ರೇಖಲಮರಡಿ: ಕಲುಷಿತ ನೀರು ಸೇವಿಸಿ ಅಸ್ವಸ್ಥರಾದ ಜನ, ಒಂದು ಮಗು ಸಾವು, ಸಿಎಂ ನೀಡಿದ ಖಡಕ್ ಸೂಚನೆಗಳೇನು?
ರಾಯಚೂರು, ಮೇ, 28: ದೇವದುರ್ಗ ತಾಲೂಕಿನ ರೇಖಲಮರಡಿ ಬಳಿಯ ಗೊರೆಬಾಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ. ಹಾಗೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶಿಸಿದ್ದಾರೆ.
ಅಧಿಕಾರಿಗಳಿಗೆ ನೀಡಿರುವ ಪ್ರಮುಖ ಸೂಚನೆಗಳು
ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಪರಿಶೀಲನೆ ಮಾಡಿ, ನೀರಿನ ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ಕಳುಹಿಸಿ ವರದಿ ತರಿಸಿಕೊಳ್ಳಬೇಕು. ವರದಿಯ ಆಧಾರದ ಮೇರೆಗೆ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆಗೆ ಕ್ರಮವಹಿಸಬೇಕು. ಹಾಗೆಯೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿ, ವಿಷಪೂರಿತ ನೀರಿನ ಮೂಲಗಳನ್ನು ಬಂದ್ ಮಾಡಬೇಕು. ಇನ್ನು ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಗ್ರಾಮದಲ್ಲಿಯೇ ಬೀಡುಬಿಟ್ಟ ವೈದ್ಯರ ತಂಡ
ದೇವದುರ್ಗ ತಾಲೂಕಿನ ರೇಖಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಗ್ರಾಮದ ಜನರಿಗೆ ಎರಡು ದಿನದಿಂದ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ಹಲವರು ಅಸ್ವಸ್ಥರಾಗಿದ್ದರು. ಆರೋಗ್ಯ ಪರೀಕ್ಷೆಗಾಗಿ ವೈದ್ಯರ ತಂಡ ಶುಕ್ರವಾರ ಮತ್ತು ಶನಿವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ತುರ್ತು ಚಿಕಿತ್ಸಾ ಘಟಕ ಸ್ಥಾಪಿಸಿ, ಕಳೆದು ಎರಡು ದಿನದಿಂದ ಅಲ್ಲಿಯೇ ಬೀಡು ಬಿಟ್ಟಿದೆ.
ಗ್ರಾಮದಲ್ಲಿ ಪಂಚಾಯಿತಿ ರಚನೆಯ ನಂತರ ಇಲ್ಲಿನ ಸಿಬ್ಬಂದಿ ಗ್ರಾಮದಲ್ಲಿನ ಯಾವುದೇ ಚರಂಡಿಗಳ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿಲ್ಲ. ಮೂರು ವರ್ಷದ ಹಿಂದೆ ಗ್ರಾಮದ ಯುವಕರು ಹೂಳೆತ್ತುವಂತೆ ಪಿಡಿಓಗೆ ದೂರು ಸಹ ನೀಡಿದ್ದಾರೆ. ಆದರೂ ಗ್ರಾಮದಲ್ಲಿ ನೀರು ಸರಬರಾಜು ಮಾಡುತ್ತಿದ್ದ ಬೆಟ್ಟದ ಮೇಲಿನ ನೀರಿನ ಟ್ಯಾಂಕ್ ಕಳೆದ ನಾಲ್ಕು ವರ್ಷದಿಂದ ಕ್ಲೀನ್ ಮಾಡಿಸಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ.
ಕಡೆ ಪಕ್ಷ ಗಬ್ಬು ನಾರುತ್ತಿದ್ದ ಚರಂಡಿಗಳು, ನೀರಿನ ಟ್ಯಾಂಕ್‌ಗಳಿಗೆ ಬ್ಲಿಚಿಂಗ್ ಪೌಡರ್ ಕೂಡ ಹಾಕಿಲ್ಲ. ಕುಡಿಯುವ ನೀರಿನ ಪೈಪ್‌ಲೈನ್ ಹೊಡೆದು ಚರಂಡಿ ನೀರು ಸೇರುತ್ತಿರುವ ಬಗ್ಗೆ ಪಿಡಿಓ ಗಮನಕ್ಕೆ ತಂದರೂ ನಿರ್ಲಕ್ಷ ವಹಿಸಿದ್ದರು. ಇದರಿಂದ ಇಂದು ಗ್ರಾಮದ ಜನರು ಸಾವು ಬದುಕಿನ ಮಧ್ಯೆ ಹೋರಾಡುವ ಪರಿಸ್ಥಿತಿ ನಿರ್ಮಿಸಿದ್ದಾರೆ ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿಯ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಒಟ್ಟು 90 ಮನೆಗಳಿದ್ದು, ಇಲ್ಲಿ 300ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದಾರೆ. ಪ್ರತಿಯೊಂದು ಕುಟುಂಬದಲ್ಲಿಯೂ ಸಹ ವಾಂತಿ, ಭೇದಿಯ ಪ್ರಕರಣಗಳು ಕಾಣಿಸಿಕೊಂಡಿರುವುದು ಇದರಿಂದ ಗ್ರಾಮಸ್ಥರಿಗೆ ಸಾಕಷ್ಟು ಆತಂಕ ಎದುರಾಗಿದೆ. ಗ್ರಾಮದಲ್ಲಿ ನೈರ್ಮಲ್ಯದ ಕೊರತೆಯಿದ್ದು, ಚರಂಡಿಗಳು ಹೂಳಿನಿಂದ ತುಂಬಿವೆ. ಬಸ್ ನಿಲ್ದಾಣದ ಹತ್ತಿರ ರಸ್ತೆಯಲ್ಲಿರುವ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಕೆಳಗಡೆಯೇ ತಿಪ್ಪೆ ಹಾಕಿರುವುದು, ರಸ್ತೆ ಬದಿಯಲ್ಲಿ ಬಯಲು ಶೌಚ ಮಾಡುವುದು ಗ್ರಾಮದಲ್ಲಿ ಸಾಮಾನ್ಯವಾಗಿದೆ.
ಗ್ರಾಮದಲ್ಲಿ ಶುಕ್ರವಾರ ಹನುಮಂತ ಎನ್ನುವವರು ವಾಂತಿ- ಭೇದಿಯಿಂದ ಮೃತಪಟ್ಟು, 40ಕ್ಕೂ ಹೆಚ್ಚಿನ ಜನ ಅಸ್ವಸ್ಥರಾಗಿದ್ದರಿಂದ ಶನಿವಾರ ಕೂಡ ವೈದ್ಯರ ತಂಡ ಗ್ರಾಮದ ಶಾಲೆಯಲ್ಲಿ ಜನರ ಆರೋಗ್ಯ ತಪಾಸಣೆ ನಡೆಸಿತು. ನೆರೆ ಹೊರಯ 20ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕರು ಮನೆ ಮನೆಗೆ ತೆರಳಿ ಸರ್ವೇ ನಡೆಸಿ, ಜನರ ಆರೋಗ್ಯದ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಜಿಲ್ಲಾ ಸಮೀಕ್ಷಣಾ ತಂಡ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿರುವ ನೀರಿನ ಟ್ಯಾಂಕ್ ಮತ್ತು ನೈರ್ಮಲ್ಯದ ಕುರಿತು ತಪಾಸಣೆ ನಡೆಸಿದರು. ಸದ್ಯ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮಸ್ಥರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಹಾಗೆಯೆ ಅಸ್ವಸ್ಥಗೊಂಡ ಜನರಿಗೆ ಅರಕೇರಾ ಪಟ್ಟಣ ಸಮುದಾಯ ಆರೋಗ್ಯ ಕೇಂದ್ರ, ದೇವದುರ್ಗದ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ರಾಯಚೂರಿನ ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿನ ನೀರಿನ ಮಾದರಿಯನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ. ಅದರ ವರದಿ ಬರುವವರೆಗೂ ನಲ್ಲಿ ಮೂಲಕ ನೀರಿನ ಪೂರೈಕೆ ಸ್ಥಗಿತಗೊಳಿಸಿ, ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು ಎಂದು ಜಾಗಿರ ಜಾಡಲದಿನ್ನಿ ಗ್ರಾಮ ಪಂಚಾಯಯಿ ಸದಸ್ಯರು ಮಾಹಿತಿ ನೀಡಿದರು. ಮತ್ತೊಂದೆಡೆ ಜನರ ಆರೋಗ್ಯದ ವಿಚಾರದಲ್ಲಿ ಬೇಜವಾಬ್ದಾರಿ ತೋರಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೇಣುಕಾ ಅವರುನ್ನು ಜಿಲ್ಲಾ ಪಂಚಾಯಿತಿ ಸಿಇಓ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ತಾಲೂಕು ಆರೋಗ್ಯಾಧಿಕಾರಿ ಹೇಳಿದ್ದೇನು?
ಗ್ರಾಮದ ಪ್ರತಿಯೊಂದು ಕುಟುಂಬದ ಸದಸ್ಯರ ಮೇಲೆ ನಿಗಾ ವಹಿಸಿದ್ದೆವೆ. ತಪಾಸಣೆಗೆ ಹಿಂದೇಟು ಹಾಕುವವರ ಮನೆ-ಮನೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯಕರ್ತರು ಭೇಟಿ ನೀಡಿ ಆರೋಗ್ಯ ವಿಚಾರಿಸುತಿದ್ದಾರೆ. ಅಗತ್ಯವಿದ್ದರೆ ಜಿಲ್ಲಾ-ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬನದೇಶ್ವರ ತಿಳಿಸಿದ್ದಾರೆ.
ಎಲ್ಲಾ ಸಿಬ್ಬಂದಿಯನ್ನ ಸೇವೆಯಿಂದ ವಜಾಗೊಳಿಸಿ
ಗ್ರಾಮ ಪಂಚಾಯಿತಿಯ ಸಿಬ್ಬಂದಿ, ಸದಸ್ಯರ ನಿರ್ಲಕ್ಷತನದಿಂದ ಗ್ರಾಮದ ಜನರೆಲ್ಲರೂ ಸಾವು ಬದುಕಿನ ಮಧ್ಯೆ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಿಡಿಒ ಅಮಾನತ್ತು ಜೊತೆಗೆ ಪಂಚಾಯತಿಯ ಎಲ್ಲಾ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿ. ಹಾಗೆಯೆ ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಮೃತ ಬಾಲಕನ ಸಹೋದರ ಬಂಡೇಶ ನಾಯಕ ಆಗ್ರಹಿಸಿದ್ದಾರೆ.












Click it and Unblock the Notifications