ಗ್ರಾಮಸ್ಥರ ಆಕ್ರೋಶಕ್ಕೆ ಮಣಿದ ಅರಣ್ಯ ಇಲಾಖೆ: 3ನೇ ಪುಂಡಾನೆ ಸೆರೆಗೆ ಒಪ್ಪಿಗೆ
ಚನ್ನಪಟ್ಟಣ, ಆಗಸ್ಟ್ 20: ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಸಾಕಾನೆ ಬಳಸಿಕೊಂಡು ಪುಂಡಾನೆಗಳನ್ನು ಸೆರೆಯಿಡಿಯುವ ಕಾರ್ಯಚರಣೆ ಕೈಗೊಂಡಿರುವ ಅರಣ್ಯ ಇಲಾಖೆ, ಕಾಡನಕುಪ್ಪೆ ಗ್ರಾಮಕ್ಕೆ ಹೊಂದಿಕೊಂಡಿರುವ ತೆಂಗಿನಕಲ್ಲು ಅರಣ್ಯದಲ್ಲಿ ಎರಡನೇ ಪುಂಡಾನೆಯನ್ನು ಸೆರೆಯಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಅರಣ್ಯ ಇಲಾಖೆ ಇದೇ ತಿಂಗಳ ಆಗಸ್ಟ್ 12ಕ್ಕೆ ಬಂದಿಳಿದಿದ್ದ ಐದು ಸಾಕಾನೆಗಳ ತಂಡದೊಂದಿಗೆ ಪುಂಡಾನೆ ಸೆರೆ ಕಾರ್ಯಚರಣೆ ಪ್ರಾರಂಭಿಸಿತ್ತು. ಸುಮಾರು 50ಕ್ಕೂ ಹೆಚ್ಚಿನ ಸಿಬ್ಬಂದಿ ತಂಡ ಆಗಸ್ಟ್ 14ರಂದು ಬಿ.ವಿ.ಹಳ್ಳಿ ಸಮೀಪದ ಅರಣ್ಯದಲ್ಲಿ 35 ವರ್ಷದ ಒಂದು ಪುಂಡಾನೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡಿದ್ದಾರೆ.
ದಸರಾ ಸಮಯವಾದ ಹಿನ್ನಲೆ ಪುಂಡಾನೆ ಸೆರೆ ಹಿಡಿಯುವ ಅನುಭವವಿಲ್ಲದ ಸಾಕಾನೆಗಳಾದ ದುಬಾರೆ ಆನೆ ಶಿಬಿರದ ಪ್ರಶಾಂತ್, ಹರ್ಷ, ಲಕ್ಷ್ಮಣ ಹಾಗೂ ಮತ್ತಿಗೋಡು ಆನೆ ಶಿಬಿರದ ಮಹಾರಾಷ್ಟ್ರ ಭೀಮ, ಗಣೇಶ ಆನೆಗಳನ್ನು ಕಾರ್ಯಚರಣೆಯಲ್ಲಿ ಬಳಸಲಾಗಿದೆ. ಅನೆ ಸೆರೆ ಕಾರ್ಯಚರಣೆಯಲ್ಲಿ ಪ್ರಥಮ ಬಾರಿಗೆ ಪಾಲ್ಗೊಂಡಿದ್ದ ಸಾಕಾನೆಗಳು ಅರಣ್ಯ ಇಲಾಖೆಯ ಅಧಿಕಾರಿಗಳ ನಿರೀಕ್ಷೆಗೂ ಮೀರಿ ಎರಡು ಪುಂಡಾನೆಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿವೆ.

ಸಲಗ ಬದಲು ಮರಿಯಾನೆ ಹಿಡಿಯದಿದ್ದಕ್ಕೆ ಆಕ್ರೋಶ
ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟು ರೈತರಿಗೆ ಉಪಟಳ ನೀಡುತ್ತಿದ್ದ ಆನೆಗಳ ಹಿಂಡಿನಲ್ಲಿ ಅಪಾಯಕಾರಿಯಾದ ಎರಡು ಕಾಡನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಸರ್ಕಾರ ಒಪ್ಪಿಗೆ ನೀಡಿತ್ತು. ಕಳೆದ ಆಗಸ್ಟ್13 ರಂದು ಕಾರ್ಯಚರಣೆ ಪ್ರಾರಂಭಿಸಿದ ಅರಣ್ಯ ಇಲಾಖೆ ಎರಡು ಪುಂಡಾನೆಗಳನ್ನು ಸೆರೆ ಹಿಡಿದಿದೆ.
ಅರಣ್ಯ ಇಲಾಖೆ ಸೆರೆ ಹಿಡಿದಿರುವ ಎರಡನೇ ಆನೆ ಇನ್ನೂ ಮರಿಯಾಗಿದೆ. ಸಲಗವನ್ನು ಸೆರೆ ಹಿಡಿಯಬೇಕಾದ ಅರಣ್ಯ ಇಲಾಖೆ ಕಾರ್ಯಚರಣೆ ತ್ವರಿತವಾಗಿ ಮುಗಿಸಲು ಕೈಗೆ ಸಿಕ್ಕ ಆನೆಯನ್ನೇ ಸೆರೆ ಹಿಡಿದು ಪುಂಡಾನೆ ಎಂದು ನಂಬಿಸಲು ಮುಂದಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೇ ಅರಣ್ಯ ಇಲಾಖೆ ನಡೆ ಖಂಡಿಸಿ ಪ್ರತಿಭಟನೆಗೆ ಗ್ರಾಮಸ್ಥರು ಮುಂದಾಗಿದ್ದರು.

ಗ್ರಾಮಸ್ಥರ ಹಿತದೃಷ್ಟಿಯಿಂದ 3ನೇ ಆನೆ ಸೆರೆಗೆ ಒಪ್ಪಿಗೆ
ಗ್ರಾಮಸ್ಥರ ಆಕ್ರೋಶಕ್ಕೆ ಮಣಿದ ಅರಣ್ಯ ಇಲಾಖೆ ಗ್ರಾಮಸ್ಥರ ಒತ್ತಡ ಹಾಗೂ ಜನರ ಹಿತದೃಷ್ಟಿಯಿಂದ ಮೂರನೇ ಪುಂಡಾನೆ ಸೆರೆಗೆ ಒಪ್ಪಿಗೆ ಸೂಚಿಸಿದೆ. ಭಾನುವಾರದಿಂದ ಕಾರ್ಯಚರಣೆ ಪ್ರಾರಂಭಿಸಿವುದಾಗಿ ತಿಳಿಸಿದೆ. ಅಲ್ಲದೇ ಎರಡನೇ ಪುಂಡಾನೆ 19 ವರ್ಷ ವಯಸ್ಸಿನ ಗಂಡಾನೆ ಸೆರೆ ಹಿಡಿಯಲಾಗಿದ್ದು ಅದನ್ನು ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳ ನಿರ್ದೇಶನದ ಮೇರೆಗೆ ಸುರಕ್ಷಿತ ಅರಣ್ಯಕ್ಕೆ ಬಿಡಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ದಂತಗಳನ್ನು ಹೊಂದಿರುವ ಪುಂಡಾನೆ ಸೆರೆಗೆ ಒತ್ತಾಯ
ಕಾಡನಕುಪ್ಪೆ ಗ್ರಾಮದ ಬಳಿಯ ತೆಂಗಿನಕಲ್ಲು ಅರಣ್ಯದಲ್ಲಿ ಪುಂಡಾನೆ ಸೆರೆ ಹಿಡಿದು ಬಿ.ವಿ.ಹಳ್ಳಿ ಕ್ಯಾಂಪ್ ಬಳಿಗೆ ಕಾಡಾನೆಯನ್ನು ತರುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರ ಸೆರೆ ಹಿಡಿದಿರುವ ಆನೆ ದೊಡ್ಡದಿಲ್ಲ, ಉಪಟಳ ನೀಡುತ್ತಿರುವ ಆನೆ ಇದಾಗಿರಲು ಸಾಧ್ಯವೇ ಇಲ್ಲ. ನೀವು ಕಣ್ಣೊರೆಸಲು ಯಾವುದೇ ಆನೆಯನ್ನು ಹಿಡಿದು ತಂದಿದ್ದೀರಿ. ದೊಡ್ಡ ದಂತಗಳನ್ನು ಹೊಂದಿರುವ ಪುಂಡಾನೆಯನ್ನು ಮೊದಲು ಸೆರೆ ಹಿಡಿಯಿರಿ ಎಂದು ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದರು.

ಕ್ಯಾಂಪ್ ಮುಂದುವರೆಸುವ ಭರವಸೆ ನಂತರ ಪ್ರತಿಭಟನೆ ವಾಪಸ್
ಸೆರೆ ಹಿಡಿದ ಎರಡನೇ ಆನೆಯನ್ನು ಸ್ಥಳಾಂತರ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಇದನ್ನು ಲಾರಿಗೆ ಹತ್ತಿಸಬೇಡಿ ಎಂದು ಪಟ್ಟು ಹಿಡಿದು ಲಾರಿ ಮತ್ತು ಕ್ರೇನ್‍ಗೆ ಅಡ್ಡಲಾಗಿ ನಿಂತು ಪ್ರತಿಭಟನೆಗೆ ನಡೆಸಿದರು. ಗ್ರಾಮಸ್ಥರ ಪ್ರತಿರೋಧದ ಹಿನ್ನಲೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತೊಂದು ಆನೆಯನ್ನು ಸೆರೆ ಹಿಡಿಯಲು ಅನುಮತಿ ನೀಡಲಾಗಿದೆ. ಕ್ಯಾಂಪ್ ಮುಂದುವರೆಯಲಿದ್ದು ಎಂದು ಭರವಸೆ ನೀಡಿದ ಹಿನ್ನಲೆಯಲ್ಲಿ ರೈತರು ಪ್ರತಿಭಟನೆ ಕೈಬಿಟ್ಟರು.
ಕಳೆದ ವಾರ ತೆಂಗಿನಕಲ್ಲು ಅರಣ್ಯದ ಕೆಂಪಿಕಟ್ಟೆ ಪ್ರದೇಶದಲ್ಲಿ ಸುಮಾರು 35 ವರ್ಷದ ಒಂಟಿ ಸಲಗ ಎಂದೇ ಖ್ಯಾತಿ ಪಡೆದಿರುವ ಮಕನ ( ಗಂಡು ಅಥಾವಾ ಹೆಣ್ಣು ಅಲ್ಲದ ) ಪುಂಡಾನೆ ಸೆರೆ ಹಿಡಿಯಲಾಗಿತ್ತು. ಬಿ.ವಿ.ಹಳ್ಳಿ ವ್ಯಾಪ್ತಿಯಲ್ಲಿ ಮತ್ತಷ್ಟು ಆನೆಗಳಿದ್ದು ಹಾಗಾಗಿ ಎಲ್ಲಾ ಆನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡುವಂತೆ ರೈತರು ಒತ್ತಾಯಿಸಿದ್ದರು. ಇದೀಗ 2ನೇ ಆನೆಯನ್ನು ಸೆರೆ ಹಿಡಿದಿದ್ದಾರೆ.












Click it and Unblock the Notifications