ರಾಯಚೂರಿನಲ್ಲಿ ನಕಲಿ ನೋಟುಗಳ ಕಾರುಬಾರು: ವ್ಯಾಪಾರಸ್ಥರು ಹೈರಾಣು
ರಾಯಚೂರು, ನವೆಂಬರ್ 13: ರಾಯಚೂರು ಜಿಲ್ಲೆಯಲ್ಲಿ ನಕಲಿ ನೋಟುಗಳದ್ದೇ ಕಾರುಬಾರು. ಈ ಖೋಟಾನೋಟುಗಳು ಬಡ ಜನರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ . ದಿನಕ್ಕೆ ದುಡಿಯುವುದೇ 200, 300ರೂಪಾಯಿ, ಅದರಲ್ಲಿ ಒಂದು ಖೋಟಾನೋಟು ಬಂದರೆ ಮಾಡುವುದಾದರೂ ಏನು ಎನ್ನುವುಸು ರಾಯಚೂರು ವ್ಯಾಪಾರಸ್ಥರ ಅಳಲಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಈ ಒಂದು ಖೋಟಾನೋಟುಗಳ ಹಾವಳಿ ಮಿತಿಮೀರಿ ಹೋಗಿದೆ. ಇತ್ತೀಚಿಗೆ ರಾಯಚೂರು ನಗರದಲ್ಲಿಯೂ ಕೂಡ ಇದರ ಹಾವಳಿ ಹೆಚ್ಚಾಗಿದೆ. ನಗರದ ಪ್ರಮುಖ ಜನದಟ್ಟಣೆ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು, ಖೋಟಾನೋಟುಗಳನ್ನು ಚಲಾವಣೆ ಮಾಡುತ್ತಿದ್ದಾರೆ.

ಅಕ್ರಮ ನೋಟು ಚಲಾವಣೆ ಮಾಡುವವರ ಟಾರ್ಗೆಟ್, ನಗರದ ಎಪಿಎಂಸಿ ಗಂಜ್, ತರಕಾರಿ ವ್ಯಾಪಾರಸ್ಥರು ಮತ್ತು ಕಲೆಕ್ಷನ್ ಮಾಡುವ ಹುಡುಗರು. ನಗರದ ತರಕಾರಿ ಮಾರುಕಟ್ಟೆಯಲ್ಲಿ ಬೆಳಿಗ್ಗೆ ನಡೆಯುವ ಹೋಲ್ಸೇಲ್ ಮಾರಾಟದಲ್ಲಿ ಖೋಟಾ ನೋಟುಗಳು ಪತ್ತೆಯಾಗಿವೆ. ನಿನ್ನೆಯಷ್ಟೇ ರಜನಿಕಾಂತ್ ರೆಡ್ಡಿ ಎಂಬುವ ಕೂಲ್ ಡ್ರಿಂಕ್ಸ್ ಮಾಲೀಕರಿಗೂ ಈ ಒಂದು ಖೋಟಾನೋಟು ಪತ್ತೆಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನು ಖೋಟಾನೋಟು ರಾಯಚೂರು ನಗರದಲ್ಲಿ ಅಕ್ರಮವಾಗಿ ವಹಿವಾಟುಗುತ್ತಿರುವ ಬಗ್ಗೆ ಸಂಬಂಧ ಪಟ್ಟ ಬ್ಯಾಂಕುಗಳಾಗಲಿ, ಪೊಲೀಸ್ ಇಲಾಖೆಗಳಾಗಲಿ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಮತ್ತು ಜಾಗೃತಿ ಮೂಡಿಸುವ ಕೆಲಸಗಳು ಕೂಡ ಮಾಡುತ್ತಿಲ್ಲ. ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ಬ್ಯಾಂಕಿನವರು ಆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ, ಒಂದು ವೇಳೆ ಹಾಗೆ ಮಾಹಿತಿ ಬಂದರೆ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ.

ಇದರಿಂದ ಸಾರ್ವಜನಿಕರು ಸಣ್ಣ ಪುಟ್ಟ ವ್ಯಾಪಾರಸ್ಥರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ದುಡಿಯುವ ನೂರು ಇನ್ನೂರು ರೂಪಾಯಿಯಲ್ಲಿ, ಇಂತಹ ಖೋಟಾನೋಟುಗಳು ಬಂದರೆ ಸಾಕಷ್ಟು ಸಮಸ್ಯೆಯಾಗುತ್ತದೆ ಎಂದು ಸ್ಥಳೀಯ ವ್ಯಾಪರಸ್ಥರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಅಕ್ರಮವಾಗಿ ಇಂತಹ ದಂಧೆ ಮಾಡುವವರು ಕಂತೆ ಕಂತೆ ನೋಟಿನ ಮಧ್ಯದಲ್ಲಿ ಒಂದಷ್ಟು ಕೋಟ ನೋಟುಗಳನ್ನು ಸೇರಿಸುತ್ತಾರೆ. ತರಕಾರಿ ವ್ಯಾಪಾರ ಮಾಡುವ ವ್ಯಾಪಾರಸ್ಥರಲ್ಲಿ ಹೋಗಿ ಖೋಟಾ ನೋಟುಗಳ ಚಲಾವಣೆ ಮಾಡಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಂಡು ಈ ಒಂದು ಅಕ್ರಮ ಖೋಟಾನೋಟು ದಂಧೆಯನ್ನು ತಡೆಯಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.












Click it and Unblock the Notifications