ರಾಯಚೂರು ಜಿಲ್ಲೆಯ ಈ ಭಾಗದ ಜನರಿಗೆ ಕುಡಿಯಲು ಕೆಮಿಕಲ್ ನೀರೇ ಗತಿ, ಏಕೆ?, ಇಲ್ಲಿದೆ ವಿವರ
ರಾಯಚೂರು, ಜೂನ್, 27: ತಾಲೂಕಿನ ಕೃಷ್ಣಾ ನದಿ ಸಮೀಪವಿರುವ 30-40 ಕೆಮಿಕಲ್ ಕಾರ್ಖಾನೆಗಳು ವೇಸ್ಟೇಜ್ ನೀರನ್ನು ನದಿಗೆ ಬಿಡುತ್ತಿದ್ದಾರೆ. ಇದರಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಕೃಷ್ಣಾ ನದಿಯ ನೀರು ಶಕ್ತಿನಗರದಿಂದ ಕುರ್ವಾಕುಲ, ನಾರದಗಡ್ಡೆ ಮೂಲಕ ತೆಲಂಗಾಣದ ಝೂರಾಲ್ ಜಲಾಶಯ ಸೇರಲಿದೆ. ನದಿಯ ಸರಹದ್ದಿನ ಗ್ರಾಮಗಳ ಜನರು ಕುಡಿಯಲು ಇದೇ ನೀರನ್ನು ಬಳಸುತ್ತಿದ್ದಾರೆ. ಹೀಗಾಗಿ ಇಲ್ಲಿನ ಜನರು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ.

ಶಕ್ತಿನಗರ ಬಳಿಯಿರುವ ಕೆಮಿಕಲ್ ಕಾರ್ಖಾನೆಗಳು ಬಿಡುವ ವೇಸ್ಟೇಜ್ ನೀರು ಕೃಷ್ಣಾ ನದಿ ಸೇರುತ್ತಿದ್ದು, ಇಲ್ಲಿಂದಲೇ ರಾಯಚೂರು ನಗರ ಮತ್ತು ರಾಯಚೂರು ಗ್ರಾಮೀಣ ಭಾಗದ ಕೆಲ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತದೆ. ನದಿ ನೀರಿನಲ್ಲಿ ಕಾರ್ಖಾನೆಗಳ ಕೆಮಿಕಲ್ ಸೇರುವುದರಿಂದ ಜೀವಜಲವೇ ಜನರಿಗೆ ವಿಷವಾಗಿ ಪರಿಣಮಿಸಿದೆ. ಪರಿಸರ ಮಾಲಿನ್ಯ ಹಾಗೂ ನಿಯಂತ್ರಣ ಇಲಾಖೆಯ ತಜ್ಞರು ಈ ಬಗ್ಗೆ ವರದಿ ನೀಡಿದ್ದಾರೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ.
ಸ್ಥಳೀಯರಿಂದ ತೀವ್ರ ಆಕ್ರೋಶ
ವಿಷಕಾರಿ ಕೆಮಿಕಲ್ ವೇಸ್ಟೇಜ್ ನೀರನ್ನೇ ಕುಡಿಯಲು ಪೂರೈಸಲಾಗುತ್ತಿದ್ದು, ಇದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 30 ರಿಂದ 40ಕ್ಕೂ ಹೆಚ್ಚು ಕೆಮಿಕಲ್ ಕಾರ್ಖಾನೆಗಳು ಅಕ್ರಮವಾಗಿ ಚರಂಡಿಗಳ ಮೂಲಕ ಹಳ್ಳಗಳಿಗೆ ಕೆಮಿಕಲ್ ವೇಸ್ಟೇಜ್ ನೀರು ಬಿಡುತ್ತಿವೆ. ಇದರಿಂದ ಕೃಷ್ಣಾ ನದಿ ನೀರು ಕಲುಷಿತಗೊಳ್ಳುತ್ತಿದೆ. ಇದೇ ನೀರನ್ನೇ ನಗರಸಭೆ ಮತ್ತು ಆಯಾ ಗ್ರಾಮಗಳಿಗೆ ಪಂಚಾಯಿತಿ ಕುಡಿಯಲು ಪೂರೈಸುತ್ತಿದೆ.
ರಾಯಚೂರು ತಾಲೂಕಿನ ವಡ್ಲೂರು ಗ್ರಾಮದ ಸುತ್ತಲಿನ ಕೆಮಿಕಲ್ ಕಾರ್ಖಾನೆಗಳು ಬಿಡುವ ವಿಷಕಾರಿ ವೇಸ್ಟೇಜ್ ನೀರು ಕೃಷ್ಣಾ ನದಿ ಸೇರಲಿದೆ. ತಾಲೂಕಿನ ತೆಲಂಗಾಣ ಗಡಿ ಭಾಗದ ಗುಂಜಳ್ಳಿ, ಹನುಮನದೊಡ್ಡಿ, ವಡ್ಲೂರು ಸೇರಿ ನಾಲ್ಕೈದು ಹಳ್ಳಿಗಳಿಗೆ ಇದೇ ನೀರನ್ನು ಪೂರೈಸಲಾಗುತ್ತದೆ. ಈ ಕುರಿತು ಹಲವು ಬಾರಿ ಜಿಲ್ಲಾಡಳಿತದ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ಕೆಮಿಕಲ್ ಮಿಶ್ರಿತ ನೀರು ಸೇವನೆಯಿಂದ ಹಲವರು ಕ್ಯಾನ್ಸರ್, ಟಿಬಿ, ಥೈರಾಯ್ಡ್ ರೋಗಗಳಿಂದ ಬಳಲುತ್ತಿರುವುದು ಕಂಡುಬಂದಿದೆ.
ಸಾವನ್ನಪ್ಪುತ್ತಿರುವ ಪ್ರಾಣಿಗಳು
ಕಾರ್ಖಾನೆಗಳು ಹಳ್ಳಕ್ಕೆ ಬಿಡುವ ಕೆಮಿಕಲ್ ವೇಸ್ಟೇಜ್ ನೀರು ಕುಡಿದು ಕೇವಲ ಜನರು ಮಾತ್ರವಲ್ಲದೆ, ಜಾನುವಾರುಗಳು, ಮೀನುಗಳು, ಕುರಿ ಸೇರಿದಂತೆ ಇತರೆ ಪ್ರಾಣಿಗಳು ಸಹ ಸಾವನ್ನಪ್ಪುತ್ತಿವೆ. ಹೊಲಗಳಿಗೂ ಇದೇ ವಿಷಕಾರಿ ನೀರು ಹರಿಯುತ್ತಿದ್ದು, ಇದರಿಂದ ಇಳುವರಿ ಕುಂಠಿತಗೊಂಡಿದೆ.
ಕಠಿಣ ಕ್ರಮ ಕೈಗೊಳ್ಳಬೇಕಿದೆ
ರಾಯಚೂರು ಕೈಗಾರಿಕಾ ಪ್ರದೇಶಾಭಿವೃದ್ಧಿ ಪ್ರದೇಶದಲ್ಲಿ ಅತಿ ಹೆಚ್ಚು ಫಾರ್ಮಾ ಕಂಪನಿಯಿಂದಲೇ ವಿಷಯುಕ್ತ ರಾಸಾಯನಿಕ ತ್ಯಾಜ್ಯ ಹಳ್ಳ ಸೇರುತ್ತಿದೆ. ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಗೆ ಮನವಿ ಸಲ್ಲಿಕೆಯಾಗಿದ್ದರೂ ಇದುವರೆಗೂ ಕ್ರಮ ಜರುಗಿಸಿಲ್ಲ. ಆದ್ದರಿಂದ ಜಿಲ್ಲಾಡಳಿತ ಇನ್ನಾದರೂ ಕಠಿಣ ಕ್ರಮಕೈಗೊಳ್ಳಬೇಕಿದೆ ಎನ್ನುವುದು ಇಲ್ಲಿನ ಜನರ ಆಗ್ರಹವಾಗಿದೆ.
ಶಕ್ತಿ ನಗರ ಬಳಿಯ ಕಾರ್ಖಾನೆಗಳು ಅಕ್ರಮವಾಗಿ ಚರಂಡಿಗಳ ಮೂಲಕ ಹಳ್ಳಗಳಿಗೆ ಕೆಮಿಕಲ್ ವೇಸ್ಟೇಜ್ ನೀರು ಬಿಡುತ್ತಿವೆ. ಚರಂಡಿ ನೀರು ಕೃಷ್ಣಾ ನದಿ ಸೇರುವುದರಿಂದ ಆ ನೀರು ಕಲುಷಿತಗೊಳ್ಳುತ್ತಿದೆ. ಇನ್ನು ಈ ಬಗ್ಗೆ ದೂರುಗಳು ಬಂದಿದ್ದು, ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ಕ್ರಮಕೈಗೊಳ್ಳಲು ಆದೇಶಿಸುತ್ತೇನೆ ಎಂದು ಜಿಲ್ಲಾಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಭರವಸೆ ನೀಡಿದ್ದಾರೆ.












Click it and Unblock the Notifications