮಾಡಿದೆ.
ತನ್ನ ಉದ್ಯೋಗಿಗಳು ಮತ್ತು ಅವರ ಕುಟುಂಬ ಸದಸ್ಯರು ಮತ್ತು ಗುತ್ತಿಗೆ ನೌಕರರ ಕೋವಿಡ್ ಲಸಿಕೆ ವೆಚ್ಚವನ್ನು ಭರಿಸುವುದಾಗಿ ಹೇಳಿದೆ. ಉದ್ಯೋಗಿಗಳು, ಅವರ ಕುಟುಂಬ ಸದಸ್ಯರು ಮತ್ತು ಗುತ್ತಿಗೆ ನೌಕರರನ್ನು ಒಳಗೊಂಡಂತೆ ಸುಮಾರು 25,000 ಸದಸ್ಯರ ಎರಡೂ ಡೋಸ್‌ಗಳಿಗೆ ಕಂಪನಿಯು ವೆಚ್ಚ ಪಾವತಿಸುತ್ತದೆ.
ಒಂದು ಆರೋಗ್ಯಕರ ಮತ್ತು ಸುರಕ್ಷಿತ ಕಾರ್ಯಸ್ಥಳದ ವಾತಾವರಣವನ್ನು ಉತ್ತೇಜಿಸುವ ಸಲುವಾಗಿ, ಟೊಯೋಟಾ ತನ್ನ ಉದ್ಯೋಗಿಗಳ ಒಟ್ಟಾರೆ ಯೋಗಕ್ಷೇಮವನ್ನು ಖಾತ್ರಿಪಡಿಸಲು ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಕೋವಿಡ್ ವಿರುದ್ಧಹೋರಾಟದಲ್ಲಿ ಲಸಿಕೆಯು ನಿರ್ಣಾಯಕವಾಗಿದೆ ಎಂದು ಪರಿಗಣಿಸಿ, ಲಸಿಕೆಗಳ ವೆಚ್ಚಗಳನ್ನು ಮರುಪಾವತಿಸಲು ಅಥವಾ ಕಂಪನಿ ಗುರುತಿಸಿದ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ಪಡೆಯಲು ಆಯ್ಕೆ ಮಾಡಬಹುದು.
ಈ ಬಗ್ಗೆ ಮಾತನಾಡಿರುವ ಟಿಕೆಎಂನ ಮಾನವ ಸಂಪನ್ಮೂಲ ಮತ್ತು ಸೇವಾ ಸಮೂಹದ ಉಪಾಧ್ಯಕ್ಷ ಶಂಕರ. ಜಿ, "ನಮ್ಮ ಉದ್ಯೋಗಿಗಳು ನಮ್ಮ ಅತ್ಯಂತ ಮೌಲ್ಯಯುತ ಆಸ್ತಿಯಾಗಿದ್ದು, ಉದ್ಯೋಗಿಗಳು ಮತ್ತು ಅವರ ಕುಟುಂಬಗಳ ಜೀವನ ಮಟ್ಟವನ್ನು ಸುಧಾರಿಸಲು ನಾವು ಅತ್ಯಂತ ಮಹತ್ವ ನೀಡುತ್ತೇವೆ" ಎಂದು ಹೇಳಿದ್ದಾರೆ.
"ಈ ಸಾಂಕ್ರಾಮಿಕ ಪರಿಸ್ಥಿತಿಯನ್ನು ಎದುರಿಸಲು ಟಿಕೆಎಮ್ ನಿರಂತರವಾಗಿ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ ಮತ್ತು ತನ್ನ ಪ್ರಮುಖ ಪಾಲುದಾರರು, ಆರೋಗ್ಯ ಆರೈಕೆ ಕಾರ್ಯಕರ್ತರು ಮತ್ತು ಸಮುದಾಯದ ಸುರಕ್ಷತೆಗೆ ಸಾಕಷ್ಟು ಕ್ರಮಗಳನ್ನು ಬೆಂಬಲಿಸುವುದನ್ನು ಮತ್ತು ಬೆಂಬಲಿಸುವುದನ್ನು ಮುಂದುವರಿಸಲಿದೆ" ಎಂದು ಹೇಳಿದ್ದಾರೆ.
ಸೋಂಕು ಅಥವಾ ಕ್ವಾರೆಂಟೈನ್ ಕಾರಣದಿಂದಾಗಿ ಗೈರು ಹಾಜರಿಗೆ ಸಂಬಳ ಸಹಿತ ರಜೆಗಳನ್ನು ನೀಡುವ, ಉದ್ಯೋಗಿಗಳಿಗೆ ವೇತನ ಸಹಿತ ರಜೆಗಳನ್ನು ನೀಡುವ ಅನೇಕ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಕಂಪನಿ ಪರಿಚಯಿಸಿದೆ. ಕಂಪನಿಯು ಉದ್ಯೋಗಿಗಳು ಮತ್ತು ಕುಟುಂಬಕ್ಕೆ ವಿಶೇಷ Covid-19 ವಿಮಾ ರಕ್ಷಣೆಯನ್ನು ನೀಡಿದೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ












Click it and Unblock the Notifications