Shivaraj Patil: ರಾಯಚೂರು ಬಿಜೆಪಿಯಲ್ಲಿ ಅಸಮಾಧಾನ ಹೊಗೆ, ವಲಸಿಗರಿಗೆ ಜಿಲ್ಲಾಧ್ಯಕ್ಷ ಪಟ್ಟ, ಕಮಲಕ್ಕೆ ಬಣ ಕಾಟ!
ರಾಯಚೂರು ಜನವರಿ 27: ಬಿಜೆಪಿ ಹೈಕಮಾಂಡ್ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿದ್ದರಿಂದ ಜಿಲ್ಲಾ ಘಟಕದಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ವಲಸಿಗರಿಗೆ ಪಟ್ಟ ನೀಡಿ ಪಕ್ಷದ ಮೂಲ ಕಾರ್ಯಕರ್ತರಿಗೆ ಅನ್ಯಾಯ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿರುವುದರಿಂದ ಹೈಕಮಾಂಡಿಗೂ ಬಿಸಿ ತುಪ್ಪವಾದಂತಾಗಿದೆ. ಒಲ್ಲದ ಮನಸ್ಸಿನಿಂದಲೇ ಶಿವರಾಜ ಪಾಟೀಲರು ಅಧಿಕಾರ ಸ್ವೀಕರಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಪದಗ್ರಹಣ ಸ್ವೀಕಾರ ಸಮಾರಂಭದಲ್ಲಿ ಶಿವರಾಜ ಪಾಟೀಲರು, ನಾನೇನು ಬಯಸಿ ಅಧಿಕಾರ ಸ್ವೀಕರಿಸಿಲ್ಲ. ಇದು ಕಾರ್ಯಕರ್ತರು ನನಗೆ ನೀಡಿದ ಶಕ್ತಿ ಎಂದು ಹೇಳಿದ್ದಾರೆ. ಜೊತೆಗೆ ವರಿಷ್ಠರು ಒತ್ತಾಯ ಪೂರ್ವಕ ಅಧ್ಯಕ್ಷ ಸ್ಥಾನ ನೀಡಿದ್ದಾರೆ ಎಂಬ ಮಾತು ಶಾಸಕರ ಮಾತಿನಲ್ಲಿ ಅಡಗಿದಂತೆ ಕಾಣುತ್ತಿತ್ತು.
ಬಿಜೆಪಿ ಕಚೇರಿಯಲ್ಲಿ ನಡೆದ ಪದಗ್ರಹಣ ಸ್ವೀಕಾರ ಸಮಾರಂಭಕ್ಕೆ ಮಾಜಿ ಸಚಿವ ಹಾಗೂ ಕೆಲ ಶಾಸಕರು ಗೈರು ಹಾಜರಿಯಾಗಿದ್ದರು. ಡಾ.ಶಿವರಾಜ ಪಾಟೀಲರಿಗೆ ಜಿಲ್ಲಾಧ್ಯಕ್ಷರ ಪಟ್ಟ ನೀಡಿದ್ದರಿಂದ ಪಕ್ಷದಲ್ಲಿ ಶಾಸಕ ಹಾಗೂ ಮಾಜಿ ಸಚಿವರು ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಮಾಜಿ ಸಚಿವ ಕೆ.ಶಿವನಗೌಡ ನಾಯಕ, ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಹಾಗೂ ಬಿ.ವಿ.ನಾಯಕ ಅವರು ಪದಗ್ರಹಣ ಸಮಾರಂಭದಿಂದ ದೂರ ಉಳಿದಿದ್ದಾರೆ. ಒಟ್ಟಿನಲ್ಲಿ ಅಧ್ಯಕ್ಷರಾಗಿ ಪಾಟೀಲರು ನೇಮಕರಾದರೂ ಬಿಜೆಪಿಯಲ್ಲಿ ಅಸಮಾಧಾನ ಮಾತ್ರ ಕಮ್ಮಿಯಾಗಿಲ್ಲ ಎಂಬುದು ಕಾಣುತ್ತಿದೆ.
ಶಾಸಕ ಡಾ.ಶಿವರಾಜ ಪಾಟೀಲ್ ಅವರು ಮೂಲತಃ ಜೆಡಿಎಸ್ ನಿಂದ ಬಿಜೆಪಿಗೆ ಸೇರಿ ಆರು ವರ್ಷದೊಳಗೆ ಜಿಲ್ಲಾಧ್ಯಕ್ಷರಾಗಿದ್ದಾರೆ. ಇದು ಪಕ್ಷದೊಳಗಿನ ಕೆಲ ಹಿರಿಯ ನಾಯಕರಿಗೆ , ಮೂಲ ಕಾರ್ಯಕರ್ತರಿಗೆ ಇರಸು ಮುರಸು ತಂದಿದೆ. ಜಿಲ್ಲಾಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿದ್ದ ಕೆ.ಎಂ.ಪಾಟೀಲ್, ರಾಜಕುಮಾರ, ಸಿದ್ಧನಗೌಡ ನೆಲಹಾಳ, ರವೀ ಂದ್ರ ಜಲ್ದಾರ್, ಬಂಡೇಶ್ ವಲ್ಕಂ ದಿನ್ನಿ, ಶಂಕರರೆಡ್ಡಿ ಅವರ ಹೆಸರು ಕೇಳಿ ಬಂದಿತ್ತು. ಅವರಲ್ಲಿ ಕೆ.ಎಂ.ಪಾಟೀಲ್ , ಸಿದ್ಧನಗೌಡ ನೆಲಹಾಳ ಹೆಸರು ಮುಂಚೂಣಿಯಲ್ಲಿದ್ದವು. ಆದರೆ ಶಿವರಾಜ್ ಪಾಟೀಲ್ ಸ್ಥಾನ ಪಡೆದುಕೊಂಡಿದ್ದಾರೆ.
2013 ರಲ್ಲಿ ಮೊದಲ ಬಾರಿ ಜೆಡಿಎಸ್ ನಿಂದ ಶಾಸಕರಾದ ಡಾ.ಶಿವರಾಜ ಪಾಟೀಲ್ ರು 2018ರಲ್ಲಿ ಬಿಜೆಪಿ ಸೇರಿ ಗೆಲುವು ಸಾಧಿಸಿದರು. 2023 ರಲ್ಲಿ ಮತ್ತೆ ಬಿಜೆಪಿಯಿಂದ ಗೆದ್ದು ಹ್ಯಾಟ್ರಿಕ್ ಸಾಧಿಸಿದರು. ಮೂರು ಸಲ ಶಾಸಕರಾದರೂ ನಗರ ಕ್ಷೇತ್ರ ಬಿಟ್ಟು ಬೇರೆ ಕಡೆ ಸಂಚರಿಸಿಲ್ಲ. ಈ ಕಾರಣಕ್ಕೆ ಜಿಲ್ಲಾಧ್ಯಕ್ಷ ಸ್ಥಾನ ತಿರಸ್ಕರಿಸಿದ್ದರು. ಆದರೆ ರಾಜ್ಯಾಧ್ಯಕ್ಷರ ಕಟ್ಟಪ್ಪಣೆ ಮೀರಲಾಗದೇ ಒಪ್ಪಿಕೊಂಡಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಕೇಳಿ ಬಂದಿತ್ತು. ಆದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಲ್ಲರನ್ನು ಒಗ್ಗೂಡಿಸಿಕೊಂಡು ಪಕ್ಷವನ್ನು ಸಂಘಟಿಸಿಕೊAಡು ಶಾಸಕರು ಹೋಗುತ್ತಾರೆ ಎಂದು ಹೈಕಮಾಂಡ್ ನಿರ್ಧಾರ ಮಾಡಿದೆ. ಹೀಗಾಗಿ ಜಿಲ್ಲಾಧ್ಯಕ್ಷರು ಹೇಳಿದಂತೆ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ಕೆ.ಎಂ.ಪಾಟೀಲ್ ಹೇಳಿದರು












Click it and Unblock the Notifications