ರಾಯಚೂರು: ಭರ್ಜರಿ ರೋಡ್ ಶೋ ನಡೆಸಿದ ಎಸ್‌ಯುಸಿಐ(ಸಿ) ಪಕ್ಷದ ಅಭ್ಯರ್ಥಿ ವೀರೇಶ್
ರಾಯಚೂರು, ಮೇ.08: ರಾಯಚೂರು ನಗರ ಕ್ಷೇತ್ರದ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ವೀರೇಶ್ ಎನ್ ಎಸ್ ಸೋಮವಾರ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ನಗರದ ಕರ್ನಾಟಕ ಸಂಘದಿಂದ ನೇತಾಜಿ ಸರ್ಕಲ್, ಬಂಗಾರ ಬಜಾರ್,ಭಗತ್ ಸಿಂಗ್ ಸರ್ಕಲ್ ಮೂಲಕ ಬಸ್ ನಿಲ್ದಾಣದವರೆಗೆ ರೋಡ್ ಶೋ ನಡೆಸಿದ್ದಾರೆ.
ಎಸ್.ಯು.ಸಿ.ಐ(ಸಿ) ಪಕ್ಷದ ಹಿರಿಯ ರಾಜ್ಯ ಸಮಿತಿ ಸದಸ್ಯರಾದ ಎಚ್ ವಿ ದಿವಾಕರ್ ಅವರ ನೇತೃತ್ವದಲ್ಲಿ ಅಪಾರ ಬೆಂಬಲಿಗರೊಂದಿಗೆ ರೋಡ್ ಶೋ ನಡೆದಿದೆ. ಪ್ರಚಾರದ ವೇಳೆ ಎಸ್.ಯು.ಸಿ.ಐ(ಸಿ) ಪಕ್ಷದ ಜಿಲ್ಲಾ ಕಾರ್ಯದರ್ಶಿಯಾದ ಚಂದ್ರಗಿರೀಶ್ ಅವರು ಮಾತನಾಡಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳಲ್ಲಿ ಪ್ರಾಮಾಣಿಕತೆ ಇಲ್ಲದಂತಾಗಿದೆ. ಏಷ್ಟೋ ಕಡೆ ರೌಡಿ ಶೀಟರ್‌ಗಳಿಗೆ, ಭ್ರಷ್ಟರಿಗೆ ಟಿಕೆಟ್ ನೀಡಿದ್ದಾರೆ. ಜನರು ಮತ ನೀಡದಿದ್ದರೆ ನಿಮಗೆ ಸೌಲಭ್ಯ ಕೊಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ. ಜನರು ಇವರಿಗೆ ತಕ್ಕ ಪಾಠ ಕಲಿಸಬೇಕು" ಎಂದಿದ್ದಾರೆ.

"ಜನರ ಜ್ವಲಂತ ಸಮಸ್ಯೆಗಳನ್ನು ತೆಗೆದುಕೊಂಡು ನಿರಂತರವಾಗಿ ಹೋರಾಟ ಕಟ್ಟುತ್ತಿರುವ ನಮ್ಮ ಪಕ್ಷದಿಂದ ಚುನಾವಣಾ ಕಣಕ್ಕೆ ಇಳಿಸಲಾಗಿರುವ ವೀರೇಶ್ ಎನ್ ಎಸ್ ರವರು ಅತ್ಯಂತ ಪ್ರಾಮಾಣಿಕರಾಗಿದ್ದು, ಸೈದಾಂತಿಕ ಸ್ಪಷ್ಟತೆಯನ್ನು ಹೊಂದಿದ್ದಾರೆ. ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಶೈಕ್ಷಣಿಕ ಸಮಸ್ಯೆ ತೆಗೆದುಕೊಂಡು ಹಲವಾರು ಕಟ್ಟಿದ್ದಾರೆ. ಈಗ ಕಾರ್ಮಿಕರ ಶಾಸನಾಬದ್ಧ ಹಕ್ಕುಗಳಿಗಾಗಿ ಹೋರಾಟ ಕಟ್ಟುತ್ತಿದ್ದಾರೆ. ರಾಯಚೂರು ಜನರ ಸಮಸ್ಯೆಗಳ ಪರಿಹಾರಕ್ಕಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತಲು ನಮ್ಮ ಅಭ್ಯರ್ಥಿಗೆ ಮತ ನೀಡಬೇಕ" ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ಅಭ್ಯರ್ಥಿ ವೀರೇಶ್ ಎನ್.ಎಸ್ ಮಾತನಾಡಿ, "ಜನರ ನೈಜ ಸಮಸ್ಯೆಗಳಾದ ಬಡತನ, ಭ್ರಷ್ಟಾಚಾರ ,ನಿರುದ್ಯೋಗ ಶಿಕ್ಷಣ- ಆರೋಗ್ಯದ ವ್ಯಾಪಾರಿಕರಣ ಇಂತಹ ವಿಷಯಗಳಿಂದ ವಿಮುಖಗೊಳಿಸಿ, ಜನರನ್ನು ಧರ್ಮ ಜಾತಿ ಹೆಸರಿನಲ್ಲಿ ಒಡೆದು ಮತವನ್ನು ಗಿಟ್ಟಿಸಿಕೊಳ್ಳುವ ಕ್ಷುಲ್ಲಕ ಜನ ವಿರೋಧಿ ನೀತಿಯನ್ನು ತರಲು ಪ್ರಯತ್ನ ಮಾಡುತ್ತಿದ್ದಾರೆ. ಪ್ರಜ್ಞಾವಂತ ಮತದಾರರ ಐಕ್ಯತೆಗಾಗಿ ಶ್ರಮಿಸುತ್ತಿರುವ ಎಸ್.ಯು.ಸಿ.ಐ(ಸಿ) ಪಕ್ಷದ ಚುನಾವಣಾ ಗುರುತು ಬ್ಯಾಟ್ ಗೆ ಮತ ನೀಡುವುದರ ಮೂಲಕ ಜನರನ್ನು ಒಡೆದಾಳುವ ನೀತಿಯನ್ನು ಸೋಲಿಸಬೇಕು" ಎಂದಿದ್ದಾರೆ.

"ಇಂದು ಚುನಾವಣೆ ಎಂದರೆ ದೊಡ್ಡ ದೊಡ್ಡ ಪಕ್ಷಗಳು ಕೋಟಿ ಕೋಟಿ ಹಣ ಖರ್ಚು ಮಾಡಿ ಗೆದ್ದು ಬಂದ ನಂತರ ಕೋಟಿ ಕೋಟಿ ಹಣವನ್ನು ಲೂಟಿ ಮಾಡುವುದನ್ನು ನಮ್ಮ ಕಣ್ಣಾರೆ ನೋಡುತ್ತಿದ್ದೇವೆ. ಹಾಗೆ ಚುನಾವಣೆ ಸಂದರ್ಭದಲ್ಲಿ ಇತ್ತೀಚಿನ ವರದಿಯ ಪ್ರಕಾರ ಬಿಜೆಪಿ, ಕಾಂಗ್ರೆಸ್ ಇತ್ಯಾದಿ ಬಂಡವಾಳ ಶಾಹಿ ಪಕ್ಷಗಳಿಗೆ ಅಂಬಾನಿ ಅದಾನಿಗಳಂತ ಬಂಡವಾಳಶಾಹಿಗಳು ಎಲೆಕ್ಷನ್ ಬಾಂಡ್ ರೂಪಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಹಣವನ್ನು ಕೊಡುತ್ತಾರೆ. ಗೆದ್ದು ಬಂದ ಮೇಲೆ ಈ ಪಕ್ಷಗಳು ಹೇಗೆ ತಾನೆ ಬಡವರ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುತ್ತಾರೆ. ಹಾಗಾಗಿ ನೈಜ ಜನ ಚಳುವಳಿಗಳನ್ನು ಕಟ್ಟುತ್ತಿರುವ ಪಕ್ಷವಾಗಿರುವ ನಮಗೆ ಚುನಾವಣೆಯ ಖರ್ಚಿಗಾಗಿ ನಮ್ಮ ಜನರೇ ಉದಾರವಾಗಿ ದೇಣಿಗೆ ನೀಡಬೇಕಾಗುತ್ತದೆ" ಎಂದು ಜನರ ಬಳಿ ದೇಣಿಗೆ ಸಂಗ್ರಹಿಸಿದ್ದಾರೆ.












Click it and Unblock the Notifications