ಬಿಡದಿ: ಜಪಾನ್ ಮೂಲದ ಕಂಪನಿ ಬಂದ್; ಆಡಳಿತ ಮಂಡಳಿಯಿಂದ ಸ್ಪಷ್ಟನೆ
ರಾಮನಗರ, ನವೆಂಬರ್ 8: ಜಿಲ್ಲೆಯ ಬಿಡದಿ ಕೈಗಾರಿಕಾ ವಲಯದಲ್ಲಿ ನೆಲಸಿರುವ ಜಪಾನ್ ಮೂಲದ ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ರಾತ್ರೋರಾತ್ರಿ ಬಾಗಿಲು ಬಂದ್ ಮಾಡಿದೆ ಎನ್ನುವ ಕಾರ್ಮಿಕರು ಮಾಡಿದ್ದ ಆರೋಪವನ್ನು ಕಂಪನಿಯ ಆಡಳಿತ ಮಂಡಳಿ ಅಲ್ಲಗೆಳೆದಿದೆ.
ಕಾರ್ಮಿಕರ ಆರೋಪದ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಆಡಳಿತ ಮಂಡಳಿ, ಕರ್ನಾಟಕದ ಬಿಡದಿಯ ಉತ್ಪಾದನಾ ಘಟಕದಲ್ಲಿ ಟ್ರಾಕ್ಷನ್ ಮೋಟಾರ್‌ಗಳು ಮತ್ತು ವಿವಿವಿಎಫ್ ಇನ್ವರ್ಟರ್‌ಗಳ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ವಿದ್ಯುತ್ ಮತ್ತು ವಿದ್ಯುನ್ಮಾನ ಸಾಧನ ವಲಯದಲ್ಲಿನ ಮುಂಚೂಣಿಯ ಸಂಸ್ಥೆ ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇಂದು ತನ್ನ ಕರ್ನಾಟಕದ ಬಿಡದಿಯಲ್ಲಿರುವ ಉತ್ಪಾದನಾ ಘಟಕದಲ್ಲಿ ಟ್ರಾಕ್ಷನ್ ಮೋಟಾರ್‌ಗಳು ಮತ್ತು ವಿವಿವಿಎಫ್ ಇನ್ವರ್ಟರ್‌ಗಳ ಉತ್ಪಾದನೆಯನ್ನು ಆರ್ಡರ್‌ಗಳ ತೀವ್ರವಾದ ಕುಸಿತದಿಂದಾಗಿ ದುರಾದೃಷ್ಟವಶಾತ್ ಸ್ಥಗಿತಗೊಳಿಸಬೇಕಾಗಿದೆ ಎಂದು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

56 ಕಾರ್ಮಿಕರು ಕೆಲಸದಿಂದ ವಜಾ
ಆರ್ಡರ್‌ಗಳ ತೀವ್ರವಾದ ಕುಸಿತದ ಕಾರಣದಿಂದಾಗಿ ಟ್ರಾನ್ಸ್ ಪೋರ್ಟ್ ಸಿಸ್ಟಂ ವಿಭಾಗದ ಭಾಗವಾಗಿದ್ದ ಈ ಘಟಕದಲ್ಲಿರುವ 56 ಕಾರ್ಮಿಕರಿಗೆ ಉದ್ಯೋಗದಿಂದ ಬಿಡುಗಡೆ ನೀಡಲಾಗಿದೆ. ನವೆಂಬರ್ 5, 2022ರಿಂದ ಅನ್ವಯವಾಗುವಂತೆ ಈ ಕ್ರಮ ಅನ್ವಯಿಸುತ್ತದೆ ಮತ್ತು ಸಂಬಂಧಿಸಿದ ಉದ್ಯೋಗಿಗಳಿಗೆ ಸಮಾನ ಹಾಗೂ ಕಾನೂನುಬದ್ಧವಾಗಿ ಪರಿಹಾರ ನೀಡಲಾಗಿದೆ. ಕಂಪನಿಯು ಕಾರ್ಯ ನಿರ್ವಹಣೆಯ ಅಗತ್ಯಗಳಿಗೆ ಕೆಲ ಸಿಬ್ಬಂದಿಯನ್ನು ಉಳಿಸಿಕೊಂಡಿದೆ ಮತ್ತು ಉತ್ಪಾದನಾ ಘಟಕವನ್ನು ಮುಚ್ಚುವ ಯಾವುದೇ ನಿರ್ಧಾರವನ್ನು ತಕ್ಷಣಕ್ಕೆ ಮಾಡಿಲ್ಲ ಎಂದು ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಆಡಳಿತ ಮಂಡಳಿ ತಿಳಿಸಿದೆ.

ಕಂಪನಿ ಬಂದ್‌ಗೆ ಸ್ಪಷ್ಟನೆ ನೀಡಿದ ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ
ಉದ್ಯೋಗ ಕಡಿತಗೊಳಿಸುವ ಕ್ರಮವನ್ನು ಹಲವು ಪರ್ಯಾಯಗಳನ್ನು ಪರಿಗಣಿಸಿದ ನಂತರ ಮತ್ತು ಅನ್ವಯಿಸುವ ಕಾನೂನು ಹಾಗೂ ಸಂಬಂಧಿಸಿದ ಎಲ್ಲ ಪಾಲುದಾರರ ಹಿತಾಸಕ್ತಿಗೆ ಅನುಗುಣವಾಗಿ ವಸ್ತುನಿಷ್ಠವಾಗಿ ನಿರ್ವಹಿಸಲಾಗಿದೆ. ಟ್ರಾನ್ಸ್ ಪೋರ್ಟ್ ಸಿಸ್ಟಂ ವಿಭಾಗದ ಯೋಜನಾ ಕಚೇರಿಯು ಅವಕಾಶಗಳ ಮೌಲ್ಯಮಾಪನ ಮುಂದುವರಿಸುತ್ತದೆ ಮತ್ತು ಈ ಪ್ರದೇಶದ ಗ್ರಾಹಕರ ಅಗತ್ಯಗಳಿಗೆ ಬೆಂಬಲಿಸಲು ಸದಾ ಸನ್ನದ್ಧವಾಗಿರುತ್ತದೆ ಎಂದು ಕಂಪನಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಉದ್ಯೋಗಿಗಳ ಸೌಖ್ಯಕ್ಕೆ ಅನುಗುಣವಾಗಿ ಅಗತ್ಯ ಕ್ರಮವಾಗಿದೆ
ಈ ಬಗ್ಗೆ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಕಝುಹಿಕೊ ತಮುರಾ ಮಾತನಾಡಿದ್ದು, ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿರ್ಧಾರದಿಂದ ವಿವಿವಿಎಫ್ ಇನ್ವರ್ಟರ್ ಮತ್ತು ಟ್ರಾಕ್ಷನ್ ಮೋಟಾರ್‌ಗಳಿಗೆ ಸಂಬಂಧಿಸಿದ ಉದ್ಯಮ ವಿಭಾಗಕ್ಕೆ ಮಾತ್ರ ಪರಿಣಾಮ ಉಂಟಾಗಿದೆ. ಮತ್ತು ಕಂಪನಿಯ ಸಮೂಹವು ಭಾರತದಲ್ಲಿ ಹೂಡಿಕೆ ಹಾಗೂ ಪ್ರಗತಿಯನ್ನು ಮುಂದುವರಿಸಲಿದೆ. ಈ ಹಿನ್ನಡೆಯ ನಡುವೆಯೂ ಕಂಪನಿ ತನ್ನ ಇತರೆ ಉದ್ಯಮಗಳಾದ ಫ್ಯಾಕ್ಟರಿ ಆಟೊಮೇಷನ್, ಏರ್ ಕಂಡೀಷನಿಂಗ್/ಚಿಲ್ಲರ್ ಸೆಮಿಕಂಡಕ್ಟರ್, ಎಲಿವೇಟರ್ ಮತ್ತಿತರೆ ಉದ್ಯಮಗಳ ಮೂಲಕ ಕರ್ನಾಟಕದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಲು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಉದ್ಯೋಗಿಗಳ ಸೌಖ್ಯಕ್ಕೆ ಅನುಗುಣವಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಬಾಧಿತ ಉದ್ಯೋಗಿಗಳಿಗೆ ಅನ್ವಯಿಸಬಲ್ಲ ಕಾನೂನಿನ ಅಗತ್ಯಗಳಿಗೆ ಮೀರಿ ಪರಿಹಾರ ನೀಡಲಾಗಿದೆ ಮತ್ತು ಬಾಧಿತ ಉದ್ಯೋಗಿಗಳೊಂದಿಗೆ ಈ ಸಂಕಷ್ಟದ ಸಮಯದಲ್ಲಿ ಅವರ ಯಾವುದೇ ಪ್ರಶ್ನೆಗಳು ಮತ್ತು ಕಾಳಜಿಗಳಿಗೆ ಉತ್ತರಿಸಲು ನಾವು ನಮ್ಮ ಬದ್ಧತೆಯನ್ನು ಮುಂದುವರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

2010ರಲ್ಲಿ ಆರಂಭವಾದ ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್
ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 2010ರಲ್ಲಿ ಪ್ರಾರಂಭವಾಯಿತು ಮತ್ತು ಇದರ ಉದ್ಯಮಗಳಲ್ಲಿ ಏರ್ ಕಂಡೀಷನಿಂಗ್ ಮತ್ತು ಫ್ಯಾಕ್ಟರಿ ಆಟೊಮೇಷನ್ ಉತ್ಪನ್ನಗಳಂತಹ ವಿದ್ಯುತ್ ಉಪಕರಣಗಳ ಸಗಟು ವಿತರಣೆ ಒಳಗೊಂಡಿದೆ. ಮಿಟ್ಸುಬಿಷಿ ಎಲೆಕ್ಟ್ರಿಕ್ ವಿಸ್ತಾರ ಕ್ಷೇತ್ರಗಳು ಮತ್ತು ಬಳಕೆಗಳಲ್ಲಿ ಬಳಸಲ್ಪಡುವ ವಿದ್ಯುತ್ ಮತ್ತು ವಿದ್ಯುನ್ಮಾನ ಉತ್ಪನ್ನಗಳು ಮತ್ತು ಸಿಸ್ಟಂಗಳ ಉತ್ಪಾದನೆ ಮತ್ತು ಮಾರಾಟ ಮಾಡುತ್ತದೆ. ಜಾಗತಿಕವಾಗಿ ಮುಂಚೂಣಿಯ ಹಸಿರು ಕಂಪನಿಯಾಗಿ ಮಿಟ್ಸುಬಿಷಿ ಎಲೆಕ್ಟ್ರಿಕ್ ತನ್ನ ತಂತ್ರಜ್ಞಾನಗಳನ್ನು ವಿಶ್ವದಾದ್ಯಂತ ಸಮಾಜ ಮತ್ತು ದೈನಂದಿನ ಜೀವನಕ್ಕೆ ಬಳಸುತ್ತಿದೆ. ಮಿಟ್ಸುಬಿಷಿ ಎಲೆಕ್ಟ್ರಿಕ್ ಸತತ ತಾಂತ್ರಿಕ ಆವಿಷ್ಕಾರ ಮತ್ತು ತಡೆರಹಿತ ಸೃಜನಶೀಲತೆಯೊಂದಿಗೆ ಉಜ್ವಲ ಮತ್ತು ಸುಸ್ಥಿರ ಸಮಾಜಕ್ಕೆ ಕೊಡುಗೆ ನೀಡಲು ಬದ್ಧವಾಗಿದೆ ಎಂದು ಕಂಪನಿಯ ಆಡಳಿತ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications