ಬಿಜೆಪಿ ತೊರೆದ ಶಾಸಕ ಅನಿಲ್ ಈಗ ಲೋಕಸಭಾ ಕ್ಷೇತ್ರದ ಸ್ಪರ್ಧೆ
ಪುಣೆ, ಏಪ್ರಿಲ್ 10: ಧುಲೆ ನಗರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿ ಶಾಸಕರಾಗಿ ಆಯ್ಕೆಗೊಂಡಿದ್ದ ಅನಿಲ್ ಅಣ್ಣ ಗೊತೆ ಅವರು ಶಾಸಕ ಸ್ಥಾನ ತೊರೆದು ಸಂಸದನಾಗಲು ಹೊರಟ್ಟಿದ್ದಾರೆ.
ನಕಲಿ ಛಾಪಾ ಕಾಗದ ಹಗರಣದ ರೂವಾರಿ ಕರ್ನಾಟಕದ ಅಬ್ದುಲ್ ಕರೀಂ ತೆಲಗಿ ಜತೆ ಸಂಪರ್ಕ ಹೊಂದಿದ್ದ ಕಾರಣಕ್ಕೆ 2003ರಲ್ಲಿ ಅನಿಲ್ ಅವರನ್ನು ಬಂಧಿಸಿ ಯೆರವಾಡ ಜೈಲಿನಲ್ಲಿರಿಸಲಾಗಿತ್ತು. 2007ರಲ್ಲಿ ಜೈಲಿನಿಂದ ಬಿಡುಗಡೆಗೊಂಡರು. ತಮ್ಮ ಮೇಲಿನ ಆರೋಪಗಳಿಂದ ಮುಕ್ತರಾಗಲು 2014ರ ತನಕ ಕಾನೂನು ಹೋರಾಟ ಮುಂದುವರೆಸಿದರು.
ಮಹಾರಾಷ್ಟ್ರ ವಿಧಾನಸಭೆಗೆ 2009ರಲ್ಲಿ ಪಕ್ಷೇತರರಾಗಿ ಹಾಗೂ 2014ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಆದರೆ, ಬಿಜೆಪಿ ಜತೆ ಭಿನ್ನಮತ ಉಲ್ಬಣಗೊಂಡಿದ್ದರಿಂದ ರಾಜೀನಾಮೆ ನೀಡಿ, ಲೋಕಸಭೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಧುಲೆ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದೇ ಕ್ಷೇತ್ರದಿಂದ ಬಿಜೆಪಿ ಹಾಲಿ ಸಂಸದ ಸುಭಾಷ್ ಭಾಮರೆ ಅವರು ಸ್ಪರ್ಧಿಸುತ್ತಿದ್ದಾರೆ. ಏಪ್ರಿಲ್ 29ರಂದು ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರ ಬರಲಿದೆ.

ಹಾಲಿ ಸಂಸದ ಸುಭಾಷ್ ಅವರು ಧುಲೆ ಕ್ಷೇತ್ರಕ್ಕೆ ಸರಿಯಾದ ಅನುದಾನ ಒದಗಿಸಿಲ್ಲ ಎಂದು ಅನೇಕ ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಲ್ಲದೆ, ಎನ್ಸಿಪಿಯಿಂದ ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗುತ್ತಿದೆ ಎಂದು ಪ್ರತಿಭಟಿಸಿದ್ದರು.












Click it and Unblock the Notifications