ಶಿವಸೇನಾ ಸಚಿವರ ನಿವಾಸಕ್ಕೆ ಏಡಿಗಳನ್ನು ಬಿಟ್ಟ ಪ್ರತಿಭಟನಾಕಾರರು
ಪುಣೆ, ಜುಲೈ 9: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಅಣೆಕಟ್ಟು ಒಡೆದು ಸುಮಾರು 18 ಜನರು ಸಾವನ್ನಪ್ಪಿದ ಘಟನೆಗೆ ಏಡಿಗಳೇ ಕಾರಣ ಎನ್ನುವ ಮೂಲಕ ತೀವ್ರ ಟೀಕೆಗೆ ಒಳಗಾಗಿದ್ದ ಶಿವಸೇನಾದ ಸಚಿವ ತಾನಾಜಿ ಸಾವಂತ್ ಅವರ ನಿವಾಸಕ್ಕೆ ಎನ್‌ಸಿಪಿ ಕಾರ್ಯಕರ್ತರು ಏಡಿಗಳನ್ನು ಎಸೆದು ಪ್ರತಿಭಟನೆ ನಡೆಸಿದರು.
ಮಹಾರಾಷ್ಟ್ರ ಬಿಜೆಪಿ-ಶಿವಸೇನಾ ಸರ್ಕಾರದ ಜಲ ಸಂರಕ್ಷಣೆಯ ಸಚಿವ ತಾನಾಜಿ ಅವರ ವಿರುದ್ಧ ಪ್ರತಿಭಟನೆಯ ದ್ಯೋತಕವಾಗಿ ಏಡಿಗಳು ಹಾಗೂ ಅಣೆಕಟ್ಟು ಒಡೆದ ಚಿತ್ರವಿರುವ ಬ್ಯಾನರ್ ಅಂಟಿಸಿಕೊಂಡು ಬಂದಿದ್ದ ಎನ್‌ಸಿಪಿ ಕಾರ್ಯಕರ್ತರು, ಟ್ರೇ ಒಂದರಲ್ಲಿ ಏಡಿಗಳನ್ನು ತುಂಬಿಸಿಕೊಂಡು ತಂದಿದ್ದರು.
ತಾನಾಜಿ ಅವರ ಮನೆಯ ಮುಂದೆ ಟ್ರೇನಲ್ಲಿದ್ದ ಏಡಿಗಳನ್ನು ಚೆಲ್ಲಿ ಅವರು ಅಲ್ಲಿಂದ ತೆರಳಿದರು. ವಿವಿಧೆಡೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

ಕಳೆದ ವಾರ ರತ್ನಗಿರಿ ಜಿಲ್ಲೆಯಲ್ಲಿ ತಿವಾರೆ ಡ್ಯಾಂ ಒಡೆದು 18 ಜನರು ಪ್ರಾಣ ಕಳೆದುಕೊಂಡಿದ್ದರು. ಈ ಸಂದರ್ಭದಲ್ಲಿ ಘಟನೆಗೆ ಏಡಿಗಳೇ ಕಾರಣ ಎಂದು ತಾನಾಜಿ ಅವರು ಹಾಸ್ಯಾಸ್ಪದ ಹೇಳಿಕೆ ನೀಡಿದ್ದರು. ಏಡಿಗಳು ಅಣೆಕಟ್ಟೆಯ ಗೋಡೆಯನ್ನು ಕೊರೆದಿದ್ದರಿಂದ ಬಿರುಕು ಉಂಟಾಗಿ ಈ ಅವಘಡ ಉಂಟಾಗಿದೆ ಎಂದು ದೂರಿದ್ದರು.
ಇದು ತೀವ್ರ ಟೀಕೆಗೆ ಒಳಗಾಗಿತ್ತು. ಸಾವಂತ್ ಅವರ ಹೇಳಿಕೆ ಬಳಿಕ ಥಾಣೆಯ ಎನ್‌ಸಿಪಿ ನಾಯಕರೊಬ್ಬರು ಒಂದಷ್ಟು ಏಡಿಗಳನ್ನು ಹಿಡಿದು ಪೊಲೀಸರಿಗೆ ನೀಡಿದ್ದರು. ಅವುಗಳನ್ನ ಬಂಧಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದರು.
ಮಂಗಳವಾರ ಪುಣೆಯಲ್ಲಿ ಪ್ರತಿಭಟನೆ ನಡೆಸಿದ ಎನ್‌ಸಿಪಿ ಘಟಕದ ಸದಸ್ಯರು ಏಡಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸುವ ಮೂಲಕ ಸಚಿವರನ್ನು ಅಣಕಿಸಿದರು.
ವಿಡಿಯೋ ವೀಕ್ಷಿಸಲು ಈ ಕೊಂಡಿ ಕ್ಲಿಕ್ ಮಾಡಿ












Click it and Unblock the Notifications