ಮಂದಗತಿಯಲ್ಲಿ ಸಾಗಿದ ಮುನಿರಾಬಾದ್–ಮಹೆಬೂಬನಗರ ರೈಲು ಮಾರ್ಗ ಕಾಮಗಾರಿ, ಈ 3 ರಾಜ್ಯಗಳ ಸುಲಭ ಸಂಪರ್ಕ ಇನ್ನೂ ವಿಳಂಬ!
ರಾಯಚೂರು, ಆಗಸ್ಟ್, 09: ತೆಲಂಗಾಣ, ಕರ್ನಾಟಕ ಹಾಗೂ ಗೋವಾ ರಾಜ್ಯಗಳ ನಡುವಿನ ಸಂಚಾರ ಅಂತರ ಕಡಿಮೆ ಮಾಡುವ ಉದ್ದೇಶದಿಂದ ರೂಪಿಸಿದ ಮುನಿರಾಬಾದ್ -ಮಹೆಬೂಬ ನಗರ ರೈಲು ಮಾರ್ಗ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ.
ಮುನಿರಾಬಾದ್-ಮಹೆಬೂಬನಗರ ರೈಲು ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸಿ 26 ವರ್ಷಗಳು ಕಳೆದಿವೆ. ಆದರೆ ಕಾಂಗ್ರೆಸ್ ಸರ್ಕಾರ ಶಂಕುಸ್ಥಾಪನೆಯನ್ನು ಮಾತ್ರ ಮಾಡಿದೆ ಎಂದು ಟೀಕಿಸುತ್ತಿದ್ದ ಬಿಜೆಪಿ ಸರ್ಕಾರ ಎರಡು ಅವಧಿಗೆ ಆಡಳಿತ ನಡೆಸಿದರೂ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿಲ್ಲ. ಹಳಿ ನಿರ್ಮಿಸುವ ಕಾಮಗಾರಿ ಕಾರಟಗಿವರೆಗೆ ಮುಗಿದು ರೈಲು ಸಂಚಾರ ಆರಂಭವಾಗಿದೆ. ಆದರೆ ಸಿಂಧನೂರಿನವರೆಗೆ ಹಳಿ ಹಾಕುವ ಕೆಲಸ ಶುರುವಾಗಿಲ್ಲ.

ಆಗಸ್ಟ್ 15ರ ವೇಳೆಗೆ ರೈಲು ಸಂಚರಿಸಲಿದೆ ಎಂದು ಈಚೆಗೆ ಕಾಮಗಾರಿ ಪರಿಶೀಲಿಸಿದ ಕೊಪ್ಪಳ ಸಂಸದ ಕರಡಿ ನೀಡಿದ್ದ ಭರವಸೆ ಈಡೇರುವ ಲಕ್ಷಣಗಳು ಕಂಡುಬರುತ್ತಿಲ್ಲ. ಸಂಗಣ್ಣ ಕರಡಿ ರೀಲು ಬಿಡುತ್ತಿದ್ದಾರೆಯೇ ಹೊರತು, ರೈಲಲ್ಲ ಎಂದು ಜನ ಟೀಕಿಸುತ್ತಿದ್ದಾರೆ. ಸಿಂಧನೂರು ಹೊರವಲಯದಲ್ಲಿ ರೈಲು ನಿಲ್ದಾಣದ ಕಾಮಗಾರಿ ನಿಧಾನಗತಿಯಲ್ಲಿ ನಡೆಸಿದ್ದರಿಂದ ಅಯ್ಯಪ್ಪ ರೆಡ್ಡಿ ಪಡೆದಿದ್ದ ಗುತ್ತಿಗೆ ಕಾಮಗಾರಿಯ ಒಪ್ಪಂದವನ್ನು ರದ್ದುಪಡಿಸಲಾಗಿದೆ.
ಪಶ್ಚಿಮ ಬಂಗಾಳದ ಆರ್.ಎನ್.ಚೌಧರಿ ಅವರಿಗೆ ನೀಡಿದ್ದ ರೈಲ್ವೆ ಹಳಿ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ರದ್ದುಗೊಳಿಸಲಾಗಿದೆ. ಈಗ ಬೇರೆಯವರಿಗೆ ಕಾಮಗಾರಿ ವಹಿಸಿ ಕೆಲಸದ ವೇಗ ಹೆಚ್ಚಿಸಲಾಗಿದೆ ಎಂದು ರೈಲ್ವೆ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಉಮಾಮಹೇಶ್ವರ ಹೇಳುತ್ತಾರೆ. ಬಸವರಾಜ ರಾಯರೆಡ್ಡಿ ಸಂಸದರಾಗಿದ್ದ ಅವಧಿಯಲ್ಲಿ ಪ್ರಧಾನಮಂತ್ರಿಯಾಗಿದ್ದ ಎಚ್.ಡಿ.ದೇವೇಗೌಡ ಅವರು ಮುನಿರಾಬಾದ್ ಬಳಿ ರೈಲು ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಲೋಕಸಭಾ ಚುನಾವಣೆಯ ಪೂರ್ವದಲ್ಲಿಯೇ ಕಾಮಗಾರಿ ಮುಗಿಯುತ್ತದೆ ಎಂದು ಆಶ್ವಾಸನೆ ನೀಡಿದ್ದ ಸಂಗಣ್ಣ ಕರಡಿ ಅವರಿಗೆ 2019ರ ಚುನಾವಣೆಯಲ್ಲಿಯೂ ತಮ್ಮ ಭರವಸೆಯನ್ನು ಈಡೇರಿಸಲು ಸಾಧ್ಯವಾಗಿರಲಿಲ್ಲ. ಈಗ ಮತ್ತೆ ಚುನಾವಣೆ ಬಂದಿರುವುದರಿಂದ ವರ್ಷಾಂತ್ಯದಲ್ಲಾದರೂ ಕಾಮಗಾರಿ ಪೂರ್ಣಗೊಳಿಸಿ ಸಿಂಧನೂರು ಮಾರ್ಗದಲ್ಲಿ ರೈಲು ಓಡಿಸಬೇಕು ಎಂದು ಸಂಸದರು ಪ್ರಯತ್ನಿಸುತ್ತಿದ್ದಾರೆ.
274 ಕಿಲೋ ಮೀಟರ್ ಎಲೆಕ್ಟ್ರಿಕ್ ಲೈನ್‌ನ ರೈಲು ನಿಲ್ದಾಣಕ್ಕೆ ದೊಡ್ಡ ರಸ್ತೆಯೇ ಇಲ್ಲ. ರೈಲು ಮಾರ್ಗದ ಲಾಭಗಳು 3542 ಕೋಟಿ ರೂಪಾಯಿ ವೆಚ್ಚದ ಮುನಿರಾಬಾದ್ -ಮಹೆಬೂಬ್ ನಗರ ರೈಲು ಮಾರ್ಗದ ಯೋಜನೆ 1997ರಲ್ಲಿ ಮಂಜೂರಾಗಿದೆ. ಹೊಸ ರೈಲು ಮಾರ್ಗ ನಿರ್ಮಾಣದಿಂದ ಹೈದರಬಾದ್-ಹುಬ್ಬಳ್ಳಿ ಮತ್ತು ಹೈದರಬಾದ್-ಗೋವಾ ನಡುವಿನ ಅಂತರವೂ ಕಡಿಮೆಯಾಗಲಿದೆ. ಇದು ಹೈದರಬಾದ್ ಮತ್ತು ಕರ್ನಾಟಕದ ಗಣಿಗಾರಿಕೆ ಪ್ರದೇಶದ ನಡುವಿನ ರೈಲು ಜಾಲವನ್ನು ವಿಸ್ತರಿಸಲು ನೆರವಾಗಲಿದೆ.
ಕಬ್ಬಿಣದ ಅದಿರು ಸಿಮೆಂಟ್ ಉಕ್ಕು ಮತ್ತು ಇತರ ಹಲವು ವಸ್ತುಗಳನ್ನು ಈ ಪರ್ಯಾಯ ಮಾರ್ಗದ ಮೂಲಕ ಸಾಗಿಸಲು ಅನುಕೂಲವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ವಿವರಿಸುತ್ತಾರೆ. ರೈಲು ನಿಲ್ದಾಣ ಕಾಮಗಾರಿ ಅಪೂರ್ಣವಾಗಿದ್ದು, ಸಿಂಧನೂರು ರೈಲು ನಿಲ್ದಾಣ ಕಾಮಗಾರಿ ಪೂರ್ಣಗೊಂಡಿಲ್ಲ. ಪ್ಲಾಟ್ ಫಾರಂ ರ್ಮಾಗಗಳೂ ನಿರ್ಮಾಣವಾಗಿಲ್ಲ. ಹಳಿಯನ್ನೂ ಅಳವಡಿಸಿಲ್ಲ. ಸಿಗ್ನಲ್ ಅಳವಡಿಸುವ ಕೆಲಸವೂ ಬಾಕಿಯಿದೆ.
ಎಲ್ಲಾ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಆರು ತಿಂಗಳಾದರೂ ಬೇಕಾಗಲಿದೆ ಎಂದು ಕಾಮಗಾರಿ ನಡೆಸುತ್ತಿರುವ ತಾಂತ್ರಿಕ ಸಿಬ್ಬಂದಿ ಹೇಳುತ್ತಾರೆ. ರೈಲು ನಿಲ್ದಾಣದಲ್ಲಿ ಮೂರು ಪ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ಅಗತ್ಯವಿರುವಷ್ಟು ಜಾಗವನ್ನು ಸಮತಟ್ಟುಗೊಳಿಸಲಾಗಿದೆ. ರೈಲ್ವೆ ಹಳಿಗೆ ಅಡಿಗಲ್ಲು ಹಾಕಲು ಪುಡಿಗಲ್ಲು ಸುರಿಯಲಾಗಿದೆ. ರೈಲ್ವೆ ಹಳಿ ಗೊರೆಬಾಳವರೆಗೆ ಮಾತ್ರ ನಿರ್ಮಾಣವಾಗಿದೆ.
ಆಗಸ್ಟ್‌ವರೆಗೆ ಕಾಮಗಾರಿ ಮುಗಿಯುವ ಯಾವ ಲಕ್ಷಣಗಳು ಕಂಡುಬರುತ್ತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಜಿಲ್ಲಾ ಅಧ್ಯಕ್ಷ ವೀರೇಶ ಭಾವಿಮನಿ ಬೇಸರ ವ್ಯಕ್ತಪಡಿಸುತ್ತಾರೆ. ಮಂದಗತಿಯ ಕಾಮಗಾರಿಯೇ ಯೋಜನೆ ಸಕಾಲದಲ್ಲಿ ಪೂರ್ಣಗೊಳ್ಳಲು ತೊಡಕಾಗತ್ತಿದೆ. ಸಂಬಂಧಪಟ್ಟವರು ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಮಾತ್ರ ರೈಲು ನಿಲ್ದಾಣ ಕಾಮಗಾರಿ ಹಾಗೂ ಹಳಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಿದೆ ಎಂದು ರಾಯಚೂರು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಜಿಲ್ಲಾ ಘಟಕದ ಕಾರ್ಯಕಾರಿ ಮಂಡಳಿ ಸದಸ್ಯ ಮಲ್ಲನಗೌಡ ಕಾನಿಹಾಳ ಹಾಗೂ ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ವೀರಭದ್ರಪ್ಪ ಕುರಕುಂದಿ ಹೇಳುತ್ತಾರೆ.
ಮುನಿರಾಬಾದ್-ಮಹೆಬೂಬ ನಗರ ರೈಲು ಮಾರ್ಗ ನಿರ್ಮಾಣ ಯೋಜನೆಯ ಕೊನೆಯ ಹಂತದ ಕಾಮಗಾರಿಗಳು ಭರದಿಂದ ಸಾಗಿದ್ದು, ಆದೆಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವ ಪ್ರಯತ್ನ ನಡೆದಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದರು.












Click it and Unblock the Notifications