ಹಟ್ಟಿ ಚಿನ್ನದ ಗಣಿಯಲ್ಲಿ ಕಲ್ಲಿನ ಗ್ರಂಥಾಲಯ: ಏನಿದರ ವಿಶೇಷ..?
ರಾಯಚೂರಿನ ಹಟ್ಟಿ ಚಿನ್ನದ ಗಣಿಯಲ್ಲಿ ಕಲ್ಲಿನ ಗ್ರಂಥಾಲಯವಿದೆ. ಕಲ್ಲಿನ ಗ್ರಂಥಾಲಯದಲ್ಲಿ ಯಾವ ವರ್ಷ, ಯಾವ ಸ್ಥಳದಲ್ಲಿ, ಎಷ್ಟು ಆಳದಲ್ಲಿ ಸಂಶೋಧನೆ, ಅದಿರು ಉತ್ಪಾದನೆ ನಡೆಸಲಾಯಿತು ಎನ್ನುವುದರ ಸವಿಸ್ತಾರ ಮಾಹಿತಿ ಇದೆ.
ರಾಯಚೂರು ಜನವರಿ 30: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನದಗಣಿ ಗಣಿಗಾರಿಕೆ, ಖನಿಜಾಂಶ ಅಧ್ಯಯನ, ಸಂಶೋಧನಾ ಕಾರ್ಯಗಳಿಗೆ ಮಾರ್ಗದರ್ಶಿಯಾಗಿರುವ ಹಾಗೂ ವಿವಿಧ ರೀತಿಯ ಕಲ್ಲುಗಳ ಸಂಗ್ರಹವಿರುವ 'ಕೋರ್ ಗ್ರಂಥಾಲಯ'(ಕಲ್ಲಿನ ಗ್ರಂಥಾಲಯ) ರಾಜ್ಯದ ಏಕೈಕ ಗ್ರಂಥಾಲಯವಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಕಲ್ಲಿನ ಗ್ರಂಥಾಲಯವನ್ನು ಹಟ್ಟಿ ಚಿನ್ನದ ಗಣಿ ಕಂಪನಿ ಆಡಳಿತ ಮಂಡಳಿಯು, 2011ರಲ್ಲಿ ಕಚೇರಿಯ ಹಿಂದಿರುವ ಅರ್ಧ ಎಕರೆಯಷ್ಟು ಪ್ರದೇಶದಲ್ಲಿ ನಿರ್ಮಿಸಿದೆ.
ಗಣಿಗಾರಿಕೆ ಕುರಿತು ಸಂಶೋಧನೆ ಹಾಗೂ ಡ್ರಿಲ್ಲಿಂಗ್ ನಡೆಸುವ ಕೇಂದ್ರ ಸರ್ಕಾರದ ಎಂಇಸಿಎಲ್, ಜಿಎಸ್ಐ ಸೇರಿ ಹಲವು ಇಲಾಖೆಗಳಿಗೆ ಗಣಿಗಾರಿಕೆ ವಿಸ್ತರಣೆ, ಚಿನ್ನ ಸೇರಿ ಹಲವು ಅದಿರುಗಳ ಪತ್ತೆಯ ಅಧ್ಯಯನಕ್ಕೆ ಸಹಕಾರಿಯಾಗಲಿದೆ. ಕಲ್ಲಿನ ಗ್ರಂಥಾಲಯದಲ್ಲಿ ಯಾವ ವರ್ಷ, ಯಾವ ಸ್ಥಳದಲ್ಲಿ, ಎಷ್ಟು ಆಳದಲ್ಲಿ ಸಂಶೋಧನೆ, ಅದಿರು ಉತ್ಪಾದನೆ ನಡೆಸಲಾಯಿತು. ವರ್ಷಾನುಸಾರ ಅದಿರು ಉತ್ಪಾದನೆ, ಉತ್ಪಾದನೆ ವೆಚ್ಚ ಹಾಗೂ ಅದಿರಿನ ಬೆಲೆ ಕುರಿತು ಸವಿಸ್ತಾರ ಮಾಹಿತಿಯನ್ನು ನೀಡಿದೆ. ಕಂಪನಿಯ ಅನ್ವೇಷಣೆ ವಿಭಾಗದಿಂದ ಸ್ಥಾಪಿಸಲಾಗಿರುವ ಕಲ್ಲಿನ ಗ್ರಂಥಾಲಯವು, ಸಂಶೋಧನೆ ಕಾರ್ಯಗಳಿಗೆ ದಾರಿದೀಪವಾಗಲಿದೆ ಎಂದು ಹಟ್ಟಿ ಚಿನ್ನದ ಗಣಿ ಸಂಸ್ಥೆ ತಿಳಿಸಿದೆ.

1900ಕ್ಕೂ ಮುಂಚೆ ಸಮೀಪದ ವಂದಲಿ ಹೊಸೂರು ಗಣಿಗಾರಿಕೆ ಅದಿರು ಸೇರಿದಂತೆ ತೆರೆದ ಗಣಿಗಾರಿಕೆಯಿಂದ 3 ಸಾವಿರ ಅಡಿ ಆಳದವರೆಗೆ ನಡೆಸುತ್ತಿರುವ ಕಂಪನಿ ಗಣಿಗಾರಿಕೆಯ ಕಲ್ಲಿನ ಮಾದರಿಯ ದಾಸ್ತಾನು ಇರುವುದರಿಂದ ಖನಿಜ ನಿಕ್ಷೇಪಗಳ ವ್ಯವಸ್ಥಿತ ಪರಿಶೋಧನೆ, ಖನಿಜಗಳ ಅಭಿವೃದ್ಧಿ ಮತ್ತು ಸಂರಕ್ಷಣೆ, ಕಲ್ಲು ಆಧಾರಿತ ಯುರೇನಿಯಂ, ಟಂಗಸ್ಟನ್, ಚಿನ್ನ, ತಾಮ್ರ ಸೇರಿ ಖನಿಜ ಆಧಾರಿತ ಚಟುವಟಿಕೆಗಳ ಮತ್ತು ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನಕ್ಕೆ ಸಹಾಯಕಾರಿಯಾಗಲಿದೆ.
ರಾಜ್ಯದಲ್ಲಿರುವ ಏಕೈಕ ಕಲ್ಲಿನ ಗಣಿಗಾರಿಕೆ ಬಹುಉಪಯುಕ್ತವಾಗಿದೆ. ಇಲಾಖಾವಾರು ಸಂಶೋಧನೆ-ಉತ್ಪಾದನೆಗೆ ಮಾತ್ರವಲ್ಲದದೇ ಪ್ರವಾಸಿಗರಿಗೆ, ಗಣಿಗಾರಿಕೆ ಕುರಿತು ಗ್ರಂಥ ರಚನಾಕಾರರಿಗೆ ಉಪಯುಕ್ತವಾಗಿದೆ. ಕಂಪನಿ ಉತ್ಪಾದನೆ ಜೊತೆಗೆ ಮುಂದಿನ ಪೀಳಿಗೆಗೂ ಸೇತುವೆಯಾಗುವ ಗ್ರಂಥಾಲಯ ಸೇರಿ ಗಣಿ ವೃತ್ತಿ ತರಬೇತಿ ಕೇಂದ್ರ ಹಾಗೂ ರಾಜ್ಯದ ಏಕೈಕ ಪಾರುಗಣಿಕಾ ಘಟಕ ಕುರಿತು ತಿಳಿದು ಸದುಪಯೋಗ ಪಡಿಸಿಕೊಳ್ಳಬೇಕು ಎನ್ನುವುದು ಹಟ್ಟಿ ಚಿನ್ನದ ಗಣಿ ಕಂಪನಿಯ ಆಶಯವಾಗಿದೆ.

2011ರಲ್ಲಿ ಕಲ್ಲಿನ ಗ್ರಂಥಾಲಯ ಸ್ಥಾಪಿಸಲಾಗಿದೆ. ವಿವಿಧ ಪ್ರದೇಶಗಳಲ್ಲಿ ನಡೆಸಿದ ಕಲ್ಲು ಗಣಿಗಾರಿಕೆ ಮಾದರಿಯನ್ನು ಅಧ್ಯಯನ ಮಾಡಿ ಮುಂದಿನ ಪೀಳಿಗೆಗೆ ಗಣಿಗಾರಿಕೆ ವಿಸ್ತರಣೆ, ಸ್ಥಾಪನೆ, ಮರುಉತ್ಪಾದನೆ ಸೇರಿದಂತೆ ವಿವಿಧ ಬಗೆಯ ಸಂಶೋಧನೆಗೆ ಸಹಕಾರಿಯಾಗಲಿದೆ ಎಂದು ಹಟ್ಟಿ ಚಿನ್ನದ ಗಣಿ ಕಂಪನಿ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ್ ಬಹದ್ದೂರ್ ಹೇಳಿದರು.












Click it and Unblock the Notifications