ರಾಯಚೂರು: 9 ತಿಂಗಳು ಕಳೆದರೂ ತೆರೆಯದ ರಂಗಮಂದಿರದ ಬಾಗಿಲು, ಇದಕ್ಕೆ ಪ್ರಮುಖ ಕಾರಣ ಇಲ್ಲಿದೆ ನೋಡಿ
ರಾಯಚೂರು, ಆಗಸ್ಟ್, 26: ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೆರಗು ನೀಡುವ ಇಲ್ಲಿನ ರಂಗಮಂದಿರವನ್ನು ನವೀಕರಣದ ನೆಪದಲ್ಲಿ ಬಾಗಿಲು ಮುಚ್ಚಿ 9 ತಿಂಗಳಾಗಿದೆ. ಆದರೂ ನವೀಕರಣ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.
ರಾಯಚೂರು ನಗರದಲ್ಲಿ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದ ಆಸನಗಳು ಹಾಳಾಗಿ, ಸುಣ್ಣ ಬಣ್ಣದ ಹಾಗೂ ಹವಾನಿಯಂತ್ರಿತ (ಎಸಿ) ಅಳವಡಿಸಲು ನವೀಕರಣ ಕಾಮಗಾರಿಗೆ ಕಳೆದ ಡಿಸೆಂಬರ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ವರ್ಷವಾಗುತ್ತಾ ಬಂದರೂ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ವಿಧನಸಭಾ ಚುನಾವಣೆ ನೆಪದಲ್ಲಿ ಇನ್ನು ಕಾಮಗಾರಿ ವಿಳಂಬವಾಗಿದೆ ಎಂದು ಹೇಳಿದ್ದರು. ಆದರೆ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾದರೂ ಕಾಮಗಾರಿ ಇನ್ನೂ ಅಂತಿಮ ಹಂತದಲ್ಲಿದೆ ಎಂದು ಗುತ್ತಿಗೆ ಸಂಸ್ಥೆ ಹೇಳುತ್ತಿದೆ.

2.50 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಸರ್ಕಾರದ ಅಧೀನ ಗುತ್ತಿಗೆ ಸಂಸ್ಥೆಯಾಗಿರುವ ಕ್ಯಾಶುಟೆಕ್ ಹಾಗೂ ನಿರ್ಮಿತಿ ಕೇಂದ್ರ ಕಾಮಗಾರಿಗೆ ಜವಾಬ್ದಾರಿ ಹೊತ್ತಿದೆ. ಈ ಸಂಸ್ಥೆಗೆ ಜಿಲ್ಲಾಧಿಕಾರಿಯೇ ಅಧ್ಯಕ್ಷರು ಹಾಗೂ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ. ಗುತ್ತಿಗೆ ಸಂಸ್ಥೆಯ ಮೇಲೆ ನಿರಂತರ ಒತ್ತಡ ಹೇರಿ ಕಾಮಗಾರಿಗೆ ವೇಗವಾಗಿ ಮುಗಿಸಬಹುದಾಗಿತ್ತು. ಆದರೆ ಆಡಳಿತಕ್ಕೆ ಚುರುಕುಗೊಳಿಸದಿರುವುದು ವಿಪರ್ಯಾಸ ಎಂದು ಕಲಾವಿದರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಅನೇಕ ಭ್ರಷ್ಟಾಚಾರದ ಆರೋಪ ಹೊತ್ತಿರುವ ಕ್ಯಾಶುಟೆಕ್, ನಿರ್ಮಿತಿ ಕೇಂದ್ರಕ್ಕೆ ರಂಗಮಂದಿರ ನವೀಕರಣ ಕಾಮಗಾರಿ ಗುತ್ತಿಗೆ ನೀಡಿದಾಗಲೇ ಇಲ್ಲಿನ ಕಲಾವಿದರು, ರಾಜಕೀಯ ನಾಯಕರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಮಾಜಿ ಶಾಸಕ(ಬಿಜೆಪಿ ಮುಖಂಡ) ಎ.ಪಾಪಾರೆಡ್ಡಿ ಹಾಗೂ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿರುಪಾಕ್ಷಿ ಅವರು ಬಹಿರಂಗವಾಗಿ ಕ್ಯಾಶುಟೆಕ್ ಸಂಸ್ಥೆಗೆ ಗುತ್ತಿಗೆ ನೀಡಿದ್ದಕ್ಕೆ ಶಾಸಕ ಡಾ.ಶಿವರಾಜ ಪಾಟೀಲ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ವಿರೋಧದ ನಡುವೆ ಶಾಸಕರು ಕಾಮಗಾರಿಯ ಜವಾಬ್ದಾರಿ ನೀಡಿದ್ದರು.
ಚೆನ್ನಾಗಿಯೇ ಇದ್ದ ರಂಗಮಂದಿರವನ್ನು ನವೀಕರಣ ಮಾಡುವ ಅವಸರವಿರಲಿಲ್ಲ. 2.5 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣ ಮಾಡುತ್ತಿದ್ದು, ಇಷ್ಟೊಂದು ಮೊತ್ತದಲ್ಲಿ ಹೊಸ ರಂಗಮಂದಿರ ನಿರ್ಮಾಣ ಮಾಡಬಹುದು. 1997ರಲ್ಲಿ ಉದ್ಘಾಟನೆಯಾದ ರಂಗಮಂದಿರವನ್ನು 2016-17ರಲ್ಲಿ ನವೀಕರಣ ಮಾಡಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಅಲ್ಲಿನ ಆಸನಗಳು ಮುರಿದುಹೋಗಿದ್ದವು.
2002-03ನೇ ಸಾಲಿನಲ್ಲಿ ಮಾಜಿ ಶಾಸಕ ಎ.ಪಾಪಾರೆಡ್ಡಿ ಅವರ ಅವಧಿಯಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗಿತ್ತು. ಈಗ 2022ರಲ್ಲಿ ಪುನಃ ನವೀಕರಣ ಮಾಡಲಾಗುತ್ತಿದೆ. ಸಾಕಷ್ಟು ಅವೈಜ್ಞನಿಕ ಕಾಮಗಾರಿ ನಡೆಯುತ್ತಿದ್ದು, ರಂಗ ಮಂದಿರ ಜನಪ್ರತಿನಿಧಿಗಳಿಗೆ ಹಾಗೂ ಗುತ್ತಿಗೆ ಸಂಸ್ಥೆಗಳಿಗೆ ಕಾಮಧೇನುವಾಗಿದೆ ಎಂದು ಹಿರಿಯ ಕಲಾವಿದ ಅಲ್ತಾಫ್ ರಂಗಮಿತ್ರ ಅವರ ಆರೋಪವಾಗಿದೆ.
ರಾಯಚೂರು ನಗರದಲ್ಲಿ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿ ಒಂದೇ ಕಲಾವಿದರಿಗೆ ಕಲಾ ಸಂಘಗಳಿಗೆ ಉತ್ತಮ ವೇದಿಕೆಯಾಗಿದೆ. ಇದನ್ನು ಹೊರತುಪಡಿಸಿ ಕಲ್ಯಾಣ ಮಂಟಪಗಳಲ್ಲಿ ಕಾರ್ಯಕ್ರಮ ಆಯೋಜನೆಗೆ ಹೆಚ್ಚಿನ ಹಣ ಖರ್ಚು ಮಾಡಬೇಕು. ಆದಷ್ಟು ಬೇಗ ದುರಸ್ತಿ ಕಾರ್ಯ ಪೂರ್ಣಗೊಳಿಸಿದರೆ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ. ಈಗ ಹವಾನಿಯಂತ್ರಿತ ವ್ಯವಸ್ಥೆ(ಎಸಿ) ಮಾಡುವುದರಿಂದ ರಂಗಮಂದಿರದ ಬಾಡಿಗೆ ದರ ಹೆಚ್ಚಳ ಮಾಡುವ ಸಂಭವವಿದ್ದು, ಕಲಾವಿದರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದರ ನಿಗದಿ ಮಾಡಬೇಕು ಎಂದು ಕಲಾ ಸಂಕುಲ ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಡೀಗೇರ್ ಅವರ ಒತ್ತಾಯವಾಗಿದೆ.












Click it and Unblock the Notifications