ಕಪ್ಪು ಮಣ್ಣಿನಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಯಶಸ್ಸು ಕಂಡ ರಾಯಚೂರಿನ ರೈತ
ರಾಯಚೂರು ಸೆಪ್ಟೆಂಬರ್ 24: ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಸಮೀಪದ ಮೇದಿನಾಪುರ ಗ್ರಾಮದ ರೈತ ಅಮರಪ್ಪ ನಿಂಗಪ್ಪ ಅವರು ಕಪ್ಪು ಮಣ್ಣಿನಲ್ಲಿ ಡ್ರ್ಯಾಗನ್ ಫ್ರೂಟ್ (ಕಮಲಂ ಹಣ್ಣು) ಬೆಳೆದು ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಕೆಂಪು ಮಣ್ಣಿನಲ್ಲಿ ಹೆಚ್ಚಾಗಿ ಈ ಬೆಳೆಯನ್ನು ಅಮರಪ್ಪ ಅವರು ಕಪ್ಪು ಮಣ್ಣಿನಲ್ಲಿ ಬೆಳೆದು ಯಶ್ ಕಂಡಿದ್ದಾರೆ.
ಮೇದಿನಾಪುರ ಗ್ರಾಮದ ತಮ್ಮ ಒಂದು ಎಕರೆ ಜಮೀನಿನಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದಾರೆ. ಸಂಪೂರ್ಣ ಸಾವಯವ ಪದ್ಧತಿ ಅನುಸರಿಸಿದ್ದರಿಂದ ಈ ಹಣ್ಣುಗಳ ರುಚಿಯು ವಿಭಿನ್ನವಾಗಿದೆ. ಈಗಾಗಲೇ ಒಂದು ಕ್ವಿಂಟಲ್ ಹಣ್ಣುಗಳನ್ನು ಕಟಾವು ಮಾಡಿದ್ದು, ಸ್ಥಳೀಯವಾಗಿ ಮಾರಾಟ ಮಾಡಿ ₹60ರಿಂದ ₹70 ಸಾವಿರ ಲಾಭ ಪಡೆದಿದ್ದಾರೆ.

ಇದೇ ಒಂದು ಎಕರೆ ಜಮೀನಿನಲ್ಲಿ 50 ಸಾಗುವಾನಿ, 50 ಶ್ರೀಗಂಧ ಗಿಡಗಳನ್ನು ಬದುವಿನಲ್ಲಿ ಹಾಕಲಾಗಿದೆ. ಇದರ ಜೊತೆ ಖಾಲಿ ಜಾಗದಲ್ಲಿ ಟೊಮೆಟೊ, ಚವಳೆಕಾಯಿ, ಬದನೆಕಾಯಿ, ಬೆಂಡಿಕಾಯಿ, ಸೌತೆಕಾಯಿ, ಅಲ್ಲದೇ ಹೀರೆಕಾಯಿ, ಪಾಲಾಕ್ ಬೆಳೆಗಳನ್ನು ಕೂಡ ಹಾಕಲಾಗಿದೆ. ಇವುಗಳ ಮೂಲಕವೂ ಲಾಭ ಗಳಿಸುತ್ತಿದ್ದಾರೆ.
'ಒಂದೂವರೆ ವರ್ಷದ ಹಿಂದೆ ವಿಜಯಪುರದಿಂದ ₹50 ಸಾವಿರ ಖರ್ಚು ಮಾಡಿ 200 ಡ್ರ್ಯಾಗನ್ ಫ್ರೂಟ್ ಸಸಿಗಳನ್ನು ತಂದು ನಾಟಿ ಮಾಡಲಾಗಿದೆ. ಒಂದು ಎಕರೆಯಲ್ಲಿ 450 ಕಂಬಗಳಿದ್ದು, ಒಂದು ಕಂಬಕ್ಕೆ ನಾಲ್ಕು ಸಸಿಗಳನ್ನು ನೆಡಲಾಗಿದೆ. ಸದ್ಯಕ್ಕೆ ಸ್ಧಳೀಯವಾಗಿ ಹಣ್ಣುಗಳಿಗೆ ಸಾಕಷ್ಟು ಬೇಡಿಕೆ ಬರುತ್ತಿದೆ. ಒಂದು ಹಣ್ಣು 300 ಗ್ರಾಂ ತೂಕವಿದೆ. ಗಿಡ ಬೆಳೆದಂತೆ ಫಸಲು ಹೆಚ್ಚುತ್ತದೆ' ಎಂದು ರೈತ ಅಮರಪ್ಪ ವಿವರಿಸಿದ್ದಾರೆ.
'ಗೊಬ್ಬರವಾಗಿ ಸಗಣಿ, ಗೋಮೂತ್ರ, 5 ಕೆ.ಜಿ ಬೆಲ್ಲವನ್ನು ಮಿಶ್ರಣ ಮಾಡಿ ಸಂಗ್ರಹಿಸಿ ಒಂದು ವಾರದ ನಂತರ ಅದನ್ನು ಸಸಿಗಳಿಗೆ ಸಿಂಪಡಣೆ ಮಾಡಬೇಕು. 4ರಿಂದ 5 ಅಡಿಯಷ್ಟು ಸಸಿ ಬೆಳೆಯುತ್ತದೆ' ಎಂದು ತಿಳಿಸಿದ್ದಾರೆ.

'ಕೊಳವೆಬಾವಿ ಇದ್ದು ಹನಿ ನೀರಾವರಿ ಪದ್ಧತಿಯನ್ನು ಅನುಸರಿಸಿಕೊಂಡು ಡ್ರ್ಯಾಗನ್ ಫ್ರೂಟ್ ಬೆಳೆಯುತ್ತಿದ್ದೇನೆ. ಈ ಹಣ್ಣಿಗೆ ನೀರಿನ ಅವಶ್ಯಕತೆ ಕಡಿಮೆ ಇರುತ್ತದೆ. ಬೇರೆ ಬೆಳೆಗಳಿಗೆ ಹೋಲಿಕೆ ಮಾಡಿದರೆ ಇದರಲ್ಲಿ ನಿರ್ವಹಣೆ ಕೂಡ ಕಡಿಮೆ. ಸಮಯಕ್ಕೆ ಸರಿಯಾಗಿ ಗೊಬ್ಬರ ಕೊಡುವುದು, ಕಳೆ ಬೆಳೆಯದಂತೆ ನೊಡಿಕೊಳ್ಳುವುದೇ ಇದರ ನಿರ್ವಹಣೆಯಾಗಿದೆ. ಪ್ರತಿ ಎಕರಗೆ ಕನಿಷ್ಠ ₹2.5 ಲಕ್ಷದಿಂದ ₹3 ಲಕ್ಷ ವೆಚ್ಚ ಮಾಡಿದರೆ 30 ವರ್ಷದ ವರಗೆ ಲಾಭ ಪಡೆಯಬಹುದು' ಎಂದು ಅಮರಪ್ಪ ವಿಶ್ವಾಸ ವ್ಯಕ್ತಪಡಿಸುತ್ತಾರೆ.
'ಡ್ರ್ಯಾಗನ್ ಫ್ರೂಟ್ ಕಳ್ಳಿ ಜಾತಿಗೆ ಸೇರಿದ ಸಸ್ಯವಾಗಿದ್ದು, ಗುಡ್ಡಗಾಡು ಪ್ರದೇಶದಲ್ಲಿ ಬೆಳೆಯಬಹುದಾದ ಬೆಳೆ ಇದು. ಅತಿ ಹೆಚ್ಚಾಗಿ ಕೆಂಪು ಮಣ್ಣಿನಲ್ಲಿ ಬೆಳೆಯುವುದರಿಂದ ಇಳುವರಿ ಹೆಚ್ಚಾಗಿ ಬರುತ್ತದೆ. ಕಪ್ಪು ಭೂಮಿಯಲ್ಲಿ ಬೆಳೆಯುವುದರಿಂದ ಕೆಲವೊಂದು ಸಲ ಹೆಚ್ಚು ಲಾಭ ಆಗಬಹುದು. ರೈತರ ಅಭಿರುಚಿ ಹಾಗೂ ಆಸಕ್ತಿ ಮೂಲಕ ಇಂತಹ ಪ್ರಯತ್ನದಿಂದ ವಿವಿಧ ತೋಟಗಾರಿಕೆ ಬೆಳೆಗಳನ್ನು ಈ ಭಾಗದ ಜನರು ಬೆಳೆಯಲು ಮುಂದಾಗಿದ್ದಾರೆ' ಎಂದು ಕೃಷಿ ಅಧಿಕಾರಿ ಶಿವರಾಜ ಹೇಳಿದ್ದಾರೆ.
ಹನಿ ನೀರಾವರಿ ಬಳಸಿಕೊಂಡು ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆಯಲು ಸರ್ಕಾರ ಸಹಾಯಹಸ್ತ ನೀಡಿದರೆ ರೈತರಿಗೆ ಅನುಕೂಲವಾಗಲಿದೆ. ಅಧಿಕಾರಿಗಳು ಕೂಡ ರೈತರಿಗೆ ಮಾಹಿತಿ ನೀಡುವುದು ಅವಶ್ಯಕವಾಗಿದೆ ಎಂದು ಡ್ರ್ಯಾಗನ್ ಫ್ರೂಟ್ ಬೆಳೆದ ರೈತ ಅಮರಪ್ಪ ಮೇದಿನಾಪುರ ಹೇಳಿದ್ದಾರೆ.
ಮೇದಿನಾಪುರ ರೈತ ಅಮರಪ್ಪ ಹನಿ ನೀರಾವರಿ ಬಳಸಿಕೊಂಡು ಡ್ರ್ಯಾಗನ್ ಫ್ರೂಟ್ ಬೆಳೆದು ಇತರೆ ರೈತರಿಗೆ ಮಾದರಿಯಾಗಿದ್ದಾರೆ. ವಿವಿಧ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ರೈತರು ಅಭಿವೃದ್ಧಿ ಹೊಂದಬೇಕಿದೆ ಎಂದು ಗುರುಗುಂಟಾ ರೈತ ಸಂಕರ್ಪ ಕೇಂದ್ರದ ಅಧಿಕಾರಿ ಶಿವರಾಜ ಹೇಳಿದರು.












Click it and Unblock the Notifications