ಬೇಸಿಗೆ ಆಗಮನ: ರಾಯಚೂರು ಜಿಲ್ಲೆಯಲ್ಲಿ ಮಣ್ಣಿನ ಮಡಿಕೆಗೆ ಭಾರಿ ಬೇಡಿಕೆ: ಬೆಲೆಯ ವಿವರವನ್ನು ತಿಳಿಯಿರಿ?
ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಜನರು ತಂಪು ಕೊಡುವ ಸಾಮಗ್ರಿಗಳತ್ತ ಗಮನ ಹರಿಸತೊಡಗಿದ್ದಾರೆ. ಹಾಗಾದರೆ ಯಾವ ಮಡಿಕೆಗೆ ಎಷ್ಟು ಬೆಲೆ ಇದೆ ಎಂದು ಇಲ್ಲಿ ತಿಳಿಯಿರಿ.
ರಾಯಚೂರು ಮಾರ್ಚ್, 05: ಫೆಬ್ರುವರಿ ಎರಡನೇ ವಾರದಿಂದ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆ ಜಿಲ್ಲೆಯಲ್ಲಿ ಜನರು ತಂಪು ಕೊಡುವ ಸಾಮಗ್ರಿಗಳತ್ತ ಗಮನ ಹರಿಸತೊಡಗಿದ್ದಾರೆ. ಮುಖ್ಯವಾಗಿ ನೈಸರ್ಗಿಕವಾಗಿ ನೀರು ತಂಪು ಮಾಡಿಟ್ಟುಕೊಳ್ಳಲು ಮಣ್ಣಿನ ಮಡಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವುದು ಎಲ್ಲೆಡೆ ಕಾಣಿಸುತ್ತಿದೆ.
ಇದಕ್ಕೆ ಪೂರಕವಾಗಿ ಬೇಸಿಗೆ ಆರಂಭವಾಗುವ ಮೊದಲೇ ಮಣ್ಣಿನ ಮಡಿಕೆಗಳನ್ನು ಮಾರಾಟ ಮಾಡುವವರು ಅಲ್ಲಲ್ಲಿ ಕಾಣಿಸುತ್ತಿದ್ದಾರೆ. ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗಿನ ಹೆದ್ದಾರಿಯ ಎರಡು ಬದಿಗಳಲ್ಲಿ ಮಣ್ಣಿನ ಮಡಿಕೆಗಳನ್ನು ವ್ಯಾಪಾರಿಗಳು ರಾಶಿ ಹಾಕಿದ್ದಾರೆ. ಬಹುತೇಕ ವ್ಯಾಪಾರಿಗಳು ರಾಜಸ್ತಾನದಿಂದಲೇ ಮಡಿಕೆಗಳನ್ನು ಸಗಟು ರೂಪದಲ್ಲಿ ಖರೀದಿಸಿ ಇಲ್ಲಿಗೆ ತಂದು ಮಾರಾಟ ಮಾಡುತ್ತಿದ್ದಾರೆ.
ಒಂದು ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಮಣ್ಣಿನ ಬಾಟಲಿಗಳು ನೋಡುಗರನ್ನು ತನ್ನತ್ತ ಕೈಬಿಸಿ ಕರೆಯುತ್ತಲೇ ಇವೆ. ನೀರು ಕುಡಿಯುವುದಕ್ಕೆ ಬಳಕೆ ಮಾಡುವ ಜಗ್ಗುಗಳನ್ನು ಕೂಡ ಮಣ್ಣಿನಿಂದ ತಯಾರು ಮಾಡಲಾಗಿದೆ. ಕೆಂಪು ಜೇಡಿ ಮಣ್ಣಿನಿಂದ ಮಡಿಕೆಗಳನ್ನು ಕಲಾತ್ಮಕವಾಗಿ ಸಿದ್ಧಪಡಿಸಲಾಗಿದೆ. ಒಂದಕ್ಕಿಂತ ಇನ್ನೊಂದು ಸುಂದರವಾಗಿ ಕಾಣುತ್ತಿವೆ. ಎಂಟು ಲೀಟರ್ ಸಾಮರ್ಥ್ಯದ ಕೊಳಗಗಳಿಂದ ಹಿಡಿದು 40 ಲೀಟರ್‌ವರೆಗೂ ತುಂಬಿಸಿಡುವಷ್ಟು ಕೊಳಗಗಳಿವೆ.

ಮಣ್ಣಿನ ಮಡಿಕೆಗಳ ದರದ ವಿವರ
ಬಣ್ಣಬಣ್ಣದ ಚಿತ್ರ ಬಿಡಿಸಿದ ಮಡಿಕೆಗಳ ದರ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ. 10 ಲೀಟರ್ ಸಾಮರ್ಥ್ಯದ ಕೆಂಪು ಮಣ್ಣಿನ ಹರಿವೆಯ ದರ ₹400ರಿಂದ ಆರಂಭವಾಗುತ್ತದೆ. ಇದು ಮಾಮೂಲಿಗಿಂತ ಸ್ವಲ್ಪ ದಪ್ಪಗಾಗಿರುತ್ತದೆ. ಹೀಗಾಗಿ ಕೆಂಪು ಬಣ್ಣದ ಮಡಿಕೆಯ ಗಾತ್ರ ಹೆಚ್ಚಾಗಿದಷ್ಟು ದರ ಹೆಚ್ಚಾಗಿರುತ್ತದೆ. ಇದರಲ್ಲೇ ತೆಳ್ಳಗಿರುವ ಮಡಿಕೆಗಳ ದರ ಅರ್ಧದಷ್ಟು ಕಡಿಮೆ. ಕಪ್ಪು ಬಣ್ಣದ ಮಡಿಕೆಗಳ ದರ ಕೂಡ ಕಡಿಮೆಯೇ ಇದೆ. ಕಳೆದ ವರ್ಷದಲ್ಲಿದ್ದ ದರಕ್ಕೆ ಹೋಲಿಸಿದರೆ ಈ ವರ್ಷ ಶೇಕಡಾ 30ರಷ್ಟು ದರಗಳು ಏರಿಕೆಯಾಗಿವೆ.

ಮಡಿಕೆ ವ್ಯಾಪಾರಸ್ಥರ ಅಭಿಪ್ರಾಯವೇನು?
ಬೇಸಿಗೆ ಆರಂಭದಲ್ಲಿ ಪ್ರತಿವರ್ಷ ರಾಜಸ್ತಾನದಿಂದ ಮಣ್ಣಿನ ಮಡಿಕೆಗಳನ್ನು ಸಗಟು ಲೆಕ್ಕದಲ್ಲಿ ಒಂದು ಲಾರಿ ಖರೀದಿಸಿ ತಂದು ಮಾರಾಟ ಮಾಡುತ್ತೇನೆ. ಇದರಿಂದ ಮೂರು ತಿಂಗಳಿನಲ್ಲಿ ₹50 ಸಾವಿರವರೆಗೂ ಲಾಭ ಸಿಗುತ್ತದೆ. ಸಾರಿಗೆ ವೆಚ್ಚ ಹೆಚ್ಚಾಗಿರುವುದು ಈ ಬಾರಿ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಮೊದಲಿಗಿಂತಲೂ ಹೆಚ್ಚು ದಿನ ಬಾಳಿಕೆ ಬರುವ ಮಡಿಕೆಗಳು ಈ ವರ್ಷ ಸಿಗುತ್ತಿವೆ ಎಂದು ರಾಯಚೂರಿನ ಮಲ್ಲದಗುಡ್ಡ ಗ್ರಾಮದ ವೀರೇಶ ತಿಳಿಸಿದರು.
ಮಡಿಕೆಗಳ ದರವು ಎಲ್ಲ ವ್ಯಾಪಾರಿಗಳದ್ದು ಒಂದೇ ರೀತಿಯಾಗಿಲ್ಲ. ಎಲ್ಲರ ಕಡೆಗೂ ವಿಚಾರಿಸಿ ಖರೀದಿಸಿದರೆ ₹100ರವರೆಗೂ ಉಳಿತಾಯ ಮಾಡಿಕೊಳ್ಳಬಹುದಾಗಿದೆ. ಬೇಸಿಗೆಯಲ್ಲಿ ಮಾಮೂಲಿ ನೀರು ಬಿಸಿಯಾಗುವುದನ್ನು ತಪ್ಪಿಸಲು ಜನರು ಮಡಿಕೆಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ಫ್ರಡ್ಜ್‌ಗಳಿಗಿಂತ ನೈಸರ್ಗಿಕವಾಗಿ ನೀರನ್ನು ತಂಪಾಗಿಸಿಕೊಂಡು ಸೇವಿಸುವುದು ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದಲೂ ಉತ್ತಮ ವಿಧಾನ ಎಂಬುದು ಜನರ ಅನಿಸಿಕೆಯಾಗಿದೆ.

ರಾಜಸ್ತಾನದ ಮಡಿಕೆಗಳಿಗೆ ಹೆಚ್ಚು ಬೇಡಿಕೆ ಏಕೆ?
ಈ ಮಧ್ಯೆ ಸ್ಥಳೀಯ ಮಣ್ಣಿನ ಮಡಿಕೆಗಳಿಗೆ ಅಷ್ಟೊಂದು ಬೇಡಿಕೆ ಇಲ್ಲದಂತಾಗಿದೆ. ರಾಜಸ್ತಾನ ಮಡಿಕೆಗಳಿಗೆ ನಲ್ಲಿಗಳನ್ನು ಜೋಡಿಸಿದ್ದು, ಕಲಾತ್ಮಕವಾಗಿರುವುದರಿಂದ ಅವುಗಳನ್ನೇ ಜನರು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಅಡುಗೆ ಮಾಡುವುದಕ್ಕೆ, ಹಬ್ಬ ಹರಿದಿನ, ತಿಥಿ ಕಾರ್ಯಕ್ರಮಗಳಿಗೆ ಮಾತ್ರ ಸ್ಥಳೀಯರು ತಯಾರಿಸುವ ಮಡಿಕೆಗಳನ್ನು ಜನರು ಖರೀದಿಸುತ್ತಿದ್ದಾರೆ.

ಮಣ್ಣಿನ ಮಡಿಕೆಯತ್ತ ಮುಖ ಮಾಡುತ್ತಿರುವ ಜನ
ಸಿರವಾರ ಪಟ್ಟಣದಲ್ಲಿ ಬೇಸಿಗೆ ಬಿಸಿಲು ಏರಿಕೆಯಾಗುತ್ತಿದ್ದು, ನೀರಿನ ದಾಹ ತಣಿಸಲು ಫ್ರಿಡ್ಜ್ ನೀರಿಗಿಂತಲೂ ಮಣ್ಣಿನ ಮಡಿಕೆಯಲ್ಲಿನ ನೀರೇ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಆದ್ದರಿಂದ ಸಾರ್ವಜನಿಕರು ಮಣ್ಣಿನ ಮಡಿಕೆ ಕೊಳ್ಳಲು ಪ್ರಾರಂಭಿಸಿದ್ದಾರೆ. ಪಟ್ಟಣದಲ್ಲಿ ಬಯಲು ಆಂಜನೇಯ ದೇವಸ್ಥಾನ ಮತ್ತು ಪೊಲೀಸ್ ಠಾಣೆ ಎದುರುಗಡೆ ಮಡಿಕೆ ಮಾರಾಟ ಅಂಗಡಿಗಳಿದ್ದು, ಈಗಾಗಲೇ ಅಗತ್ಯ ಮಡಿಕೆಗಳನ್ನು ಮಾರಾಟಕ್ಕೆ ಸಂಗ್ರಹಿಸಲಾಗಿದೆ.
ಅಳತೆಗೆ ತಕ್ಕಂತೆ ಒಂದು ಮಣ್ಣಿನ ಮಡಿಕೆಗೆ ₹100, ₹200, ₹400 ದರವನ್ನು ನಿಗದಿಪಡಿಸಲಾಗಿದೆ.
ಮಾರಾಟ ಮತ್ತು ಸಂಗ್ರಹಿಸುವಾಗ ಮಡಿಕೆಗಳು ಒಡೆಯುವ ಸಾಧ್ಯತೆ ಇರುತ್ತದೆ. ಆದರೂ ಮನೆತನದ ವ್ಯಾಪಾರ ಆಗಿರುವುದರಿಂದ ಹೆಚ್ಚಿನ ಲಾಭದ ನಿರೀಕ್ಷೆ ಇಲ್ಲದೇ ಪ್ರತಿವರ್ಷ ವ್ಯಾಪಾರವನ್ನು ಕೈಬಿಟ್ಟಿಲ್ಲ ಎಂದು ವ್ಯಾಪಾರಿ ಅಮರೇಶ ಕುಂಬಾರ್ ಹೇಳುತ್ತಿದ್ದಾರೆ.

ಮೆಚ್ಚುಗೆಗೆ ಪಾತ್ರವಾದ ಆಕರ್ಷಕ ಮಡಿಕೆಗಳು
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಾನ್ವಿ ಪಟ್ಟಣದಲ್ಲಿ ಮಣ್ಣಿನ ಗಡಿಗೆಗಳ ಮಾರಾಟದ ಭರಾಟೆ ಜೋರಾಗಿದೆ. ಪಟ್ಟಣದ ರಿಕ್ರಿಯೇಶನ್ ಕ್ಲಬ್ ಹಾಗೂ ಕೋರ್ಟ್ ಹತ್ತಿರ ಮಾರಾಟಕ್ಕಿಟ್ಟಿರುವ ಮಡಿಕೆಗಳು ಗಮನ ಸೆಳೆಯುತ್ತಿವೆ. ಈ ಬಾರಿ ವಿಶೇಷವಾಗಿ ರಾಜಸ್ತಾನ ಹಾಗೂ ಆಂಧ್ರಪ್ರದೇಶದ ಕೋಸಗಿ ಪಟ್ಟಣದಲ್ಲಿ ತಯಾರಿಸಲಾದ ಆಕರ್ಷಕ ಮಡಿಕೆಗಳು ಸ್ಥಳೀಯರ ಮೆಚ್ಚುಗೆಗೆ ಕಾರಣವಾಗಿವೆ.
ಸಾಮಾನ್ಯ ಗಡಿಗೆಗೆ ₹250ರಿಂದ ₹300, ಹೊರರಾಜ್ಯದಿಂದ ತರಿಸಲಾದ ಮಡಿಕೆಗಗಳನ್ನು ₹650ರಿಂದ ₹700 ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಮಣ್ಣಿನಲ್ಲಿ ಆಕರ್ಷಕವಾಗಿ ತಯಾರಿಸಲಾದ ನೀರಿನ ಬಾಟಲ್, ಜಗ್, ಹಾಗೂ ಗ್ಲಾಸ್‌ಗಳನ್ನು ಸಹ ಮಾರಾಟಕ್ಕೆ ಇಡಲಾಗಿದೆ. ಈಗ ಪ್ರತಿ ದಿನ ಸುಮಾರು 50 ಮಡಿಕೆಗಳು ಮಾರಾಟವಾಗುತ್ತಿವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಮಡಿಕೆಗಳು ಪ್ರತಿದಿನ ಮಾರಾಟವಾಗಬಹುದು ಎಂದು ಮಡಿಕೆ ವ್ಯಾಪಾರಿ ಅಂಬಿಕಾ ತಿಳಿಸಿದರು.
ಬೇಸಿಗೆ ಪ್ರಾರಂಭದಲ್ಲಿಯೇ ತಾಪದಿಂದ ತತ್ತರಿಸಿ ಹೋಗಿರುವ ದೇವದುರ್ಗದ ಜನರು ತಂಪು ಪಾನೀಯ, ಹಣ್ಣಿನ ರಸದ ಮೊರೆ ಹೋಗಿದ್ದಾರೆ. ಇದರಿಂದ ಸುಡು ಬೇಸಿಗೆಯ ದಿನಗಳಲ್ಲಿ ಬಡವರ ಪ್ರಿಡ್ಜ್ ಎಂದೇ ಕರೆಯುವ ಮಣ್ಣಿನ ಮಡಿಕೆಗಳಿಗೆ ಭಾರಿ ಬೇಡಿಕೆ ಬಂದಿದೆ. ಪಟ್ಟಣದ ಹೊಸ ಬಸ್ ನಿಲ್ದಾಣದ ಮುಂಭಾಗ, ಕುಂಬಾರ ಓಣಿಯಲ್ಲಿ ಮಣ್ಣಿನ ಮಡಿಕೆಗಳ ಭರ್ಜರಿ ವ್ಯಾಪಾರ ನಡೆಯುತ್ತಿದೆ.

ಪ್ರತಿನಿತ್ಯ ಮಾರಾಟವಾಗುವ ಮಡಿಕೆಗಳೆಷ್ಟು?
20 ಲೀಟರ್‌ನಿಂದ 30 ಲೀಟರ್ ನೀರು ಸಂಗ್ರಹದ ಮಡಿಕೆಗಳನ್ನು ₹450ರವರೆಗೂ ಮಾರಾಟ ಮಾಡಲಾಗುತ್ತಿದೆ. 10 -15 ಲೀಟರ್ ಮಡಿಕೆಗಳನ್ನು ₹200ರಿಂದ ₹350ರವರೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಸೂಗಪ್ಪ ಕುಂಬಾರ ಹೇಳಿದರು. ಕೆಂಪು ಮಣ್ಣಿನಲ್ಲಿ ಮಡಿಕೆಯನ್ನು ತಯಾರಿಸಲಾಗುತ್ತದೆ. ಈ ಮಡಿಕೆಗಳಲ್ಲಿ ನೀರು ಇಟ್ಟರೆ ತಣ್ಣಗೆ ಇರುತ್ತದೆ. ಹೆಚ್ಚಿನ ಜನರು ಮಣ್ಣಿನ ಮಡಿಕೆಗಳ ಮೊರೆ ಹೋಗುತ್ತಿದ್ದಾರೆ. ಪ್ರತಿ ನಿತ್ಯ 20ರಿಂದ 25 ಮಡಿಕೆಗಳು ಮಾರಾಟವಾಗುತ್ತವೆ.
ಮನೆಯಲ್ಲಿ ತಯಾರಿಸಿದ ಮಡಿಕೆಗೆ ಹೆಚ್ಚು ಬೇಡಿಕೆ ಇದೆ. ಹಲವು ಆಧುನಿಕ ಶೈಲಿಯ ಮಡಿಕೆಗಳನ್ನು ಕಲಬುರಗಿಯಿಂದ ತಂದು ಮಾರಾಟ ಮಾಡಲಾಗುತ್ತಿದೆ. ಸಾರಿಗೆ ವೆಚ್ಚ ತೆಗೆದು ಒಂದು ಮಡಿಕೆಗೆ ₹50ರಿಂದ ₹100 ಉಳಿಯುತ್ತದೆ ಎಂದು ಹೇಳಿದರು. ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ಜನರು ಕೂಡ ಇಲ್ಲಿಂದಲೇ ಮಡಿಕೆ ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದರು.












Click it and Unblock the Notifications