Raichur: ಭಕ್ತರ ಸೋಗಿನಲ್ಲಿ ಬಂದು ಮಠದಲ್ಲಿ ಕಳ್ಳತನ ಮಾಡಿ ಕಾಲ್ಕಿತ್ತಿದ ಕಳ್ಳರು
ರಾಯಚೂರು ಜುಲೈ 5: ಸರಳ ವಾಸ್ತು ಸಂಶೋಧಕ ಚಂದ್ರಶೇಖರ್ ಗುರೂಜಿ ಕೊಲೆಯಾಗಿ ಇಂದಿಗೆ ಎರಡು ವರ್ಷ ಪೂರ್ಣಗೊಂಡಿದೆ. ಈ ಹತ್ಯೆ ಯಾರೂ ಕೂಡ ಮರೆಯಲು ಸಾಧ್ಯವೇ ಇಲ್ಲ. ಈ ನಡುವೆ ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟದ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದ ಪೀಠಾಧಿಪತಿಗಳನ್ನು ಹೆದರಿಸಿ, ದರೋಡೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಮಠದಲ್ಲಿ ಸಿದ್ದಲಿಂಗ ಸ್ವಾಮಿಜಿ ಒಬ್ಬರೇ ಇದ್ದ ವೇಳೆ ಮಧ್ಯರಾತ್ರಿ ಬಂದ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಭಕ್ತರ ಸೋಗಿನಲ್ಲಿ ಬಂದಿದ್ದ ಗ್ಯಾಂಗ್ ಮಲಗಿದ್ದ ಗುರೂಜಿಯನ್ನು ಎಬ್ಬಿಸಿ ಬೆದರಿಕೆ ಹಾಕಿ ಮಠದಲ್ಲಿ ಇದ್ದ ಚಿನ್ನಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.

ಬಳಿಕ ಸಿದ್ಧಲಿಂಗ ಸ್ವಾಮೀಜಿ ಪೊಲೀಸರಿಗೆ ದೂರು ನೀಡಿದ್ದಾರೆ. ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಸುಮಾರು 80 ಗ್ರಾಂ ತೂಕದ ಚಿನ್ನ ಹಾಗೂ 7 ಕೆಜಿ ಬೆಳ್ಳಿ ಆಭರಣಗಳು, ಸುಮಾರು 20 ಲಕ್ಷ ನಗದು ಸೇರಿದಂತೆ 35 ಲಕ್ಷ ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ಕದ್ದು ಕಾಲ್ಕಿತ್ತಿದ್ದಾರೆ.
ಭಕ್ತರ ಸೋಗಿನಲ್ಲಿ ಬಂದ ಗ್ಯಾಂಗ್ ತಾವು ಕಲಬುರಗಿಯಿಂದ ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ರಾತ್ರಿ ಮಠದಲ್ಲಿ ಆಶ್ರಯ ಕೊಡಿ ಎಂದು ಕೇಳಿದ್ದಾರೆ. ಬಳಿಕ ನೀರು ಕೇಳುವ ನೆಪದಲ್ಲಿ ನಡುರಾತ್ರಿ ಸ್ವಾಮಿಜಿ ಕೋಣೆ ಬಾಗಿಲು ತೆಗೆಸಿ ಸುಲಿಗೆ ಮಾಡಿದ್ದಾರೆ. ಪಿಸ್ತೂಲ್ ರೀತಿಯ ಆಯುಧ ಹಿಡಿದು ಬೆದರಿಸಿ ಸುಲಿಗೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಚಂದ್ರಶೇಖರ್ ಗುರೂಜಿ ಕೊಲೆಯಾಗಿ ಇಂದಿಗೆ ಎರಡು ವರ್ಷ!
ಜುಲೈ 5 ಮಂಗಳವಾರದಂದು ಉತ್ತರ ಕರ್ನಾಟಕದ ಹುಬ್ಬಳ್ಳಿಯ ಖಾಸಗಿ ಹೋಟೆಲ್ ಆವರಣದಲ್ಲಿ ಚಂದ್ರಶೇಖರ ಗುರೂಜಿ ಅವರನ್ನು ಹಾಡಹಗಲೇ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು. ಈ ದೃಶ್ಯ ಸಿಸಿಟಿವಿ ಫೂಟೇಜ್‌ನಲ್ಲಿ ಸೆರೆಯಾಗಿತ್ತು. ಗುರೂಜಿ ಅವರ ಮೇಲೆ ಹಲವಾರು ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿತ್ತು.
ಗುರೂಜಿ ಆಪ್ತರಲ್ಲಿ ಮೂಡಿದ ಮನಸ್ತಾಪವೂ ಕೊಲೆಗೆ ಮೂಲ ಕಾರಣ ಎನ್ನಲಾಗಿದೆ. ಗುರೂಜಿ ಅವರ ಅಣ್ಣನ ಮಕ್ಕಳು, ಗುರೂಜಿ ಕಂಪನಿಯ ವ್ಯವಹಾರಗಳಲ್ಲಿ ಪ್ರವೇಶವಾದ ನಂತರದಲ್ಲಿ ಸಮಸ್ಯೆ ಶುರುವಾಗಿದೆ. 2014ರ ನಂತರ ಗುರೂಜಿ ಸರಳವಾಸ್ತು ಕಂಪನಿಯಲ್ಲಿ ಮಹತ್ತರ ಬೆಳವಣಿಗೆ ಆಗಿದೆ. ಚಂದ್ರಶೇಖರ ಗುರೂಜಿ, ಸಿಬ್ಬಂದಿ ನಡುವೆ ಅಣ್ಣನ ಮಕ್ಕಳು ವಿಲನ್‌ಗಳಾಗುತ್ತಿದ್ದಾರೆ ಎಂದು ಹತ್ಯೆ ಆರೋಪಿ ಮಂಜುನಾಥ ಸ್ವತಃ ಗುರೂಜಿ ಮುಂದೆ ನೋವು ತೋಡಿಕೊಂಡಿದ್ದರು.
ಗುರೂಜಿ, ಸಿಬ್ಬಂದಿ ಮೇಲಿಟ್ಟಿದ್ದ ಕಾಳಜಿಯು ಗುರುಜಿ ಅಣ್ಣನ ಮಕ್ಕಳು ಪ್ರವೇಶಿಸಿದ ಬಳಿಕ ಕಡಿಮೆಯಾಗಿದೆ. ಇದರಿಂದ ಹುಟ್ಟಿಕೊಂಡ ಮನಸ್ತಾಪ ಗುರೂಜಿ ಅಂತ್ಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.












Click it and Unblock the Notifications