ಸ್ಕೂಲ್‌ಗೆ ಚಕ್ಕರ್, ಕೂಲಿಗೆ ಹಾಜರ್! ರಾಯಚೂರಿನಲ್ಲಿ ಎಲ್ಲಿಗೆ ಬಂತು ನೋಡಿ ಮಕ್ಕಳ ಶಿಕ್ಷಣ....
ರಾಯಚೂರು ಫೆಬ್ರವರಿ 6: ಶಾಲೆಯಲ್ಲಿ ಓದುತ್ತಾ, ಆಟವಾಡಿಕೊಂಡಿರಬೇಕಾದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತೀವ್ರ ಬರಗಾಲ ಹಿನ್ನೆಲೆ ಬುತ್ತಿ, ನೀರಿನ ಬಾಟಲಿಯೊಂದಿಗೆ ದೊಡ್ಡವರಂತೆಯೇ ಸೊಂಟಕ್ಕೆ ಚೀಲ, ತಲೆಗೆ ಬಟ್ಟೆ ಕಟ್ಟಿಕೊಂಡು ಕೂಲಿ ಕೆಲಸಕ್ಕಾಗಿ ನಿತ್ಯ ಗೂಡ್ಸ್ ವಾಹನದದಲ್ಲಿ ಜೋಳ ಕಣ ಮಾಡಲು ಹೋಗುತ್ತಿದ್ದಾರೆ.
ಜಿಲ್ಲೆಯಲ್ಲಿ 2023-24 ನೇ ಸಾಲಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ 4,18,322 ಮಕ್ಕಳು ದಾಖಲಾಗಿದ್ದಾರೆ. ಆದರೆ, ಬರಗಾಲ ಆವರಿಸಿರುವುದರಿಂದ ರೈತರು ನಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ, ಸಾಲ ತೀರಿಸಲು ಪಾಲಕರು ಮಕ್ಕಳನ್ನು ಶಾಲೆ ಬಿಡಿಸಿ, ಕೂಲಿ ಕೆಲಸಕ್ಕೆ ಕಳುಹಿಸುತ್ತಿದ್ದಾರೆ.

ಕಳೆದ ಜೂನ್‌ನಿಂದ 2024 ರ ಜನವರಿ ಅಂತ್ಯದವರೆಗೆ ಸುಮಾರು 2000 ಮಕ್ಕಳು ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ತೆರಳುತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. 2022 ರಿಂದ 24 ರ ವರೆಗೆ ಜಮೀನು, ಹೋಟೆಲ್, ಗ್ಯಾರೇಜ್ ಸೇರಿ ನಾನಾ ಸ್ಥಳಗಳಲ್ಲಿ ಕೆಲಸ ಮಾಡುವ ಕೇವಲ 14 ಪ್ರಕರಣಗಳನ್ನು ಮಾತ್ರ ದಾಖಲು ಮಾಡಿ, 28 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.
2022-23 ರಲ್ಲಿ ಮೂರು ಪ್ರಕರಣಗಳ ಪೈಕಿ ಐದು ಮಕ್ಕಳು, 2023-24 ರಲ್ಲಿ 11 ಪ್ರಕರಣಗಳ ಪೈಕಿ 23 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಸ್ಥಳೀಯವಾಗಿ ಕಡಿಮೆ ಕೂಲಿಗೆ ದೊರೆಯುವ ಮಕ್ಕಳನ್ನೇ ಜಮೀನುಗಳ ಮಾಲೀಕರ ಅಥವಾ ಗುತ್ತಿಗೆ ಪಡೆದಿರುವ ರೈತರು ಎದರು ನೋಡುತ್ತಾರೆ. ದೊಡ್ಡವರಿಗೆ ಹೆಚ್ಚಿನ ಕೂಲಿ ನೀಡುವ ಬದಲು, ಮಕ್ಕಳಿಗೆ 100 ರಿಂದ 150 ರೂ. ನೀಡಿ ದುಡಿಸಿಕೊಳ್ಳುತ್ತಿದ್ದಾರೆ.
ಕೂಲಿಗಾಗಿ ಮಕ್ಕಳು ಗಂಜಳ್ಳಿ, ಹನುಮಾನದೊಡ್ಡಿ, ಕೊರ್ವಿಹಾಳ್, ಸಗಮಕುಂಟಾ, ಇಬ್ರಾಹಿಂದೊಡ್ಡಿ ಸೀಮಾಂತರದ ಹೊಲಗಳಿಗೆ ತೆರಳುತ್ತಿದ್ದಾರೆ. ನಿರಂತರ ಒಂದು ವಾರ ಮಕ್ಕಳು ಶಾಲೆಗೆ ಬಾರದಿದ್ದರೆ ಶಿಕ್ಷಕರು ಮಕ್ಕಳ ಬಗ್ಗೆ ಮಾಹಿತಿ ಪಡೆಯಬೇಕು. ಶಾಲೆಗೆ ಚಕ್ಕರ್ ಹಾಕಲು ಕಾರಣವೇನು ಎಂಬುದನ್ನು ಪತ್ತೆ ಮಾಡಬೇಕು. ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಕೌಟುಂಬಿಕ ಸಮಸ್ಯೆ ಇದ್ದಲ್ಲಿ ಅದನ್ನು ಹೋಗಲಾಡಿಸಲು ಪ್ರಯತ್ನಿಸಬೇಕು ಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪಾಲಕರಿಗೆ ತಿಳಿಹೇಳಬೇಕು. ಆದರೆ, ಈ ಬಗ್ಗೆ ಶಾಲೆಗಳ ಮುಖ್ಯ ಶಿಕ್ಷಕರು ಆಸ್ಥೆ ವಹಿಸಿದ ಕಾರಣ ಶಾಲೆ ಬಿಟ್ಟ ಅನೇಕ ಮಕ್ಕಳು ಜಮೀನುಗಳಲ್ಲಿ ಕೆಲಸ ಮಾಡುವಂತಾಗಿದೆ.

ಮಕ್ಕಳು ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ತೆರಳಿದರೆ, ಆ ಶಾಲೆಯ ಶಿಕ್ಷಕರು ಮಕ್ಕಳ ಮನೆಗೆ ತೆರಳಿ ಪೋಷಕರಿಗೆ ಮನವರಿಕೆ ಮಾಡಿ ಶಾಲೆಗೆ ಕರೆ ತರುವ ಕೆಲಸ ಮಾಡುತ್ತಿದ್ದಾರೆ. 14 ವರ್ಷದೊಳಗಿನ ಮಕ್ಕಳನ್ನು ಕೂಲಿ ಕೆಲಸಕ್ಕೆ ಸೇರಿಸಿಕೊಂಡರೆ ಅಂತಹವರ ವಿರುದ್ಧ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ರಾಯಚೂರು ಡಿಡಿಪಿಐ ಕೆ.ಡಿ.ಬಡಿಗೇರ ಹೇಳಿದರು.












Click it and Unblock the Notifications