ಕಣ್ಮರೆಯಾಗುತ್ತಿರುವ ಕೆರೆಗಳ ರಕ್ಷಣೆಗೆ ಮುಂದಾದ ಬಿಡದಿಯ ತಂಪು ಪಾನೀಯ ಕಂಪನಿ
ರಾಮನಗರ, ನವೆಂಬರ್ 03: ಬಿಡದಿ ಕೈಗಾರಿಕಾ ವಲಯದಲ್ಲಿ ನೆಲಸಿರುವ ಭಾರತದ ಜನಪ್ರಿಯ ತಂಪು ಪಾನೀಯ ತಯಾರಿಕಾ ಕಂಪನಿ ಕೋಕಾ ಕೋಲ (HCCB) ತನ್ನ ಸಮಾಜಿಕ ಕಾರ್ಯಕ್ರಮ ಅಡಿಯಲ್ಲಿ ಜಿಲ್ಲೆಯ ಎರಡು ಕೆರೆಗಳನ್ನು ಯಶಸ್ವಿಯಾಗಿ ಪುನರುಜ್ಜೀವನಗೊಳಿಸಿದೆ. ಪುನರುಜ್ಜೀವನೊಳಿಸಿದ ಜಿಲ್ಲೆಯ ಅಮವಾಸ್ಯೆ ಕೆರೆ ಮತ್ತು ತೂಬಿನ ಕೆರೆಗಳನ್ನು ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ ಉದ್ಘಾಟಿಸಿದರು.
ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗುವ ಈ ಕೆರೆಗಳು ನೀರಿಲ್ಲದೇ ಬಳಲಿದ್ದ ಕೃಷಿ ಭೂಮಿ ಪುನಶ್ಚೇತನಗೊಳ್ಳಲು ಸಹಾಯಕವಾಗಲಿದ್ದು, ಈ ಮೂಲಕ ಕೃಷಿ ಸಮುದಾಯಗಳು ಮತ್ತು ನಿಸರ್ಗದ ಬೆಳವಣಿಗೆಗೆ ಸಹಕಾರಿಯಾಗಲಿವೆ.

ಇತ್ತೀಚಿನ ದಿನಗಳಲ್ಲಿ ಮಳೆ ಕೊರತೆ, ಸೂಕ್ತ ನಿರ್ವಹಣೆ ಇಲ್ಲದೇ ಹಾಗೂ ಭೂಕಳ್ಳರ ಅಕ್ರಮಗಳಿಂದ ಕರೆಗಳು ಕಣ್ಮರೆಯಾಗುತ್ತಿವೆ. ಬಿಡದಿ ಪಟ್ಟಣ ಪ್ರದೇಶದಲ್ಲಿ ಕ್ಷಿಪ್ರಗತಿಯಲ್ಲಿ ಕೈಗಾರಿಕೆ ಮತ್ತು ಕೃಷಿ ಬೆಳವಣಿಗೆ ಹೊಂದುತ್ತಿರುವುದು ನೈಸರ್ಗಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಈ ಬದಲಾದ ಭೂ ಬಳಕೆಯು ಕೆರೆಗಳ ಮೇಲೆ ಋಣಾತ್ಮಕವಾದ ಪರಿಣಾಮ ಬೀರಿದ್ದರಿಂದ ಅವುಗಳ ಪರಿಸರ ಆರೋಗ್ಯದಲ್ಲಿ ಕುಸಿತ ಉಂಟಾಗಲು ಕಾರಣವಾಗಿದೆ.
ಈ ನಿಟ್ಟಿನಲ್ಲಿ ಎಚ್‌ಸಿಸಿಬಿ ತನ್ನ ಸಾಮಾಜಿಕ ಹೊಣೆಗಾರಿಕೆ ಅರಿಯು ಕೆರೆಗಳ ಪುನರ್ ನಿರ್ಮಾಣದ ಯೋಜನೆ ಕೈಗೆತ್ತಿಕೊಂಡಿದೆ. ಈ ಮೂಲಕ ಕೆರೆಗಳಲ್ಲಿ ತುಂಬಿದ್ದ ಹೂಳನ್ನು ತೆಗೆದು ನೀರಿನ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸುವುದು, ದುರ್ಬಲಗೊಂಡ ಒಡ್ಡುಗಳನ್ನು ದುರಸ್ತಿ ಮಾಡಿ ಬಲಗೊಳಿಸುವುದು, ಸರಿಯಾದ ಗಡಿಗಳನ್ನು ಗುರುತಿಸುವುದು, ಪರಿಸರ ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಕಳೆಗಳನ್ನು ತೆಗೆಯುವುದು ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.

ಕೆರೆಗಳ ಪುನಶ್ಚೇತನದ ಜೊತೆಗೆ ಕೆರೆ ಮಧ್ಯಭಾಗದಲ್ಲಿ ವನ್ಯಜೀವಿಗಳ ಜೀವನಕ್ಕೆ ಸಹಕಾರಿಯಾಗುವ ರೀತಿಯಲ್ಲಿ ದ್ವೀಪಗಳ ನಿರ್ಮಾಣ, ನೀರಿನ ನಿರ್ವಹಣೆಗೆ ಅಗತ್ಯವಾದ ಗುಂಡಿಗಳನ್ನು ನಿರ್ಮಾಣ ಮಾಡುವುದು, ಅಂತರ್ಜಲ ಮರುಪೂರಣ ಬಾವಿಗಳನ್ನು ನಿರ್ಮಾಣ ಮಾಡುವುದು ಮತ್ತು ಕೆರೆಗಳ ಒತ್ತುವರಿಯನ್ನು ತಪ್ಪಿಸಲು ಸೂಕ್ತ ಬೇಲಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಪುನರುಜ್ಜೀವನಗೊಂಡ ಕೆರೆಗಳ ಉದ್ಘಾಟನೆ ಮಾಡಿ ಮಾತನಾಡಿದ ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್.ಸಿ.ಬಾಲಕೃಷ್ಣ ಅವರು, "ಪ್ರಕೃತಿಯು ನಮಗೆ ಯಾವಾಗಲೂ ಅತ್ಯಂತ ಉಪಕಾರಿಯಾಗಿದೆ. ಎಚ್‌ಸಿಸಿಬಿ ನೇತೃತ್ವದಲ್ಲಿ ಈ ಕೆರೆಗಳನ್ನು ಪುನರ್ ನಿರ್ಮಾಣ ಮಾಡಿವುದು ಪವಿತ್ರ ಕಾರ್ಯವಾಗಿದೆ. ಇದು ಸಂಸ್ಥೆಯ ಸಮರ್ಪಣಾ ಭಾವಕ್ಕೆ ಸಾಕ್ಷಿಯಾಗಿದೆ ಎಂಬುದನ್ನು ತೋರಿಸುತ್ತದೆ.

ಕೆರೆಗಳ ಪುನರ್ ನಿರ್ಮಾಣ ಮಾಡುವ ಮೂಲಕ ನಾವು ಕೇವಲ ಜಲಮೂಲಗಳನ್ನು ಮರುಪೂರಣ ಮಾಡುತ್ತಿಲ್ಲ. ನಮ್ಮ ಸಮುದಾಯ ಮತ್ತು ಅದರ ಸುತ್ತಮುತ್ತಲಿನ ನೈಸರ್ಗಿಕ ಪರಿಸರವು ಅಭಿವೃದ್ಧಿ ಹೊಂದಲು ಈ ಕಾರ್ಯ ಸಹಕಾರಿಯಾಗಲಿದೆ. ಎಚ್‌ಸಿಸಿಬಿ ಕೆರೆಗಳ ಪುನಃ ನಿರ್ಮಾಣ ಕಾರ್ಯ ಇತರರಿಗೆ ದಾರಿದೀಪವಾಗುದೆ ಹಾಗೂ ಸ್ವಸಂಸ್ಥೆಯ ಶಕ್ತಿಗೆ ಸಾಕ್ಷಿಯಾಗಿ ನಿಂತಿದೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಚ್‌ಸಿಸಿಬಿಯ ಚೀಫ್ ಪಬ್ಲಿಕ್ ಅಫೇರ್ಸ್, ಕಮ್ಯುನಿಕೇಶನ್ಸ್ & ಸಸ್ಟೇನೇಬಲಿಟಿ ಆಫೀಸರ್ ಹಿಮಾನ್ಷು ಪ್ರಿಯದರ್ಶಿ ಅವರು ಮಾತನಾಡಿ,"HCCB ಯಲ್ಲಿನ ನಮ್ಮ ನೀತಿಯು ಸಾಮಾಜಿಕ ಕಳಕಳಿಯನ್ನು ಹೊಂದಿದ್ದಾಗಿದೆ. ಇದು ಶಾಶ್ವತವಾದ ಧನಾತ್ಮಕ ಬದಲಾವಣೆಯನ್ನು ರೂಪಿಸುವಲ್ಲಿ ಶ್ರಮಿಸುತ್ತಿದೆ. ಅಮವಾಸ್ಯೆ ಕೆರೆ ಮತ್ತು ತೂಬಿನ ಕೆರೆಗಳ ಪುನರುಜ್ಜೀವನದ ಮೂಲಕ ಪರಿಸರ ಮತ್ತು ಸಮುದಾಯಗಳ ಶ್ರೇಯೋಭಿವೃದ್ಧಿಗೆ ಕೈಗೊಂಡಿರುವ ನಮ್ಮ ಸಮರ್ಪಣಾ ಕಾರ್ಯವನ್ನು ಒತ್ತಿ ಹೇಳುತ್ತದೆ. ಈ ದಿಸೆಯಲ್ಲಿ ನಾವು ಇಡುವ ಪ್ರತಿಯೊಂದು ಹೆಜ್ಜೆಯೂ ಪ್ರಕೃತಿಯ ಉನ್ನತಿಗೆ ಮಾತ್ರವಲ್ಲದೇ ಭೂಮಿ ಮತ್ತು ಅದರೊಂದಿಗೆ ಜನರ ಸಾಮರಸ್ಯದ ಸಹಬಾಳ್ವೆಯನ್ನು ಬೆಳೆಸುವ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ'' ಎಂದರು.












Click it and Unblock the Notifications