ರಾಮನಗರದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಬಂಧನ, ಮಹಿಳೆ ಪರಾರಿ
ರಾಮನಗರ, ಜುಲೈ 13: ದೂರದ ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯ ನಡೆಸಿ ಉದ್ಯಾನ ನಗರಿ ಬೆಂಗಳೂರಿನಲ್ಲಿ ತಲೆ ಮರಿಸಿಕೊಂಡಿದ್ದ ಉಗ್ರನ ಬಂಧನದ ಘಟನೆ ಮಾಸುವ ಮುನ್ನವೇ ಬೆಂಗಳೂರಿನ ಕೂಗಳತೆ ದೂರದಲ್ಲಿರುವ ರೇಷ್ಮೆ ನಗರಿ ರಾಮಗರದಲ್ಲಿ ಅಕ್ರಮವಾಗಿ ಬಾಂಗ್ಲಾದೇಶದ ಪ್ರಜೆಗಳು ನೆಲಸಿರುವುದು ಪತ್ತೆಯಾಗಿದೆ.
ಸೂಕ್ತ ದಾಖಲೆಗಳಿಲ್ಲದೇ ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಆರೋಪದ ಮೇಲೆ 7 ಬಾಂಗ್ಲಾದೇಶಿ ಪ್ರಜೆಗಳನ್ನು ರಾಮನಗರ ಗ್ರಾಮಾಂತರ ಪೋಲಿಸ್ ಠಾಣೆಯ ಪೋಲಿಸರು ಬಂಧಿಸಿದ್ದಾರೆ. ಆದರೆ ಬಂಧಿತ ಆರೋಪಿಗಳೊಂದಿಗೆ ವಾಸಿಸುತ್ತಿದ್ದ ಬಾಂಗ್ಲಾದೇಶದ ಓರ್ವ ಮಹಿಳೆ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾಳೆ.
"ಜಿಲ್ಲೆಯ ಬಸವನಪುರ ಗ್ರಾಮದಲ್ಲಿರುವ ಲಿಂಕ್‌ಅಪ್ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಅಕ್ರಮವಾಗಿ ಬಂದಿರುವ ಬಾಂಗ್ಲಾದೇಶಿಯರು ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿ ವಲಸಿಗರನ್ನು ಬಂಧಿಸಲಾಗಿದೆ ಹಾಗೂ ಅವರೊಂದಿಗೆ ಇದ್ದ ಓರ್ವ ಮಹಿಳೆ ಪರಾರಿಯಾಗಿದ್ದಾಳೆ" ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ತಿಳಿಸಿದರು.

ಇನ್ನೂ ಬಂಧಿತರನ್ನು ಬಾಂಗ್ಲಾದೇಶದ ಪ್ರಜೆಗಳಾದ ಮೊಹಮ್ಮದ್ ಸೊಹಿಲ್ ರಾಣಾ (34), ಜುಲ್ಫಿಕರ್ ಅಲಿ (34), ಉಜುಲ್ (30), ಮೊಹಮ್ಮದ್ ಮಿನ್ಹಾಜುಲ್ ಹುಸೇನ್ (25), ಮುಸ್ಸಾ ಶೇಖ್ (27), ರಹೀಮ್ (27) ಮತ್ತು ಆರಿಫುಲ್ ಇಸ್ಲಾಂ ಎಂದು ಗುರುತಿಸಲಾಗಿದೆ. ಇನ್ನೂ ಪರಾರಿಯಾಗಿರುವ ಮಹಿಳೆಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್.ಪಿ ಸಂತೋಷ ಬಾಬು ತಿಳಿಸಿದರು.
ಬಂಧಿತರು ಅಕ್ರಮವಾಗಿ ಬಾಂಗ್ಲಾದೇಶದ ಗಡಿ ದಾಟಿ ಅಸ್ಸಾಂ ಮೂಲಕ ದೇಶದ ಒಳಗೆ ನುಸುಳಿದ್ದಾರೆ. ಅಲ್ಲಿಂದ ಮಧ್ಯವರ್ತಿಗಳ ಮೂಲಕ ನಗರಕ್ಕೆ ಜೂನ್ 1 ರಂದು ಬಂದು ನೆಲಸಿದ್ದಾರೆ. ಬಾಂಗ್ಲಾದೇಶದಲ್ಲಿ ಉದ್ಯೋಗ ಸಿಗದ ಹಿನ್ನಲೆಯಲ್ಲಿ ಭಾರತದಲ್ಲಿ ಉದ್ಯೋಗ ಮಾಡಿಕೊಂಡು ಜೀವನ ನಡೆಸಬಹುದು ಎಂದು ಗಡಿ ದಾಟಿ ಭಾರತಕ್ಕೆ ಬಂದಿರುವುದಾಗಿ ಪೋಲಿಸರ ತನಿಖೆಯ ವೇಳೆ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ.
ಬಂಧಿತರ ಬಳಿ ಒರಿಸ್ಸಾ, ಅಸ್ಸಾಂ, ಪಶ್ಚಿಮ ಬಂಗಾಳ ರಾಜ್ಯಗಳಿಗೆ ಸೇರಿದ ಆಧಾರ್ ಕಾರ್ಡ್ ಪತ್ತೆಯಾಗಿದೆ. ಗಡಿ ದಾಟಿದ ಬಳಿಕ ಮಧ್ಯವರ್ತಿಗಳು ವಿವಿಧ ರಾಜ್ಯದ ಅಧಾರ್ ಕಾರ್ಡ್ ನೀಡಿದ್ದಾರೆ. ಬಂಧಿತರ ಬಳಿ ಬಾಂಗ್ಲಾದೇಶದ ಗುರುತಿನ ಚೀಟಿಗಳು ಕೂಡ ಪತ್ತೆಯಾಗಿವೆ.
ಮದ್ರಾಸ್‌ನಲ್ಲಿನ ಲಿಂಕ್ ಕಂಪನಿಯಲ್ಲಿ ಕೆಲಸ ಅರಸಿ ಹೋಗಿದ್ದ 7 ಜನ ಬಾಂಗ್ಲಾದೇಶಿಯರನ್ನು, ಮದ್ರಾಸ್ ಕಂಪನಿಯ ವಕ್ತಾರರು ರಾಮನಗರದ ಲಿಂಕ್ ಆಪ್ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ತಂದು ಸೇರಿಸಿದ್ದ ಎಂದು ಬಂಧಿತ ಬಾಂಗ್ಲಾದೇಶಿಯರು ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ.
ಬಂಧಿತರ ವಿಚಾರಣೆ ಬಳಿಕ ರಾಮನಗರ ಜಿಲ್ಲಾ ಪೋಲಿಸರು ಮೊದಲು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ನಂತರ ಬಾಂಗ್ಲಾದೇಶದ ಭಾರತದ ರಾಯಭಾರ ಕಚೇರಿ ಅಧಿಕಾರಿಗಳಿಂದ ಬಂಧಿತರ ಟ್ರಾವೆಲ್ ಹಿಸ್ಟರಿ ಪಡೆದು ತನಿಖೆ ನಡೆಸಿ ಬಾಂಗ್ಲಾದೇಶಕ್ಕೆ ವಾಪಸ್ ಕಳಿಸುವ ಪ್ರಕ್ರಿಯೆ ಪ್ರಾರಂಭಿಸಲಿದ್ದಾರೆ.












Click it and Unblock the Notifications