Bengaluru-Mysuru Expressway: ಹೆದ್ದಾರಿ ಜಲಾವೃತ ಆಗಲು ಅವೈಜ್ಞಾನಿಕ ಕಾಮಗಾರಿಯೇ ಕಾರಣ: ಕನ್ನಡಪರ ಸಂಘಟನೆಗಳ ಆರೋಪ
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಳೆ ನೀರಿನಿಂದ ಅವಾಂತರ ಸೃಷ್ಟಿ ಆಗಲು ಅವೈಜ್ಞಾನಿಕ ಕಾಮಗಾರಿಯೇ ಕಾರಣವಾಗಿದೆ ಎಂದು ಕನ್ನಡ ಪರ ಸಂಘಟನೆಗಳು ಆರೋಪ ಮಾಡಿವೆ.
ರಾಮನಗರ, ಮಾರ್ಚ್, 19: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆ ಮುಂದುವರೆದಿದೆ. ಶೇಷಗಿರಿಹಳ್ಳಿ ಟೋಲ್ ಪ್ಲಾಜಾ ಎದುರು ಕನ್ನಡಪರ, ರೈತಪರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆಗೆ ಸಜ್ಜಾಗಿವೆ.
ಸಣ್ಣಮಳೆಗೆ ದಶಪಥ ಹೆದ್ದಾರಿ ಜಲಾವೃತಗೊಂಡಿದ್ದು, ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹೆದ್ದಾರಿಯಲ್ಲಿ ಮಳೆ ನೀರಿನಿಂದ ಅವಾಂತರ ಸೃಷ್ಟಿ ಆಗಲು ಅವೈಜ್ಞಾನಿಕ ಕಾಮಗಾರಿಯೇ ಕಾರಣವಾಗಿದೆ ಎಂದು ಆರೋಪ ಮಾಡಿದ್ದಾರೆ.

ಸಮರ್ಪಕ ಮೂಲ ಸೌಲಭ್ಯ ಇಲ್ಲ
ಇಲ್ಲಿ ಸಮರ್ಪಕ ಮೂಲ ಸೌಲಭ್ಯಗಳು ಸೇರಿದಂತೆ ಸರ್ವೀಸ್ ರಸ್ತೆಯೂ ಕೂಡ ಪೂರ್ಣಗೊಂಡಿಲ್ಲ. ಸರ್ವೀಸ್ ರಸ್ತೆ ಇನ್ನೂ ಸಾರ್ವಜನಿಕರ ಬಳಕೆಗೆ ಮುಕ್ತವಾಗಿಲ್ಲ. ಹೀಗೆ ಈ ಹೆದ್ದಾರಿ ಅವ್ಯವಸ್ಥೆಯ ಆಗರವಾಗಿದೆ. ಆದರೂ ಟೋಲ್ ಸಂಗ್ರಹ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕೆರೆಯಂತಾಗಿದ್ದ ಹೆದ್ದಾರಿ
ಸಣ್ಣಮಳೆ ಸುರಿದಿದ್ದು, ಇದರಿಂದ ಹೆದ್ದಾರಿ ಸಂಪೂರ್ಣವಾಗಿ ಕೆರೆಯಂತಾಗಿತ್ತು. ಇದನ್ನು ಕಂಡ ವಾಹನ ಸವಾರರು ಟೋಲ್ ಸಿಬ್ಬಂದಿ ಹಾಗೂ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಹೀಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಧೋರಣೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.

ಜಲಾವೃತಗೊಂಡಿದ್ದ ಹೆದ್ದಾರಿ
ಮೊನ್ನೆ ತಡರಾತ್ರಿ ಸುರಿದ ಮಳೆಯಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯ ರಾಮನಗರ ಬಳಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ವಾರಾಂತ್ಯದ ಹಿನ್ನೆಲೆಯಲ್ಲಿ ಸಾಕಷ್ಟು ವಾಹನಗಳು ಈ ಮಾರ್ಗವಾಗಿ ಚಲಿಸುತ್ತಿದ್ದು, ಜಲಾವೃತಗೊಂಡ ರಸ್ತೆಯಿಂದ ಸವಾರರು ಹೈರಾಣಾಗಿದ್ದರು.
ಹೆದ್ದಾರಿಯ ಕೆಳಸೇತುವೆ ಬಳಿ ನೀರು ನಿಂತಿದ್ದು, ವಾಹನಗಳು ಮುಂದಕ್ಕೆ ಚಲಿಸಲಾಗದೇ ವಾಹನ ದಟ್ಟಣೆ ಉಂಟಾಗಿದೆ. ಅಲ್ಲದೇ ಸರಣಿ ಅಪಘಾತಗಳು ಕೂಡ ನಡೆದಿದೆ. ದಶಪಥ ಹೆದ್ದಾರಿಯಲ್ಲಿ ಮಳೆ ಅವಾತರ ಹಿನ್ನೆಲೆಯಲ್ಲಿ ಮಳೆಯ ನೀರಿನಿಂದ ಕಾರು ಕೆಟ್ಟುನಿಂತಿದ್ದು, ಈ ವೇಳೆ ಹಿಂದೆ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದಿತ್ತು.
ಘಟನೆಯಲ್ಲಿ ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆದ್ದಾರಿ ಪ್ರಾಧಿಕಾರ ಹಾಗೂ ಸರ್ಕಾರದ ವಿರುದ್ಧ ಕಾರಿನ ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ.
ದುಬಾರಿ ಟೋಲ್ ಕಟ್ಟಿದ್ರೂ ಸರಿಯಾದ ವ್ಯವಸ್ಥೆ ಇಲ್ಲ. ಇಷ್ಟು ಸಣ್ಣ ಮಳೆಗೆ ಹೆದ್ದಾರಿಯ ಸ್ಥಿತಿ ಹೀಗಾದರೆ ಮಳೆಗಾಲದಲ್ಲಿ ಇನ್ನೇನು ಗತಿ, ಅಧಿಕಾರಿಗಳು ಮಳೆ ನೀರು ಹರಿದು ಹೋಗುವಂತೆ ಕ್ರಮಕೈಗೊಳ್ಳಬೇಕು ಎಂದು ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರದ ವಿರುದ್ಧ ಕಾರು ಚಾಲಕ ಕಿಡಿ
270 ರೂಪಾಯಿ ಟೋಲ್ ಕಟ್ಟಿದ್ದೇನೆ. ಮಳೆ ನೀರಿನಿಂದ ಕಾರಿನ ಎಂಜಿನ್ ಸೀಜ್ ಆಗಿದೆ. ಬೆಳಗ್ಗಿನ ಜಾವ ಸಮಯದಲ್ಲಿ ಈ ಮಾರ್ಗವಾಗಿ ಬಂದು ರಸ್ತೆ ನೀರಿನಲ್ಲಿ ಕಾರು ಸಿಲುಕಿಕೊಂಡಿದೆ. ಟೋಯಿಂಗ್ ಮಾಡೋದಕ್ಕೆ ದುಡ್ಡು, ಗ್ಯಾರೇಜ್ ಸಿಬ್ಬಂದಿ ಕರೆತರೋದಕ್ಕೆ ದುಡ್ಡು, ಇತ್ತ ಇಂಜಿನ್ ಸೀಜ್. ಟೋಲ್ ಕಟ್ಟಿದ್ದಲ್ಲದೆ ಇಷ್ಟು ನಷ್ಟ ಮಾಡಿಕೊಂಡಿದ್ದೇನೆ. ನನಗೆ ಪರಿಹಾರ ಕೊಡಿ ಎಂದು ಮಡಿಕೇರಿ ಕಡೆ ಪ್ರಯಾಣ ಮಾಡುತ್ತಿದ್ದ ಕಾರು ಚಾಲಕ ಸರ್ಕಾರ ವಿರುದ್ಧ ಕಿಡಿಕಾರಿದ್ದರು.
ಇನ್ನು ಕಳೆದ ವರ್ಷ ಕೂಡ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ರಸ್ತೆ ನಿರ್ಮಾಣದ ಸಮಯದಲ್ಲಿ ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಜಲಾವೃತವಾದ ಘಟನೆ ಕೂಡ ನಡೆದಿತ್ತು. ಈ ಸಮಯದಲ್ಲಿಯೇ ವಾಹನ ಸವಾರರು ಈ ಬಗ್ಗೆ ಅಧಿಕಾರಿಗಳು ಹಾಗೂ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದರು.
ವಾಹನ ಸವಾರರ ಆಕ್ರೋಶ
ಆದರೆ ಈಗ ಉದ್ಘಾಟನೆಯಾದ ವಾರದೊಳಗೆ ಮತ್ತೆ ಅದೇ ರೀತಿಯ ಸ್ಥಿತಿ ನಿರ್ಮಾವಾಗಿದೆ. ಮಳೆಯಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿತ್ತು. ಆದರೆ ಶುಕ್ರವಾರ ಸಂಜೆ ಸುರಿದ ಸಾಧಾರಣ ಮಳೆಗೆ ರಸ್ತೆ ಜಲಾವೃತಗೊಂಡಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications